ಬೆಕ್ಕರೆ ಸತೀಶ್‌ ಆರಾಧ್ಯ

ಪಿರಿಯಾಪಟ್ಟಣ [ಸೆ.12]:  ಇತ್ತೀಚೆಗೆ ಬಿದ್ದ ಭಾರಿ ಮಳೆ ಹಾಗೂ ನೆರೆ ಹಾವಳಿ ಸಂದರ್ಭ ಮೈಸೂರು ಹಾಗೂ ಕೊಡಗು ಜಿಲ್ಲೆ ಗಡಿ ಭಾಗದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಕಣಿವೆ ಸೇತುವೆ ಎಂದೇ ಪ್ರಸಿದ್ಧಿ ಹೊಂದಿದ್ದ ತೂಗು ಸೇತುವೆ ಶಿಥಿಲಾವಸ್ಥೆ ತಲುಪಿದೆ.

ಕಾವೇರಿ ನದಿಯ ಮೇಲೆ ಅಡ್ಡಲಾಗಿ ಮಲೆನಾಡು ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಸುಮಾರು ಹತ್ತು ವರ್ಷಗಳ ಹಿಂದೆ ನಿರ್ಮಿಸಿದ್ದ ಈ ತೂಗು ಸೇತುವೆಯಿಂದ ಮೈಸೂರು ಹಾಗೂ ಕೊಡಗು ಜಿಲ್ಲೆಗಳ ಗಡಿ ಭಾಗದ ಗ್ರಾಮಸ್ಥರು ಬಹಳ ಅನುಕೂಲವಾಗಿ ಕಿಲೋಮೀಟರ್‌ಗಟ್ಟಲೆ ದೂರ ಕ್ರಮಿಸುವುದು ಕಡಿಮೆಯಾಗಿತ್ತು,

ಮೈಸೂರು ಜಿಲ್ಲೆ ಗಡಿ ಭಾಗದ ದೊಡ್ಡಕಮರವಳ್ಳಿ, ಚಿಕ್ಕಕಮರವಳ್ಳಿ, ಶಾನುಭೋಗನಹಳ್ಳಿ, ದಿಂಡಗಾಡು, ಮರಟಿಕೊಪ್ಪಲು ಸೇರಿದಂತೆ ಸುಮಾರು ಹತ್ತಕ್ಕೂ ಹೆಚ್ಚು ಗ್ರಾಮಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಸೇತುವೆಯ ಮುಖಾಂತರ ಪ್ರತಿನಿತ್ಯ ಕೊಡಗಿನ ಕುಶಾಲನಗರ, ಸೋಮವಾರಪೇಟೆ, ಹೆಬ್ಬಾಲೆ, ಕೂಡಿಗೆ ಶಿರಂಗಾಲ, ಗ್ರಾಮಗಳಿಗೆ ತೆರಳುತ್ತಿದ್ದರು, ಅಂತೆಯೇ ಪ್ರತಿನಿತ್ಯ ನೂರಾರು ಕೂಲಿ ಕಾರ್ಮಿಕರು ಕೂಡಿಗೆ ಕೈಗಾರಿಕಾ ಪ್ರದೇಶದ ವಿವಿಧ ಕಾರ್ಖಾನೆಗಳಿಗೆ ತೆರಳಿ ಕಾರ್ಯನಿರ್ವಹಿಸುತ್ತಿದ್ದರು, ಈಚೆಗೆ ಬಿದ್ದ ಭಾರೀ ಮಳೆಯ ಸಂದರ್ಭ ತೂಗು ಸೇತುವೆ ಮುಳುಗಡೆಯ ಮಟ್ಟಕ್ಕೆ ನೀರು ತುಂಬಿ ಅಪಾಯದ ಸ್ಥಿತಿ ತಲುಪಿ ಸಂಪರ್ಕ ಕಡಿತಗೊಂಡಿತ್ತು, ಇದರಿಂದ ಪ್ರತಿನಿತ್ಯ ಈ ಸೇತುವೆಯನ್ನು ಅವಲಂಬಿಸಿದ್ದವರು ಹತ್ತಾರು ಕಿ.ಮೀ. ಗಟ್ಟಲೆ ಬಳಸಿ ತಮ್ಮ ಸ್ಥಳಗಳಿಗೆ ತೆರಳುವ ಸ್ಥಿತಿ ನಿರ್ಮಾಣವಾಗಿತ್ತು,

ಕಳೆದ ವರ್ಷದ ಮಳೆಗಾಲದಲ್ಲಿಯೂ ಕಾವೇರಿ ನದಿ ಪೂರ್ಣ ಭರ್ತಿಯಾಗಿದ್ದ ಸಂದರ್ಭ ತೂಗು ಸೇತುವೆಯು ಹಾನಿಯಾಗಿತ್ತು, ವಿಷಯ ತಿಳಿದ ಕೊಡಗಿನ ಶಾಸಕ ಎಂ.ಪಿ. ಅಪ್ಪಚ್ಚುರಂಜನ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಕೆಲ ದಿನಗಳಲ್ಲಿಯೇ ತೂಗು ಸೇತುವೆ ಅಭಿವೃದ್ಧಿಪಡಿಸಿದ್ದರು, ಈ ಬಾರಿಯೂ ಪ್ರವಾಹದಿಂದ ತೂಗು ಸೇತುವೆಯು ಎರಡು ಭಾಗದಲ್ಲಿ ಕಬ್ಬಿಣದ ಸಲಾಕೆಗಳು ಮುರಿದು ಸೇತುವೆಗೆ ಅಳವಡಿಸಿದ ಕಬ್ಬಿಣದ ಮೆಟ್ಟಿಲುಗಳು ನೀರಿನಲ್ಲಿ ಕೊಚ್ಚಿಹೋಗಿ ಸೇತುವೆ ದಾಟಲು ಹರಸಾಹಸ ಪಡಬೇಕಾಗಿದೆ.

ಈ ಬಾರಿಯೂ ನೆರೆ ಹಾವಳಿ ಸಂದರ್ಭ ತೂಗು ಸೇತುವೆ ಶಿಥಿಲಾವಸ್ಥೆ ತಲುಪಿರುವ ವಿಷಯ ಪತ್ರಿಕೆಗಳಲ್ಲಿ ಪ್ರಕಟವಾದ ನಂತರ ಕೊಡಗಿನ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಹಾಗೂ ಪಿರಿಯಾಪಟ್ಟಣ ಶಾಸಕ ಕೆ. ಮಹದೇವ್‌ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ತೂಗು ಸೇತುವೆ ದುರಸ್ತಿ ಪಡಿಸುವ ಭರವಸೆ ನೀಡಿದರಾದರೂ ಇಂದಿನವರೆಗೂ ಅಧಿಕಾರಿಗಳು ದುರಸ್ತಿಗೆ ಮುಂದಾಗದಿರುವುದು ಸ್ಥಳೀಯರ ಆಕ್ರೊಶಕ್ಕೆ ಕಾರಣವಾಗಿದೆ.

ಕೂಡಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತೂಗು ಸೇತುವೆ ದುರಸ್ತಿ ಕಾರ್ಯ ಕೈಗೊಂಡು ಗಡಿ ಭಾಗದ ಸಾರ್ವಜನಿಕರಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರತಿನಿತ್ಯ ನೂರಾರು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಸಂಚರಿಸುತ್ತಿದ್ದ ಸೇತುವೆ ಶಿಥಿಲಾವಸ್ಥೆ ತಲುಪಿರುವುದರಿಂದ ಆಕಸ್ಮಿಕ ಅನಾಹುತಗಳು ಸಂಭವಿಸುವ ಮುನ್ನ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ತೂಗು ಸೇತುವೆ ದುರಸ್ತಿ ಕಾರ್ಯ ಕೈಗೊಂಡು ಸ್ಥಳೀಯರ ಸಂಚಾರಕ್ಕೆ ಅನುವು ಮಾಡಿಕೊಡಬೇಕು, ತೂಗು ಸೇತುವೆ ಸ್ಥಳ ಪ್ರವಾಸಿ ತಾಣವೂ ಆಗಿರುವುದರಿಂದ ತಜ್ಞರ ಮುಖಾಂತರ ದುರಸ್ತಿ ಪಡಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು.

. ಲಕ್ಷ್ಮೇನಾರಾಯಣ, ಶಾನುಭೋಗನಹಳ್ಳಿ ಗ್ರಾಮದ ಮುಖಂಡ.

ಕಾವೇರಿ ನದಿಯಲ್ಲಿ ನೀರಿನ ಮಟ್ಟಕಡಿಮೆಯಾದ ನಂತರ ಮತ್ತೆ ಸಂಪರ್ಕ ಸಾಧ್ಯವಾದರೂ ಸಹ ಸೇತುವೆ ಮೇಲ್ಭಾಗದ ಚಾವಡಿಗಳು ಹಲವೆಡೆ ಕಳಚಿ ಹೋಗಿವೆ ಮತ್ತು ಕಬ್ಬಿಣದ ಸರಳುಗಳು ಶಿಥಿಲಾವಸ್ಥೆ ತಲುಪಿರುವುದರಿಂದ ಸೇತುವೆ ಮುಖಾಂತರ ಸಂಚರಿಸುವವರು ಪ್ರಾಣಭಯದಿಂದ ಸೇತುವೆ ದಾಟುವ ದುಸ್ಥಿತಿ ನಿರ್ಮಾಣವಾಗಿದೆ.

ಕಣಿವೆಯ ಶ್ರಿ ರಾಮಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ನಿರ್ಮಾಣವಾಗಿದ್ದ ಈ ಸೇತುವೆ ಪ್ರವಾಸಿ ತಾಣವಾಗಿಯೂ ಮಾರ್ಪಟ್ಟು ಪ್ರತಿನಿತ್ಯ ನೂರಾರು ಪ್ರವಾಸಿಗರು ಸೇತುವೆಯ ಬಳಿ ಬಂದು ಫೋಟೋ ಕ್ಲಿಕ್ಕಿಸಿ ಸಂಭ್ರಮಿಸುತ್ತಿದ್ದರು, ಪ್ರಸ್ತುತ ಸೇತುವೆ ಸ್ಥಿತಿ ಕಂಡು ಪ್ರವಾಸಿಗರು ಸಹ ಶೀಘ್ರ ದುರಸ್ತಿ ಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.