ಬಳ್ಳಾರಿ(ನ.06): ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಹಂಪಿ ಉತ್ಸವ ಒಂದೇ ದಿನಕ್ಕೆ ಸೀಮಿತಗೊಳಿಸಲಾಗಿದ್ದು, ನವೆಂಬರ್‌ 13ರಂದು ಉತ್ಸವ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್‌ ಅವರು ಉತ್ಸವದ ದಿನಾಂಕವನ್ನು ಗುರುವಾರ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಮೂರು ದಿನಗಳ ಬದಲಿಗೆ ಒಂದು ದಿನ ಉತ್ಸವ ನಡೆಸಲಾಗುವುದು. ಉದ್ದಾನವೀರಭದ್ರೇಶ್ವರ ದೇವಸ್ಥಾನದಿಂದ ವಿರೂಪಾಕ್ಷೇಶ್ವರ ದೇವಸ್ಥಾನದವರೆಗೆ ಶೋಭಾಯಾತ್ರೆ ನಡೆಯಲಿದೆ. ವಿವಿಧ ಜನಪದ ಕಲಾ ತಂಡಗಳು ಭಾಗವಹಿಸಲಿವೆ. ಬಳಿಕ ವಿರೂಪಾಕ್ಷೇಶ್ವರ ದೇವಸ್ಥಾನದ ಬಳಿ ಹರಿಯುವ ತುಂಗಭದ್ರಾ ನದಿಯ ತಟದಲ್ಲಿ ‘ತುಂಗಾ ಆರತಿ’ ನಡೆಯಲಿದೆ. ನಾಲ್ಕೈದು ತಾಸಿನೊಳಗೆ ಉತ್ಸವ ಪೂರ್ಣಗೊಳ್ಳಲಿದೆ. ವೇದಿಕೆ ಕಾರ್ಯಕ್ರಮ ಇರುವುದಿಲ್ಲ. ಆದಷ್ಟುಕಡಿಮೆ ಜನರನ್ನು ಸೇರಿಸಿ ಸಾಂಕೇತಿಕವಾಗಿ ಉತ್ಸವ ನಡೆಸಲಾಗುವುದು. ಜನಪದ ಕಲಾ ತಂಡಗಳ ಮೆರವಣಿಗೆಯಲ್ಲಿ ಜಿಲ್ಲೆಯ ಕಲಾವಿದರು ಪಾಲ್ಗೊಳ್ಳಲಿದ್ದಾರೆ.

ಸೊನ್ನೆಯತ್ತ ಸಾಗಿವೆ ಕೊರೋನಾ ಪಾಸಿಟಿವ್‌ ಪ್ರಕರಣಗಳು...!

ಹಂಪಿ ಉತ್ಸವ ಒಂದು ದಿನಕ್ಕೆ ಸೀಮಿತಗೊಳಿಸಿದ್ದರಿಂದ ಉತ್ಸವ ಕಣ್ತುಂಬಿಕೊಳ್ಳಲು ಕಾತರರಾಗಿದ್ದ ಉತ್ಸವಪ್ರಿಯರು ಹಾಗೂ ಪ್ರತಿವರ್ಷ ವೇದಿಕೆಯ ಅವಕಾಶ ಪಡೆದುಕೊಳ್ಳುತ್ತಿದ್ದ ಜಿಲ್ಲೆಯ ಕಲಾವಿದರಿಗೆ ನಿರಾಸೆ ಮೂಡಿಸಿದೆ.

ನವೆಂಬರ್‌ 13ರಂದು ಸಾಂಕೇತಿಕವಾಗಿ ಒಂದು ದಿನದ ಮಟ್ಟಿಗೆ ಹಂಪಿ ಉತ್ಸವ ನಡೆಸಲು ನಿರ್ಧರಿಸಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್‌ ತಿಳಿಸಿದ್ದಾರೆ.