ರಾಜ್ಯದ ಆಡಳಿತಾರೂಢ ಪಕ್ಷವಾಗಿರುವ ಕಾಂಗ್ರೆಸ್‌ನ ಮಾಜಿ ಸಚಿವರೊಬ್ಬರು ಶಿಷ್ಟಾಚಾರ ನಿಯಮಗಳನ್ನು ಉಲ್ಲಂಘಿಸಿ ಸರ್ಕಾರದ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಜೊತೆಗೆ, ಸರ್ಕಾರಿ ಬೆಂಗಾವಲು ಪಡೆಯನ್ನೂ ದುರುಪಯೋಗ ಮಾಡಿಕೊಳ್ಳುತ್ತಿರುವ ಬಗ್ಗೆ ಹಾಲಿ ಶಾಸಕರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.

ವಿಜಯನಗರ (ಆ.21): ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕ್ ವಿರುದ್ಧ ಹೂವಿನ ಹಡಗಲಿ ವಿಧಾನಸಭಾ ಕ್ಷೇತ್ರದ ಶಾಸಕ ಕೃಷ್ಣನಾಯಕ್ ಗಂಭೀರ ಶಿಷ್ಟಾಚಾರ ಉಲ್ಲಂಘನೆ ಆರೋಪ ಮಾಡಿದ್ದಾರೆ. ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಅಧಿಕಾರಿಗಳ ಸಭೆ ನಡೆಸಿರುವುದು ಹಾಗೂ ಸರ್ಕಾರಿ ಬೆಂಗಾವಲು ಪಡೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ (CS) ಅವರಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.

ದೂರಿನಲ್ಲಿರುವ ಪ್ರಮುಖ ಆರೋಪಗಳೇನು?

1. ವ್ಯಾಪ್ತಿ ಮೀರಿ ನೀರಾವರಿ ಇಲಾಖೆ ಸಭೆ:

ಪಿ.ಟಿ. ಪರಮೇಶ್ವರ್ ನಾಯ್ಕ್ ಅವರು ಕೇವಲ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸೀಮಿತವಾಗಿದ್ದರೂ, ನಿಯಮಬಾಹಿರವಾಗಿ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಹೂವಿನ ಹಡಗಲಿ ಕ್ಷೇತ್ರದ ಕೆರೆ ತುಂಬಿಸುವ ಯೋಜನೆ ಹಾಗೂ ಅನುದಾನ ಬಳಕೆ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕ್ಷೇತ್ರದ ಶಾಸಕರ ಗಮನಕ್ಕೆ ತರದೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿರುವುದು ಶಾಸನಸಭಾ ನಿಯಮಗಳ ಪ್ರಕಾರ ಶಾಸಕರ ಹಕ್ಕುಚ್ಯುತಿಗೆ ಕಾರಣವಾಗಿದೆ ಎಂದು ಕೃಷ್ಣನಾಯಕ್ ಆಕ್ಷೇಪಿಸಿದ್ದಾರೆ.

2. ಎಕ್ಸಾರ್ಟ್ ವಾಹನ, ಶಿಷ್ಟಾಚಾರದ ದುರ್ಬಳಕೆ:

ಮಾಜಿ ಸಚಿವರು ತಮಗೆ ನೀಡಿರುವ ಶಿಷ್ಟಾಚಾರ ವ್ಯವಸ್ಥೆ ಮತ್ತು ಬೆಂಗಾವಲು (Escort) ವಾಹನಗಳನ್ನು ಅನಾವಶ್ಯಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಣ್ಣಪುಟ್ಟ ಹಾಗೂ ಖಾಸಗಿ ಕಾರ್ಯಕ್ರಮಗಳಿಗೂ ಬೆಂಗಾವಲು ಪಡೆಯೊಂದಿಗೆ ತೆರಳಿ ಅಧಿಕಾರ ಪ್ರದರ್ಶನ ಮಾಡುತ್ತಿದ್ದು, ಇದರಿಂದ ಸಾರ್ವಜನಿಕರ ರಸ್ತೆ ಸಂಚಾರ ಮತ್ತು ಆಂಬುಲೆನ್ಸ್‌ನಂತಹ ತುರ್ತು ಸೇವೆಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಾಸಕರ ಆಗ್ರಹ:

ಸರ್ಕಾರ ನಿಗದಿಪಡಿಸಿದ ಶಿಷ್ಟಾಚಾರದ ಚೌಕಟ್ಟು ಮೀರಿ ನಡೆದುಕೊಳ್ಳುತ್ತಿರುವ ಪಿ.ಟಿ. ಪರಮೇಶ್ವರ್ ನಾಯ್ಕ್ ಅವರ ಕ್ರಮದ ಬಗ್ಗೆ ಜಿಲ್ಲಾಡಳಿತಕ್ಕೆ ಸೂಕ್ತ ನಿರ್ದೇಶನ ನೀಡಬೇಕು. ಜೊತೆಗೆ ಶಾಸಕರ ಗಮನಕ್ಕೆ ತಾರದೆ ನಿಯಮಬಾಹಿರವಾಗಿ ಇಂತಹ ಸಭೆಗಳಲ್ಲಿ ಪಾಲ್ಗೊಂಡ ಅಧಿಕಾರಿಗಳ ವಿರುದ್ಧವೂ ಶಿಸ್ತುಕ್ರಮ ಜರುಗಿಸಬೇಕು ಎಂದು ಶಾಸಕ ಕೃಷ್ಣನಾಯಕ್ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಒತ್ತಾಯಿಸಿದ್ದಾರೆ.