ಮೈಸೂರು (ಸೆ.03):  ಸಾಹಿತ್ಯ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನೇಮಕವಾದ ಬಳಿಕ ಮಾಜಿ ಸಚಿವ ಎಚ್‌. ವಿಶ್ವನಾಥ್‌ ಮೊದಲ ಬಾರಿಗೆ ಮೈಸೂರಿನ ಜೆಎಲ್‌ಬಿ ರಸ್ತೆಯಲ್ಲಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾಧವ ಕೃಪಾಗೆ ಭೇಟಿ ನೀಡಿ ಸಮಾಲೋಚಿಸಿದರು.

ಮೊದಲಿಗೆ ಸಂಘದ ಪ್ರಮುಖರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು. ಸಂಘದ ಪ್ರಮುಖರೂ ಕೂಡ ವಿಶ್ವನಾಥ್‌ ಅವರನ್ನು ಕಚೇರಿಗೆ ಆತ್ಮೀಯವಾಗಿ ಬರಮಾಡಿಕೊಂಡು ಪ್ರತ್ಯೇಕವಾಗಿ ಕೆಲಹೊತ್ತು ಸಮಾಲೋಚನೆ ನಡೆಸಿದರು. ಈ ವೇಳೆ ಸಂಘದ ಕಾರ್ಯ ಚಟುವಟಿಕೆ, ಕಾರ್ಯಕರ್ತರ ಕೆಲಸ, ರಾಜ್ಯ, ದೇಶದ ಹಿತದೃಷ್ಟಿಯಿಂದ ಸಂಘ ಮಾಡಲಿರುವ ಸಮಾಜ ಸೇವಾ ಕಾರ್ಯಗಳ ಕುರಿತು ಪ್ರಮುಖರು ವಿವರಣೆ ನೀಡಿದರು. ಈ ಎಲ್ಲಾ ವಿಚಾರಗಳನ್ನು ಆಲಿಸಿದ ವಿಶ್ವನಾಥ್‌ ಅವರು ಸಂಘದ ಕಚೇರಿಗೆ ಆಗಾಗ್ಗೆ ಭೇಟಿ ನೀಡುತ್ತೇನೆ. ಮತ್ತೊಮ್ಮೆ ಬರುತ್ತೇನೆ ಎಂದರು.

ಸಚಿವ ಸ್ಥಾನ: ಎಂಟಿಬಿ, ಶಂಕರ್‌, ವಿಶ್ವನಾಥ್‌ಗೆ ನೋಟಿಸ್‌ ...

ಈ ವೇಳೆ ರಾಜಕೀಯ ಅಥವಾ ವೈಯಕ್ತಿಕ ವಿಚಾರಗಳ ಕುರಿತು ಯಾವುದೇ ಚರ್ಚೆ ನಡೆಯಲಿಲ್ಲ ಎನ್ನಲಾಗಿದೆ. ಇತ್ತೀಚೆಗೆ ಟಿಪ್ಪು ಪರವಾಗಿ ಹೇಳಿಕೆ ನೀಡಿದ್ದ ವಿಶ್ವನಾಥ್‌ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಸಂದರ್ಭದಲ್ಲಿಯೇ ಆರ್‌ಎಸ್‌ಎಸ್‌ ಕಚೇರಿಗೆ ಅವರು ಭೇಟಿ ನೀಡಿರುವುದು ಸಹಜವಾಗಿಯೇ ಕುತೂಹಲಕ್ಕೆ ಕಾರಣವಾಗಿದೆ.

ಆದರೆ ಕೆಲ ದಿನಗಳಿಂದ ವಿಶ್ವನಾಥ್‌ ಯಾವುದೇ ರಾಜಕೀಯ ವಿಚಾರಗಳಿಗೆ ಹೇಳಿಕೆ ನೀಡುತ್ತಿಲ್ಲ. ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕೂಡ ವಿಶ್ವನಾಥ್‌ ಅವರು, ತಮ್ಮ ಹೇಳಿಕೆಯನ್ನು ಡ್ರಗ್‌ ಮಾಫಿಯಾಗೆ ಮಾತ್ರ ಸೀಮಿತಗೊಳಿಸಿದರು.