‘ಏ ಮೋದಿ ಏನಪ್ಪಾ ನಿಂದು ಅಂಧಾ ದರ್ಬಾರ್?’ ವಿಶ್ವನಾಥ್
ಚರ್ಚೆ ಇಲ್ಲದೆ ಕಾಯ್ದೆಗಳು ಪಾಸ್ ಆಗುತ್ತೆ, ಸೇವೆಯೇ ಇಲ್ಲದೆ ಟೋಲ್ ಸಂಗ್ರಹ ಮಾಡ್ತೀರಾ? ನಿಮ್ಮ ಸರ್ಕಾರದಿಂದ ಪ್ರಜಾಪ್ರಭುತ್ವ ಹಾಳಾಗುತ್ತಿದೆ. ಏ ಮೋದಿ ಏನಪ್ಪಾ ನಿಂದು ಅಂಧಾ ದರ್ಬಾರ್? ಎಂದು ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಎಚ್. ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಮೈಸೂರು ; ಚರ್ಚೆ ಇಲ್ಲದೆ ಕಾಯ್ದೆಗಳು ಪಾಸ್ ಆಗುತ್ತೆ, ಸೇವೆಯೇ ಇಲ್ಲದೆ ಟೋಲ್ ಸಂಗ್ರಹ ಮಾಡ್ತೀರಾ? ನಿಮ್ಮ ಸರ್ಕಾರದಿಂದ ಪ್ರಜಾಪ್ರಭುತ್ವ ಹಾಳಾಗುತ್ತಿದೆ. ಏ ಮೋದಿ ಏನಪ್ಪಾ ನಿಂದು ಅಂಧಾ ದರ್ಬಾರ್? ಎಂದು ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಎಚ್. ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್ ವೇ ಅವೈಜ್ಞಾನಿಕ ಟೋಲ್ ಸಂಗ್ರಹ ವಿರೋಧಿಸಿ ಶುಕ್ರವಾರ ನಡೆದ ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2600 ಎಕರೆ ರೈತರ ಜಮೀನು ಹೋಯ್ತು. ಮಂಡ್ಯ ಭಾಗದ ನೂರಾರು ಕುಟುಂಬಗಳು ಬೀದಿಗೆ ಬಂದಿದೆ. ಜನ ವಿರೋಧಿ ಯೋಜನೆ ಮಾಡಿ ಟೋಲ್ ಸಂಗ್ರಹ ನೆಪದಲ್ಲಿ ಹಗಲು ದರೋಡೆಗೆಳಿದಿದ್ದೀರಿ. ರಸ್ತೆ ಬೇಕು ಅಂಥಾ ಯಾರು ಕೇಳಿದ್ರು? ನಾಲ್ಕು ಪಥನೇ ಸಾಕಾಗಿತ್ತು. ಹತ್ತು ಪಥದ ರಸ್ತೆ ಮಾಡಿದ್ದೀರಾ, ಆದರೆ ಬಡವರು ಓಡಾಡುವ ಸರ್ವಿಸ್ ರಸ್ತೆ ಎಲ್ಲಿದೆ? ಅಪಘಾತವಾದರೆ ಚಿಕಿತ್ಸೆ ನೀಡಲು ಟ್ರಾಮಾ ಸೆಂಟರ್ ಎಲ್ಲಿದೆ ಎಂದು ಪ್ರಶ್ನಿಸಿದರು.
ಪ್ರತಾಪ್ ಸಿಂಹ ಮಿನಿ ಕಂಟ್ರ್ಯಾಕ್ಟರ್
ಸಂಸದ ಪ್ರತಾಪ್ ಸಿಂಹ ಮಿನಿ ಕಂಟ್ರ್ಯಾಕ್ಟರ್. ನಿನ್ನ ಕೆಲಸ ಏನು? ಹೆದ್ದಾರಿ ವಿಚಾರದಲ್ಲಿ ನೀನು ಮಾಡಿದ್ದೇನು? ರಸ್ತೆಗೆ ಮೆಟಿರೀಯಲ್ ಸಪ್ಲೈ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ದಿನ ಬೆಳಗಾದರೆ ಹೈವೇ ಫೇಸ್‌ಬುಕ್ ಲೈವ್. ಚೆಲುವಾಂಬ ಆಸ್ಪತ್ರೆಯಲ್ಲಿ ಬಾಣಂತಿ ಮಕ್ಕಳು ಸಾಯುತ್ತಿದ್ದಾರೆ. ಅವರನ್ನ ನೋಡಪ್ಪ, ಅಲ್ಲಿಯೂ ಪ್ರೆಸ್ ಮೀಟ್ ಮಾಡಪ್ಪ ಎಂದು ಅವರು ಕುಟುಕಿದರು.
ಅವನು ಯಾರೋ ಶ್ರೀಧರ್ ಅನ್ನೋ ಅಧಿಕಾರಿ ಸರ್ವಿಸ್ ರಸ್ತೆ ಮಾಡವ ಕಾನೂನು ಎಲ್ಲಿದೆ ಅಂತಾನೆ. ಏನಪ್ಪ ಮೋದಿ ನಿಮ್ಮ ಸರ್ಕಾರದಲ್ಲಿ ಅಧಿಕಾರಿಶಾಹಿ ಆಡಳಿತ ನಡಿತಾ ಇದೆಯಾ ಎನ್ನುವ ಮೂಲಕ ಹೆದ್ದಾರಿ ಯೋಜನಾ ನಿರ್ದೇಶಕ ಶ್ರೀಧರ್ ವಿರುದ್ಧ ಎಚ್. ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಅವೈಜ್ಞಾನಿಕ ಟೋಲ್ ಸಂಗ್ರಹಕ್ಕೆ ವಿರೋಧ
ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್ ವೇ ಅವೈಜ್ಞಾನಿಕ ಟೋಲ್ ಸಂಗ್ರಹ ವಿರೋಧಿಸಿ ಹಾಗೂ ಸರ್ವಿಸ್ ರಸ್ತೆ ನಿರ್ಮಿಸದೇ ಟೋಲ್ ಸಂಗ್ರಹಿಸುತ್ತಿರುವುದನ್ನು ಖಂಡಿಸಿ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ನೇತೃತ್ವದಲ್ಲಿ ನಗರದ ಮಣಿಪಾಲ್ ಆಸ್ಪತ್ರೆ ವೃತ್ತದ ಬಳಿ ವಿವಿಧ ಸಂಘಟನೆಯಿಂದ ಶುಕ್ರವಾರ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಯಿತು.
ಬಳಿಕ ರಸ್ತೆ ತಡೆಯಲು ಪ್ರತಿಭಟನಾಕಾರರು ಮುಂದಾದಾಗ ಪೊಲೀಸರು ಬ್ಯಾರಿಕೆಡ್ ಅಳವಡಿಸಿ ಪ್ರತಿಭಟನಾಕಾರರು ರಸ್ತೆಗೆ ಇಳಿಯದಂತೆ ತಡೆದರು.
ಈ ವೇಳೆ ಎಚ್. ವಿಶ್ವನಾಥ್ ಮಾತನಾಡಿ, ಪೂರ್ಣ ಪ್ರಮಾಣದಲ್ಲಿ ಸವೀರ್‍ಸ್ ರಸ್ತೆ ನಿರ್ಮಾಣ ಮಾಡಿ ಬಳಿಕ ಟೋಲ್ ಸಂಗ್ರಹಿಸಬೇಕು. ಆದರೆ, ಕೇಂದ್ರ ಸರ್ಕಾರವು ಜನ ವಿರೋಧಿ ಯೋಜನೆ ಮಾಡಿ, ಅವೈಜ್ಞಾನಿಕವಾಗಿ ದುಬಾರಿ ಟೋಲ್ ಸಂಗ್ರಹ ಮಾಡುವ ಮೂಲಕ ಹಗಲು ದರೋಡೆಗೆ ಇಳಿದಿದೆ ಎಂದು ಆರೋಪಿಸಿದರು.
ಪ್ರತಾಪ್ ಸಿಂಹಗೆ ಸವಾಲು
ಮೈಸೂರು- ಕೊಡಗು ಸಂಸದರು ಎಲ್ಲವೂ ಸರಿಯಾಗಿದೆ. ಸುಮ್ಮನೆ ಜನ ಗಲಾಟೆ ಮಾಡ್ತಾರೆ ಎಂದಿದ್ದಾರೆ. ಜೊತೆಗೆ ಪಂಥಾಹ್ವಾನ ಕೊಟ್ಟಿದ್ದಾರೆ. ಬರಲಿ ಬೇಕಾದರೆ ಯಾವಾಗ ಅಂತ ಒಂದು ದಿನಾಂಕ ನಿಗದಿ ಮಾಡಿ ನಾವು ಬರಲು ಸಿದ್ಧವಿದ್ದೇವೆ ಎಂದು ಎಚ್. ವಿಶ್ವನಾಥ್ ಸವಾಲು ಹಾಕಿದರು.
ರಸ್ತೆ ಸಂಪೂರ್ಣ ಕಂಪ್ಲೀಟ್ ಆಗಿ ಪ್ರಯಾಣಿಕರಿಗೆ ಮೂಲಭೂತ ಸೌಕರ್ಯಗಳ ಕೊಟ್ಟಮೇಲೆ ಟೋಲ್ ದರ ನಿಗದಿ ಮಾಡಿ, ಯಾರು ಬೇಡ ಅಂದ್ರು? ಈಗಾಗಲೇ ಕೆಎಸ್‌ಆರ್‌ಟಿಸಿ ಬಸ್ ದರ ಕೂಡ ಹೆಚ್ಚಿಸಿದ್ದಾರೆ. ನಮಗೆ ಗೊತ್ತಿಲ್ಲದೆ ನಮ್ಮ ಜೇಬು ಪಿಕ್ ಪ್ಯಾಕೆಟ್ ಆಗ್ತಾ ಇದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
118 ಕಿ.ಮೀ. ಸಂಪೂರ್ಣ ಮುಗಿದ ಮೇಲೆ, ಸರ್ವಿಸ್ ರಸ್ತೆ ಕಾಮಗಾರಿಯು ಮುಗಿದ ಮೇಲೆ ಎಲ್ಲಾ ಸೇರಿ ಒಂದು ದರ ನಿಗದಿ ಮಾಡಿದರೆ ಸರಿ. ಅದನ್ನ ಬಿಟ್ಟು ಜನ ಸಾಮನ್ಯರ ಮೇಲೆ ಬರೆ ಎಳೆಯುವ ಕೆಲಸ ಮಾಡಬೇಡಿ ಎಂದು ಅವರು ಒತ್ತಾಯಿಸಿದರು.
ಕರ್ನಾಟ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಇತಿಹಾಸ ತಜ್ಞ ಪ್ರೊ. ನಂಜರಾಜ ಅರಸ್, ಮಾಜಿ ಮೇಯರ್‌ಗಳಾದ ಪುರುಷೋತ್ತಮ್, ಅಯೂಬ್ ಖಾನ್, ನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರಶಾಂತ್‌ಗೌಡ, ಸೋಮಸುಂದರ್, ಆಮ್ ಆದ್ಮಿ ಪಕ್ಷದ ಮಾಳವಿಕ ಗುಬ್ಬಿವಾಣಿ, ಧರ್ಮಶ್ರೀ, ಮುಖಂಡರಾದ ಕೆ.ಎಸ್. ಶಿವರಾಮು, ದ್ಯಾವಪ್ಪನಾಯಕ, ಪಿ. ಮರಂಕಯ್ಯ, ಲೋಕೇಶ್‌ಕುಮಾರ್, ರೇವಣ್ಣ, ನಾಗೇಶ್, ಎಂ.ಎನ್. ನವೀನ್‌ಕುಮಾರ್, ಶಿವಶಂಕರ್, ಅರವಿಂದ ಶರ್ಮ ಮೊದಲಾದವರು ಇದ್ದರು