'ಮೈಸೂರಲ್ಲಿ ರಾಜರಿಗೆ ಗೆಲುವು - ಇದೇ ಜನರ ಉತ್ತರವಾಗಲಿದೆ'

  ಸ್ವಾತಂತ್ರ್ಯ ಪೂರ್ವದಲ್ಲಿ ಜನರಿಗೆ ಆಹಾರ, ಆರೋಗ್ಯ, ಉದ್ಯೋಗ ನೀಡಿದ ಯದುವಂಶದವರನ್ನು ಅವಿರೋಧವಾಗಿ ಆಯ್ಕೆ ಮಾಡದೆ ಅವರ ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸಿದ್ದು ಸರಿಯೇ ಎಂದು ವಿಧಾನ ಪರಿಷತ್‌ಸದಸ್ಯ ಎಚ್‌. ವಿಶ್ವನಾಥ್‌ ಪ್ರಶ್ನಿಸಿದರು.

 H Vishwanath Slams CoNgress snr

 ಮೈಸೂರು :  ಸ್ವಾತಂತ್ರ್ಯ ಪೂರ್ವದಲ್ಲಿ ಜನರಿಗೆ ಆಹಾರ, ಆರೋಗ್ಯ, ಉದ್ಯೋಗ ನೀಡಿದ ಯದುವಂಶದವರನ್ನು ಅವಿರೋಧವಾಗಿ ಆಯ್ಕೆ ಮಾಡದೆ ಅವರ ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸಿದ್ದು ಸರಿಯೇ ಎಂದು ವಿಧಾನ ಪರಿಷತ್‌ಸದಸ್ಯ ಎಚ್‌. ವಿಶ್ವನಾಥ್‌ ಪ್ರಶ್ನಿಸಿದರು.

ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಭಾನುವಾರ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಆಯೋಜಿಸಿದ್ದ ಕಾಯಕ ಸಮಾಜಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಯದುವಂಶದ ಕುಡಿ ಯದುವೀರ್ ಜನತಂತ್ರ ವ್ಯವಸ್ಥೆಯಲ್ಲಿ ಜನಪ್ರತಿನಿಧಿಯಾಗಲು ಬಯಸಿದಾಗ ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಅವಿರೋಧವಾಗಿ ಆಯ್ಕೆ ಮಾಡಬೇಕು ಎಂದು ನಾನು ಸಿದ್ದರಾಮಯ್ಯ ಅವರಲ್ಲಿ ಬಹಿರಂಗವಾಗಿ ಮನವಿ ಮಾಡಿಕೊಂಡಿದ್ದೆ ಎಂದರು.

ಆದರೆ, ನನ್ನ ಮನವಿಗೆ ಸ್ಪಂದಿಸದೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಯದುವೀರ್ ಅವಿರೋಧವಾಗಿ ಆಯ್ಕೆಯಾಗಿದ್ದರೆ ಸಿದ್ದರಾಮಯ್ಯ ಗೌರವ ಹೆಚ್ಚುತಿತ್ತು. ಜನತಂತ್ರ ವ್ಯವಸ್ಥೆ ಎತ್ತರಕ್ಕೆ ಹೋಗುತಿತ್ತು. ಆದರೆ, ನಿಮಗೆ ಇದು ಯಾವುದು ಅರ್ಥವಾಗಿಲ್ಲ, ನಿಮಗೆ ಚುನಾವಣೆ ಮಾತ್ರ ಅರ್ಥವಾಗಿದೆ ಎಂದು ಅವರು ಟೀಕಿಸಿದರು.

ನಿಮ್ಮ ಅನ್ನಭಾಗ್ಯ ಯೋಜನೆಗೆ ಅನ್ನ ಬೆಳೆಯಲು ಅಣೆಕಟ್ಟೆ ಕಟ್ಟಿದವರು ಯಾರು? ಮೈಸೂರು ಮಹಾರಾಜರಲ್ಲವೇ? ಅಂತಹ ರಾಜ ಮನೆತನದ ಕುಡಿಯನ್ನು ಅವಿರೋಧವಾಗಿ ಆಯ್ಕೆ ಮಾಡದೆ ಅವರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಸರಿಯಲ್ಲ. ಜನರು ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತಾರೆ ಎಂದು ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.

ದೇಶದ ಯಾವುದೇ ರಾಜ್ಯದಲ್ಲೂ ಇಲ್ಲದ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ, 2013ರಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ಸಲಹೆ ನೀಡಿದ್ದೇ ನಾನು ಎಂದರು.

ರಾಜ್ಯ ಸರ್ಕಾರ ಬಿಟ್ಟಿ ಭಾಗ್ಯಗಳನ್ನು ಜಾರಿಗೊಳಿಸಿ ಒಂದು ಕಡೆಯಿಂದ ಕಸಿದು ಮೊತ್ತೊಂದೆಡೆ ನೀಡುತ್ತಿದೆ. ಯುವಜನರಿಗೆ ಯುವ ನಿಧಿ ಸರಿಯಾಗಿ ನೀಡದೆ ಚೊಂಬು ನೀಡಿದೆ. ವಿವಿಧ ನಿಗಮಗಳಿಗೆ ನೀಡುತ್ತಿದ್ದ ಅನುದಾನ ಕಡಿತಗೊಳಿಸಿ ಆ ಹಣವನ್ನು ಬಿಟ್ಟಿ ಭಾಗ್ಯಕ್ಕೆ ಬಳಕೆ ಮಾಡುವ ಮೂಲಕ ಸಣ್ಣ ಸಮುದಾಯಕ್ಕೆ ಸರ್ಕಾರ ಚೊಂಬು ನೀಡಿದೆ. ರಾಜ್ಯ ಸರ್ಕಾರ ನೀಡುವ 2 ಸಾವಿರ ರೂ.ಗಳಲ್ಲಿ ಸಂಸಾರ ನಡೆಸಲು ಸಾಧ್ಯವೇ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಸಚಿವ ಸಿ.ಎಚ್. ವಿಜಯಶಂಕರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ, ನಗರಾಧ್ಯಕ್ಷ ಎಲ್. ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಹಿಂದುಳಿದ ವರ್ಗ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಜಿಲ್ಲಾಧ್ಯಕ್ಷ ಬಾಲಚಂದ್ರ, ನಗರಾಧ್ಯಕ್ಷ ಮೈ.ಪು. ರಾಜೇಶ್‌ ಮೊದಲಾದವರು ಇದ್ದರು.

Latest Videos
Follow Us:
Download App:
  • android
  • ios