ಮೈಸೂರು(ಫೆ.02): ಸಮ್ಮಿಶ್ರ ಸರ್ಕಾರ ಪತನ ಕುರಿತು ಪುಸ್ತಕ ಬರೆಯುವ ನೈತಿಕತೆ ಮಾಜಿ ಸಚಿವ ಎಚ್‌. ವಿಶ್ವನಾಥ್‌ ಅವರಿಗೆ ಇಲ್ಲ ಎಂದು ಮಾಜಿ ಸಂಸದ ಆರ್‌. ಧ್ರುವನಾರಣ್‌ ಟೀಕಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್‌ ಅವರು ಹಳ್ಳಿಹಕ್ಕಿಯಲ್ಲ, ಪಕ್ಷದಿಂದ ಪಕ್ಷಕ್ಕೆ ಹಾರುವ ಹಕ್ಕಿ. ಇಷ್ಟಕ್ಕೂ ಸಮ್ಮಿಶ್ರ ಸರ್ಕಾರದ ಕುರಿತು ಮಾತನಾಡುವ ಹಾಗೂ ಪುಸ್ತಕ ಬರೆಯುವ ನೈತಿಕತೆ ಅವರಿಗೆ ಇಲ್ಲ. ಇದೊಂದು ಬ್ಲಾಕ್‌ಮೇಲ್‌ ಮಾಡುವ ತಂತ್ರ. ಕಾಂಗ್ರೆಸ್‌ ಪಕ್ಷ ಅವರಿಗೆ ಎಲ್ಲವನ್ನೂ ಕೊಟ್ಟಿತ್ತು. ಸಚಿವರನ್ನಾಗಿಯೂ ಮಾಡಿತ್ತು.

ಬಿಜೆಪಿಯವರಿಗೆ ಆರ್ಥಿಕತೆಯೂ ಗೊತ್ತಿಲ್ಲ, ತಜ್ಞರ ಸಲಹೆಯೂ ಬೇಕಾಗಿಲ್ಲ : ಸಿದ್ದು ಟಾಂಗ್

ಆದರೂ ಕಾಂಗ್ರೆಸ್‌ಗೆ ದ್ರೋಹ ಬಗೆದು ಜೆಡಿಎಸ್‌ಗೆ ಹೋಗಿದ್ದರು. ಜೆಡಿಎಸ್‌ ಕೂಡಾ ಅವರನ್ನು ಶಾಸಕರನ್ನಾಗಿ ಮಾಡಿ, ಪಕ್ಷದ ರಾಜ್ಯಾಧ್ಯಕ್ಷರನ್ನಾಗಿಯೂ ಮಾಡಿತು. ಆದರೆ ಅವರಿಗೂ ಮೋಸ ಮಾಡಿ ಬಿಜೆಪಿಗೆ ಹೋದರು. ಈಗ ಬಿಜೆಪಿಯಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಬ್ಲಾಕ್‌ ಮೇಲ್‌ ತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿಯವರಿಗೂ ಯಾವುದೇ ಸಿದ್ಧಾಂತಗಳಿಲ್ಲ. ಯಡಿಯೂರಪ್ಪ ಅವರಿಗೆ ಉತ್ತಮ ಆಡಳಿತ ನೀಡಲು ಸುವರ್ಣಾವಕಾಶವಿದೆ. ಆದರೆ ಬಿಜೆಪಿ ಹೈಕಮಾಂಡ್‌ ಅದಕ್ಕೆ ಅವಕಾಶ ನೀಡುತ್ತಿಲ್ಲ. ಸಚಿವ ಸಂಪುಟ ವಿಸ್ತರಣೆ ಮಾಡಲು ಅವರಿಗೆ ಸ್ವಾತಂತ್ರ್ಯ ನೀಡುತ್ತಿಲ್ಲ ಎಂದು ಅವರು ಟೀಕಿಸಿದರು.

ಅಭಿವೃದ್ಧಿ ಪರ ಬಜೆಟ್‌ ನಿರೀಕ್ಷೆ:

ಈ ಬಾರಿ ಕೇಂದ್ರ ಸರ್ಕಾರದಿಂದ ಉತ್ತಮ ಬಜೆಟ್‌ ನಿರೀಕ್ಷಿಸಲಾಗಿದೆ. ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬಹುಮಾನ ಲಭ್ಯವಾಗಿದೆ. ಈ ಹಿಂದೆ ನೋಟು ಅಮಾನ್ಯೀಕರಣದಿಂದ ಜಿಡಿಪಿ ಪ್ರಮಾಣ 6.5 ರಿಂದ 4.5ಕ್ಕೆ ಕುಸಿದಿದೆ. ಸಿಎಎ, ಎನ್‌ಆರ್‌ಸಿ ಕಾಯ್ದೆ ಮೂಲಕ ಗೊಂದಲ ಸೃಷ್ಟಿಸಿದ್ದಾರೆ. ಈ ಬಾರಿ ಅಭಿವೃದ್ಧಿಪರ ಬಜೆಟ್‌ ನಿರೀಕ್ಷಿಸಲಾಗುತ್ತಿದೆ ಎಂದು ಅವರು ಹೇಳಿದರು.

"