ಕೋಲಾರ(ಜ.17): ರಾಜಕಾರಣಿಗಳಿಗೆ ಸ್ವಾಮೀಜಿಗಳು ಸಲಹೆ ನೀಡಬೇಕೇ ಹೊರತು ವೇದಿಕೆಯಲ್ಲೇ ಬೆದರಿಕೆ ಹಾಕುವುದು ಒಳ್ಳೆಯದಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ತಿಳಿಸಿದ್ದಾರೆ.

ನಗರದ ಟಿ.ಚನ್ನಯ್ಯ ರಂಗಮಂದಿರದ ಆವರಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ವಚನಾನಂದ ಸ್ವಾಮೀಜಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿಗಳು ಈ ರೀತಿ ಕೇಳುವುದು ಸಮಂಜಸವಲ್ಲ. ಸಲಹೆ ನೀಡಬೇಕೇ ಹೊರತು ಬೆದರಿಕೆ ಹಾಕುವುದಲ್ಲ. ವೇದಿಕೆಯಲ್ಲಿ ಮುಖ್ಯಮಂತ್ರಿಗಳಿಗೆ ಹೀಗೆ ಖಡಾಖಂಡಿತವಾಗಿ ಮಾಡಲೇ ಬೇಕು ಇಲ್ಲದೇ ಹೋದರೆ ಪರಿಣಾಮ ನೆಟ್ಟಿಗಿರಲ್ಲ ಎನ್ನುವುದು ಸರಿಯಲ್ಲ ಎಂದಿದ್ದಾರೆ.

ಮುಖ್ಯಮಂತ್ರಿ ಘನತೆ ಪ್ರಶ್ನೆ

ಸ್ವಾಮೀಜಿಗಳು ಬಂದು ಸಲಹೆ ನೀಡಿದರೆ ಮುಖ್ಯಮಂತ್ರಿಗಳು ಅದನ್ನು ಪರಿಗಣಿಸುತ್ತಾರೆ. ಯಡಿಯೂರಪ್ಪ ಅವರು ಅನೇಕ ಆಶ್ರಮಗಳಿಗೂ ಸಹಾಯ ಮಾಡಿದ್ದಾರೆ. ಆದರೆ ಈ ರೀತಿ ವೇದಿಕೆಯಲ್ಲಿ ಹೀಗೆ ಮಾಡಿದರೆ ಮುಖ್ಯಮಂತ್ರಿಗಳ ಘನತೆ ಏನಾಗಬೇಕು. ಎಲ್ಲ ಸಮುದಾಯಗಳಲ್ಲಿಯೂ ಸ್ವಾಮೀಜಿಗಳು ಇರುವುದಿಲ್ಲ. ನಮ್ಮ ಸಮುದಾಯಕ್ಕೆ ಇರುವುದು ಛಲವಾದಿ ಸ್ವಾಮಿಗಳು ಒಬ್ಬರೇ, ಅವರು ಯಾವತ್ತೂ ಯಾವುದೇ ಬೇಡಿಕೆ ಮುಂದಿಟ್ಟಿಲ್ಲ. ಜತೆಗೆ ಈ ರೀತಿ ಎಂದೂ ನಡೆದುಕೊಂಡಿಲ್ಲ ಎಂದಿದ್ದಾರೆ.

'ನಾನ್ ಹೇಳಿದ್ದು ವಿವಾದ ಆಗುತ್ತೆ, ಹಾಗಾಗಿ ಮಾತಾಡಲ್ಲ ಎಂದ ಸಚಿವ'..!

ಪ್ರಜಾಪ್ರಭುತ್ವದಲ್ಲಿ ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳನ್ನು ಬೇರೆಯವರು ಸೋಲಿಸಲು ಸಾಧ್ಯವಿಲ್ಲ. ಸೋಲು ಗೆಲುವನ್ನು ಜನರೇ ನಿರ್ಧರಿಸಬೇಕು. ಎಂಟಿಬಿ ನಾಗರಾಜ್‌ ಅವರಿಗೆ ಎಂಎಲ್ಸಿ ಸ್ಥಾನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಏನು ಮಾತನಾಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಉದ್ಘಾಟನೆ ಆಗದಿದ್ದರೂ ಅಸ್ಪತ್ರೆ ಬಳಸಿ

ಕೋಲಾರ ಜಿಲ್ಲಾಸ್ಪತ್ರೆಯ ಆವರಣದಲ್ಲಿನ ನೂತನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಉದ್ಘಾಟನೆ ಕಾರಣಾಂತರಗಳಿಂದಾಗಿ ಮುಂದೂಡಲಾಗಿದ್ದು, ಸದ್ಯಕ್ಕೆ ಉದ್ಘಾಟನೆ ಇಲ್ಲದೆಯೇ ಬಳಸಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಜನರಿಗೆ ಅನುಕೂಲವಾಗಲಿ. ಆ ಬಳಿಕ ಯಾವುದಾದರೂ ಒಂದು ದಿನ ಉದ್ಘಾಟನೆ ಮಾಡಿದರೆ ಆಗುತ್ತದೆ. ಈ ಬಗ್ಗೆ ಆರೋಗ್ಯ ಸಚಿವರ ಗಮನಕ್ಕೂ ತರಲಾಗಿದೆ ಎಂದಿದ್ದಾರೆ.