ಮೈತ್ರಿ ಸರ್ಕಾರದಲ್ಲಿ ನಾನು ಕ್ಲರ್ಕ್ ಆಗಿದ್ದೆ: ಎಚ್‌ಡಿಕೆ
ಸಿಎಂ ಆಗಿದ್ದರೂ ಸ್ವತಂತ್ರ ನಿರ್ಣಯ ತೆಗೆದುಕೊಳ್ಳುವಂತೆ ಇರಲಿಲ್ಲ| ಕಾಂಗ್ರೆಸ್ ಮೈತ್ರಿ ಬಗ್ಗೆ ಮತ್ತೆ ಅಸಮಾಧಾನ ಹೊರಹಾಕಿದ ಮಾಜಿ ಸಿಎಂ| ನನಗೆ ಉತ್ತರ ಕರ್ನಾಟಕದ ಜನತೆ ಯಾಕೆ ಶಿಕ್ಷೆ ಕೊಡುತ್ತಿದ್ದಿರಿ| ವರ್ಷಕ್ಕೆ ಮೂರು ಬಾರಿ 2000 ನೀಡುವ ಬಿಜೆಪಿಯ ಮೋದಿಯವರನ್ನು ಬೆಂಬಲಿಸುತ್ತಿರಿ: ಕುಮಾರಸ್ವಾಮಿ|
ಬಾಗಲಕೋಟೆ(ಫೆ.01): ಕಾಂಗ್ರೆಸ್ ಜೊತೆಗಿನ ಮೈತ್ರಿಯೊಂದಿಗಿನ ನೋವನ್ನು ಮತ್ತೊಮ್ಮೆ ಹೊರಹಾಕಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ‘ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ನನಗೆ ಸ್ವಾತಂತ್ರ್ಯವೇ ಇರಲಿಲ್ಲ. ಅದರಲ್ಲಿ ನಾನು ಎಫ್‌ಡಿಎ ಕ್ಲರ್ಕ್ ಆಗಿದ್ದೆ’ ಎಂದು ಪುನರುಚ್ಚರಿಸಿದ್ದಾರೆ.
ನಗರದಲ್ಲಿ ಭಾನುವಾರ ನಡೆದ ಜೆಡಿಎಸ್ ಸಂಘಟನಾತ್ಮಕ ಸಮಾವೇಶದಲ್ಲಿ ಮತ್ತು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಈ ವಿಷಯ ಪ್ರಸ್ತಾಪಿಸಿದ ಅವರು, ನಾನು ಸಿಎಂ ಆಗಿದ್ದರೂ ಸ್ವತಂತ್ರ ನಿರ್ಣಯ ತೆಗೆದುಕೊಳ್ಳುವ ಹಾಗಿರಲಿಲ್ಲ ಎಂದರು. ಒಂದು ಕಡೆ ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ಯೋಜನೆ ಹಾಗೂ ನೀರಾವರಿ ಯೋಜನೆಯನ್ನೇ ಮುಂದುವರಿಸಿ ಎಂದು ಒತ್ತಡ ಹಾಕುತ್ತಿದ್ದರು. ಇನ್ನೊಂದೆಡೆ ಬಿಜೆಪಿಯವರು ರೈತರ ಸಾಲ ಮನ್ನಾ ಅಂತ ಹೇಳಿ ಅಧಿಕಾರಕ್ಕೆ ಬಂದಿದ್ದಿರಿ ಸಾಲಮನ್ನಾ ಮಾಡದೆ ಅವರಿಗೆ ಟೋಪಿ ಹಾಕುತ್ತಿದ್ದೀರಿ ಎಂದು ವ್ಯಂಗ್ಯವಾಗಿ ಮಾತನಾಡುತ್ತಿದ್ದರು. ಹೀಗಾಗಿ ನನ್ನ ಸ್ಥಿತಿ ಕ್ಲರ್ಕ್‌ನದ್ದಾಗಿತ್ತು ಎಂದು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.
ಇದೇ ವೇಳೆ, ಪ್ರತಿಯೊಬ್ಬರಿಗೂ ಮನೆ ನಿರ್ಮಾಣ, ಮನೆಗೊಂದು ಉದ್ಯೋಗ, ಮನೆ ಬಾಗಿಲಿಗೆ ಉಚಿತ ಆರೋಗ್ಯ ಸೇವೆ, ಉಚಿತ ಶಿಕ್ಷಣ, ಬೆಂಬಲ ಬೆಲೆಗಳನ್ನೊಳಗೊಂಡ ಜೆಡಿಎಸ್‌ನ ‘ಪಂಚರತ್ನ’ ಯೋಜನೆಗಳನ್ನು ವಿವರಿಸಿದ ಕುಮಾರಸ್ವಾಮಿ, ಜೆಡಿಎಸ್‌ಗೆ ಐದು ವರ್ಷ ಸ್ವತಂತ್ರವಾಗಿ ಅಧಿಕಾರ ನಡೆಸಲು ಅವಕಾಶ ಮಾಡಿಕೊಡಿ. ಒಂದು ವೇಳೆ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದೂ ಇವುಗಳನ್ನು ಈಡೇರಿಸದೇ ಹೋದಲ್ಲಿ ಜೆಡಿಎಸ್‌ವಿಸರ್ಜನೆಗೊಳಿಸುತ್ತೇನೆ ಎಂದು ಹೇಳಿದರು.
ಸಿಎಂ ವಿರುದ್ಧ ಯತ್ನಾಳ್ ಸಿಡಿಸಿದ್ದ CD ಬಗ್ಗೆ ಮಾತನಾಡಿದ ಕುಮಾರಸ್ವಾಮಿ
ಕೆಲಸ ನಂದು ವೋಟು ಬಿಜೆಪಿಗಾ?:
ನನಗೆ ಉತ್ತರ ಕರ್ನಾಟಕದ ಜನತೆ ಯಾಕೆ ಶಿಕ್ಷೆ ಕೊಡುತ್ತಿದ್ದಿರಿ ಎಂದು ಕುಮಾರಸ್ವಾಮಿ ಇದೇ ವೇಳೆ ಪ್ರಶ್ನಿಸಿದರು. 2006 ಹಾಗೂ 2018ರ ಅವಧಿಯಲ್ಲಿನ ಮುಖ್ಯಮಂತ್ರಿಯಾಗಿ ನಾನು ಮಾಡಿರುವ ಜನಪರ ಕಾರ್ಯ ಹಾಗೂ 25 ಸಾವಿರ ಕೋಟಿ ರೈತರ ಸಾಲಮನ್ನಾ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಿದ ನನ್ನನ್ನು ಚುನಾವಣೆಯಲ್ಲಿ ತಿರಸ್ಕರಿಸುತ್ತೀರಿ. ಆದರೆ ವರ್ಷಕ್ಕೆ ಮೂರು ಬಾರಿ 2000 ನೀಡುವ ಬಿಜೆಪಿಯ ಮೋದಿಯವರನ್ನು ಬೆಂಬಲಿಸುತ್ತಿರಿ ಎಂದು ಭಾವುಕರಾಗಿ ನುಡಿದ ಕುಮಾರಸ್ವಾಮಿ ಇದು ನ್ಯಾಯವೇ ಎಂದು ಕೇಳಿದರು.