ಕೊರೋನಾ ಎಫೆಕ್ಟ್: ಅಕ್ಕಿ, ಬೇಳೆಗಿಂತ ಗುಟ್ಕಾ ಸಿಗ‘ರೇಟ್’ ಬೆಲೆ ಜಾಸ್ತಿ !
ಎಣ್ಣೆಕಾಳಿಗಿಂತ ಕಳ್ಳಭಟ್ಟಿಯೇ ತುಟ್ಟಿ| ಪ್ರತಿ ಕೆಜಿಗೆ ಅಕ್ಕಿ 44 ರು., ಬೇಳೆ 65 ಹಾಗೂ ಪಾಮ್ ಆಯಿಲ್ 80 ರು.ಳಿಷ್ಟಿದ್ದರೆ, ಮದ್ಯ ಹಾಗೂ ತಂಬಾಕು ಉತ್ಪನ್ನಗಳ ಕಾಳಸಂತೆಯಲ್ಲಿ ಮಾರಾಟ ಮೂರ್‍ನಾಲ್ಕು ಪಟ್ಟು ದರ ಹೆಚ್ಚಳ|
ಆನಂದ್ ಎಂ. ಸೌದಿ
ಯಾದಗಿರಿ(ಏ.23): ದಿನಸಿ ಅಂಗಡಿಗಳಲ್ಲಿನ ಅಕ್ಕಿ-ಬೇಳೆ ದರಕ್ಕಿಂತ, ಕಳ್ಳಮಾರ್ಗದ ಮೂಲಕ ಈಗಲೂ ಮಾರಾಟವಾಗುತ್ತಿರುವ ಮದ್ಯ ಹಾಗೂ ತಂಬಾಕು ಉತ್ಪನ್ನಗಳ ಬೆಲೆ ಮೂರರಿಂದ ನಾಲ್ಕು ಪಟ್ಟು ಹೆಚ್ಚಾಗಿರುವುದು ಆಘಾತ ಮೂಡಿಸಿದೆ. ಪ್ರತಿ ಕೆಜಿಗೆ ಅಕ್ಕಿ 44 ರು., ಬೇಳೆ 65 ಹಾಗೂ ಪಾಮ್ ಆಯಿಲ್ 80 ರು.ಳಿಷ್ಟಿದ್ದರೆ, ಮದ್ಯ ಹಾಗೂ ತಂಬಾಕು ಉತ್ಪನ್ನಗಳ ಕಾಳಸಂತೆಯಲ್ಲಿ ಮಾರಾಟ ಮೂರ್‍ನಾಲ್ಕು ಪಟ್ಟು ದರ ಹೆಚ್ಚಾಗಿದೆ.
ಲಾಕ್ ಡೌನ್ ಘೋಷಣೆಯಾದ ಸಂದರ್ಭದಲ್ಲಿ ಮದ್ಯ ಮಾರಾಟಕ್ಕೂ ನಿಷೇಧ ಹೇರಲಾಗಿತ್ತು. ಹೀಗಾಗಿ, ಮುನ್ಸೂಚನೆ ಅರಿತ ಬಹುತೇಕ ಅಂಗಡಿಗಳು ಬೇರೆಡೆ ದಾಸ್ತಾನು ಸಂಗ್ರಹಿಸಿಟ್ಟುಕೊಂಡಿದ್ದವು ಎನ್ನಲಾಗಿದೆ.
ಯಾದಗಿರಿ: ಕಳ್ಳಭಟ್ಟಿಗೆ ಯುವಕ ಬಲಿ ?
2800 ರು.ಗಳ ಮೊದಲಿದ್ದ ಹಂಡ್ರೆಡ್ ಪೈಪರ್ ಬಾಟಲಿ ಈಗ 6 ಸಾವಿರ ರು.ಗಳವರೆಗೆ ಮಾರಾಟವಾಗುತ್ತಿದೆ. 3100 ರು.ಗಳ ಬ್ಲಾಕ್ ಆಂಡ್ ವ್ಹೈಟ್ ಎಂಟು ಸಾವಿರ ರು.ಗಳ ದರ ಹೆಚ್ಚಿಸಿಕೊಂಡಿದೆ. ಸಾಮಾನ್ಯ ದಿನಗಳಲ್ಲಿ 45-50 ರು.ಗಳಿಗೆ ಮಾರಾಟವಾಗುತ್ತಿದ್ದ ಚೀಪ್ ಲಿಕ್ಕರ್‌ಗಳಾದ ಓಲ್ಡ್ ಟಾವೆರನ್ (90 ಎಂ.ಎಲ್.) ಓರಿಜಿನಲ್ ಚಾಯ್ಸ್ 150 ರಿಂದ 180 ರು.ಗಳು, ಬ್ಯಾಗ್ ಪೈಪರ್ (180 ಎಂ.ಎಲ್.) 120 ರಿಂದ ಈಗ 700 ರು.ಗಳವರೆಗೆ ತುಟ್ಟಿಯಾಗಿದೆ. ಎಂಸಿ ವಿಸ್ಕಿ ಹಾಗೂ ಮ್ಯಾಕ್ ಡೊವೆಲ್ 180ರಿಂದ 800 ರು.ಗಳಿಗೆ ಕಿಕ್ಕೇರಿಸಿಕೊಂಡಿದೆ. ಬೀಯರ್ ಮಾರಾಟದ ರಿಸ್ಕು ಅನ್ನೋ ಕಾರಣಕ್ಕೆ ಅದರ ಮಾರಾಟದಲ್ಲಿ ಕೊಂಚ ಕಡಮೆ ಕಂಡರೂ ಸಹ, 110ರು.ಗಳ ಒಂದು ಬಾಟಲಿ ಮುನ್ನೂರು ರುಪಾಯಿಗಳ ಕಂಡಿದೆ.
ಗುಟ್ಕಾ ಸಿಗ‘ರೇಟು’ ಜಾಸ್ತಿ :
ಅಗತ್ಯ ವಸ್ತುಗಳ ಮಾರಾಟದ ನೆಪದಲ್ಲಿ, ದಿನಸಿ ವ್ಯಾಪಾರಕ್ಕಿಂತ ಹೆಚ್ಚಾಗಿ ಗುಟ್ಕಾ ಹಾಗೂ ಸಿಗರೇಟ್ ಮಾರಾಟವನ್ನೇ ಪ್ರಮುಖವಾಗಿಟ್ಟುಕೊಂಡ ಕೆಲವು ಡೀಲರುಗಳು, ಮೂರ್‍ನಾಲ್ಕು ಪಟ್ಟು ದರ ಹೆಚ್ಚಿಸಿವೆ.
15 ರು.ಗಳ ಆರ್‌ಎಂಡಿ ಗುಟ್ಕಾ ಪ್ಯಾಕೇಟ್ ಈಗ ಕಾಳಸಂತೆಯಲ್ಲಿ 60 ರು.ಗಳಿಗೇರಿದೆ. 60 ಪ್ಯಾಕೆಟ್ಗ್‌ಳ ಒಂದು ಬಾಕ್ಸಿಗೆ ಇದ್ದ 800 ರು.ಗಳು ಈಗ 2800 ರಿಂದ 3 ಸಾವಿರಕ್ಕೇರಿದೆ.
200 ಪ್ಯಾಕೆಟ್ಗ್‌ಳ ಒಂದು ಕಾಟನ್ ವಿಮಲ್ ಗುಟ್ಕಾ ಈ ಮೊದಲು 22500 ರು.ಗಳಿದ್ದರೆ, ಈಗ 60 ಸಾವಿರಕ್ಕೇರಿದೆ ! 5 ರು.ಗಳ ಒಂದು ಪೌಚ್ 20 ರು.ಗಳ ಕಂಡಿದೆ. ಕಿಂಗ್ ಸೈಜ್ ಸಿಗರೇಟ್ 165 ರು.ಗಳಿಂದ ಈಗ 220 ರಿಂದ 230ರು.ಗಳಾದರೆ, ಗೋಲ್ಡ ಫ್ಲಾಕ್ 88 ರು. ಇದ್ದುದ್ದು ಕಾಳಸಂತೆಯಲ್ಲೀಗ 150 ರು.ಗಳಿದೆ. ಒಂದು ಸಿಗರೇಟ್ 25 ರಿಂದ 30 ರು. ಹೆಚ್ಚಳ ಕಂಡಿದೆ. ಈ ಮಧ್ಯೆ, ನಕಲು ಮಾಲುಗಳೂ ಸಹ ಪ್ರವೇಶಿಸಿದ್ದು, ಮತ್ತಷ್ಟೂ ಅಪಾಯ ಮೂಡಿಸಿದೆ.
ಕಳ್ಳಭಟ್ಟಿ ಬಲು ತುಟ್ಟಿ!
ಕಳ್ಳಭಟ್ಟಿ ದಂಧೆ ಹೆಚ್ಚಿದ್ದು, 2 ಲೀಟರ್‌ಗಳ ಒಂದು ತಂಬಿಗೆಗೆ 50 ರು.ಗಳಿದ್ದು, ಈಗ 700 ರು.ಗಳಿಗೆ ಒಂದು ಲೀಟರ್ ಅಂತೆ ! ಸಿಎಚ್ ಪೌಡರ್, ಸ್ಯಾಕ್ರೀನ್ ಹಾಗೂ ಸಾರಾಯಿ ತಯಾರಿಕೆಗೆ ಬಳಸುವ ವೈಟ್ ಪೇಸ್ಟ್ ವೊಂದನ್ನು ಕಾಗದದಲ್ಲಿ ಕಟ್ಟಿ, 50 ರು.ಗಳ ಪ್ರತಿ ಪೊಟ್ಟಣ ಜೇಬಿನಲ್ಲಿಟ್ಟಕೊಂಡು ಪೊಲೀಸ್ ಹಾಗೂ ಅಬಕಾರಿ ಕಣ್ತಪ್ಪಿಸಿ ಮಾರಾಟವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಬಾಲಕರೂ ಸಹ ಇದರ ಚಟ್ಟಕ್ಕಂಟಿಕೊಳ್ಳುತ್ತಿರುವುದು ಆತಂಕ ಮೂಡಿಸಿದೆ.