ಬೆಂಗಳೂರು[ಮಾ.21]: ಕೊರೋನಾ ವೈರಾಣು ಹರಡುವುದನ್ನು ನಿಯಂತ್ರಿಸಲು ಹಾಗೂ ವೈರಾಣು ಶಂಕಿತರು, ಸೋಂಕಿತರ ಅನುಕೂಲಕ್ಕಾಗಿ ಎಲ್ಲಾ ಆಸ್ಪತ್ರೆಗಳು ತಮ್ಮಲ್ಲಿ ಚೇತರಿಸಿಕೊಂಡಿರುವ ರೋಗಿಗಳನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು. ಜತೆಗೆ, ಆರೋಗ್ಯ ಸ್ಥಿರವಾಗಿರುವ ರೋಗಿಗಳನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಬಾರದು ಎಂದು ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಇದೇ ವೇಳೆ ತುರ್ತು ಅಗತ್ಯವಿರುವ ಯಾವುದೇ ಶಸ್ತ್ರಚಿಕಿತ್ಸೆಯನ್ನು ಆಸ್ಪತ್ರೆಗಳು ಮುಂದೂಡುವಂತಿಲ್ಲ ಎಂದೂ ಹೇಳಿದೆ. ಶುಕ್ರವಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ, ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲವು ಹಾಸಿಗೆಗಳನ್ನು ಮೀಸಲಿಟ್ಟು ಕೊರೋನಾ ಚಿಕಿತ್ಸೆಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಎಲ್ಲಾ ಆಸ್ಪತ್ರೆಗಳು ಸಹ ಮಾಸ್ಕ್‌, ಗ್ಲೌಸ್‌, ವೈಯಕ್ತಿಕ ರಕ್ಷಣಾ ಪರಿಕರ ಸೇರಿದಂತೆ ಅಗತ್ಯ ವಸ್ತುಗಳ ಹೆಚ್ಚುವರಿ ದಾಸ್ತಾನು ಮಾಡಿಕೊಳ್ಳಬೇಕು. ವೆಂಟಿಲೇಟರ್‌ ಹಾಗೂ ಆಕ್ಸಿಜನ್‌ ಮಾಸ್ಕ್‌ ಖರೀದಿ ಮಾಡಬೇಕು. ಎಲ್ಲಾ ಆಸ್ಪತ್ರೆಗಳು ಐಸಿಯು, ವೆಂಟಿಲೇಟರ್‌ ನಿರ್ವಹಣೆಗೆ ಅಗತ್ಯ ತಜ್ಞ ಸಹಾಯಕರನ್ನು ಸಿದ್ಧಪಡಿಸಿಕೊಳ್ಳಬೇಕು. ವೈದ್ಯರು, ಶುಶ್ರೂಷಕರು, ಆರೋಗ್ಯ ಸಹಾಯಕರು, ಅರೆ ವೈದ್ಯಕೀಯ ಸಿಬ್ಬಂದಿಗೆ ಸೋಂಕು ನಿವಾರಣೆ ಕುರಿತು ತರಬೇತಿ ಪಡೆಯಬೇಕು ಎಂದು ಹೇಳಿದೆ.

ನಾಳೆ ಸಿದ್ಧತೆಯ ಅಣಕು:

ಮಾ.22ರಂದು ಎಲ್ಲಾ ಆಸ್ಪತ್ರೆಗಳು ಕೊರೋನಾ ಸೋಂಕಿತರ ಚಿಕಿತ್ಸೆ ಧಾವಿಸುವ ಬಗ್ಗೆ ಅಣಕು ಪ್ರದರ್ಶನ ಮಾಡಿ ಸಿದ್ಧತೆ ಪರೀಕ್ಷಿಸಿಕೊಳ್ಳಬೇಕು. ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ವೆಬ್‌ಸೈಟ್‌ನಲ್ಲಿರುವ ಮಾದರಿ ವಿಡಿಯೋ ಅನುಕರಿಸಬಹುದು ಎಂದು ಇಲಾಖೆ ಸೂಚಿಸಿದೆ.

ಕೊರೋನಾ ಆತಂಕ: ಅಂತಾರಾಜ್ಯ ವಾಹನಗಳ ಓಡಾಟ ಕಡಿತ

ಇನ್ನು ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡುವಾಗಿ ಸೋಂಕು ಅಂಟಿಸಿಕೊಂಡ ವೈದ್ಯರಿಗೆ ಎಲ್ಲಾ ಆಸ್ಪತ್ರೆಗಳು ಉಚಿತವಾಗಿ ಚಿಕಿತ್ಸೆ ನೀಡಬೇಕು. ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ನ್ಯುಮೋನಿಯಾ ರೋಗಿಗಳಿಗೆ ಮುಂಚಿತವಾಗಿಯೇ ಕೊರೋನಾ ಪರೀಕ್ಷೆ ನಡೆಸಬೇಕು ಎಂದು ಹೇಳಿದೆ.

‘ವಿದ್ಯುತ್‌ ಸಂಪರ್ಕ ಕಡಿತಕ್ಕೆ ತಡೆ ನೀಡಿ’

ಕೊರೋನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ವಿದ್ಯುತ್‌ ಶುಲ್ಕ ಪಾವತಿಸದ ಸಾರ್ವಜನಿಕರ ಮನೆ-ಮನೆಗೂ ತೆರಳಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವ ಕಾರ್ಯಕ್ಕೆ ತಡೆ ನೀಡುವಂತೆ ಕೆಪಿಟಿಸಿಎಲ್‌ ನೌಕರರು ಮನವಿ ಮಾಡಿದ್ದಾರೆ.

ವೈರಸ್ ವಿರುದ್ಧ ಹೋರಾಟ: IT,BT ಕಂಪನಿ ನೌಕರರಿಗೆ 'ವರ್ಕ್ ಫ್ರಂ ಹೋಂ'

ಕೊರೋನ ಸೋಂಕು ಮುನ್ನೆಚ್ಚರಿಕೆ ಸಲುವಾಗಿ ವಿದ್ಯುತ್‌ ಶುಲ್ಕ ವಸೂಲಾತಿಗೆ ನೇಮಿಸಿರುವ ಸಿಬ್ಬಂದಿಯ ಕೆಲಸಕ್ಕೆ ಕೆಲ ಕಾಲ ತಡೆ ನೀಡಬೇಕು. ಉಳಿದಂತೆ ನಿಗಮಗಳಿಗೆ ಅಗತ್ಯವಿರುವ ತುರ್ತು ಸೇವೆಗಳನ್ನು ನಿರ್ವಹಿಸಲು ಸಿದ್ಧವಿದ್ದೇವೆ ಎಂದು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ ನೌಕರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ರಾಥೋಡ್‌ ಅವರು ಪತ್ರ ಬರೆದಿದ್ದಾರೆ.

‘ಮುಖ್ಯ ದ್ವಾರದಲ್ಲೇ ಆಹಾರ ಸ್ವೀಕರಿಸಿ’

ರೆಸ್ಟೋರೆಂಟ್‌ಗಳಿಗೆ ಹೋಗಿ ಊಟ ಮಾಡುವುದನ್ನು ಆದಷ್ಟುನಿಯಂತ್ರಿಸಬೇಕು. ಝೊಮೊಟೊ, ಸ್ವಿಗ್ಗಿ, ಫ್ರೆಶ್‌ಮೆನು, ಊಬರ್‌ಈಟ್ಸ್‌ನಂತಹ ಆನ್‌ಲೈನ್‌ ಮೂಲಕ ಊಟ ವಿತರಣೆ ಮಾಡುವವರಿಗೆ ಸುರಕ್ಷತಾ ಕ್ರಮ ಪಾಲಿಸುವಂತೆ ಸೂಚಿಸಲಾಗಿದೆ. ಅವರಿಂದ ಆಹಾರ ಪಡೆಯುವಾಗ ಅಪಾರ್ಟ್‌ಮೆಂಟ್‌ ಹಾಗೂ ಗೇಟೆಡ್‌ ಕಮ್ಯುನಿಟಿಗಳವರು ದ್ವಾರದಲ್ಲೇ ಆಹಾರ ಸ್ವೀಕರಿಸಬೇಕು. ಇನ್ನು ಮನೆಗಳಿಗೆ ಕೆಲಸಕ್ಕೆ ಬರುವವರ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ತುರ್ತು ಅಗತ್ಯವಿಲ್ಲದವರು ಆಸ್ಪತ್ರೆಗೆ ಬರಬೇಡಿ: ಮನವಿ

ಕೊರೋನಾ ವೈರಸ್‌ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ತುರ್ತು ಅಗತ್ಯವಿಲ್ಲದ ಚಿಕಿತ್ಸೆಗಳನ್ನು ಸ್ವಯಂ ಮುಂದೂಡುವಂತೆ ನಿಮ್ಹಾನ್ಸ್‌ ಆಸ್ಪತ್ರೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ನಿರ್ದೇಶಕ ಡಾ. ಬಿ.ಎನ್‌. ಗಂಗಾಧರ್‌ ಸಾರ್ವಜನಿಕವಾಗಿ ಸುತ್ತೋಲೆ ಹೊರಡಿಸಿದ್ದಾರೆ.

ವೃದ್ಧರು ಮತ್ತು ಮಕ್ಕಳು ಬೇಗನೆ ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಅಂತಹವರು ಮನೆಯಿಂದ ಹೊರಗೆ ಹೋಗದಿರುವುದನ್ನು ನಿಯಂತ್ರಿಸಬೇಕು. ಇಂತಹ ಸಂದರ್ಭದಲ್ಲಿ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೊಡ್ಡ ಆಸ್ಪತ್ರೆಗಳಿಗೆ ಹೋದಲ್ಲಿ ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ಯಾವುದೇ ಗಂಭೀರ ಅಲ್ಲದ ಕಾಯಿಲೆಗಳಿದ್ದಲ್ಲಿ ಚಿಕಿತ್ಸೆ ಮುಂದೂಡಬೇಕು. ತುರ್ತು ಚಿಕಿತ್ಸೆ ಅಗತ್ಯ ಇರುವವರು ಮಾತ್ರವೇ ಆಸ್ಪತ್ರೆಗೆ ಬರಬೇಕು ಎಂದು ಮನವಿ ಮಾಡಿದ್ದಾರೆ.