ಆರ್ಥಿಕ ಸಬಲೀಕರಣಕ್ಕೆ ಗ್ಯಾರಂಟಿ ಯೋಜನೆಗಳು ಸಹಕಾರಿ
ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರದ ಗೃಹಲಕ್ಷ್ಮಿ ನೊಂದಣಿ ಕಾರ್ಯವು ತಾಲೂಕಿನಲ್ಲಿ ಯಶಸ್ವಿಯಾಗಿದ್ದು ಅವರ ಖಾತೆಗಳಿಗೆ ಹಣ ಜಮಾವಣೆಯಾಗಲಿದೆ ಎಂದು ತಹಸೀಲ್ದಾರ್ ಮುನಿಶಾಮಿರೆಡ್ಡಿ ತಿಳಿಸಿದರು.
ಹೊಳವನಹಳ್ಳಿ : ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರದ ಗೃಹಲಕ್ಷ್ಮಿ ನೊಂದಣಿ ಕಾರ್ಯವು ತಾಲೂಕಿನಲ್ಲಿ ಯಶಸ್ವಿಯಾಗಿದ್ದು ಅವರ ಖಾತೆಗಳಿಗೆ ಹಣ ಜಮಾವಣೆಯಾಗಲಿದೆ ಎಂದು ತಹಸೀಲ್ದಾರ್ ಮುನಿಶಾಮಿರೆಡ್ಡಿ ತಿಳಿಸಿದರು.
ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ಕೇಂದ್ರದ ವಾಲ್ಮೀಕಿ ಸಮುದಾಯ ಭವನದಲ್ಲಿ ಹೋಳವನಹಳ್ಳಿ ಗ್ರಾಮಪಂಚಾಯತಿ ಆಯೋಜಿಸಿದ್ದ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರದ ಆದೇಶದಂತೆ ತಾಲೂಕಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಮಹಿಳೆಯರಿಗೆ ಈ ಯೋಜನೆಯಡಿ ಮಾಸಿಕ 2000 ಹಣ ಅವರ ಖಾತೆಗೆ ಜಮಾವಣೆಯಾಗಲ್ಲಿದ್ದು ಅವರ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದ್ದು, ರಾಜ್ಯದ ಅಭಿವೃದ್ಧಿಯಾಗಲಿದೆ. ಎಲ್ಲಾ ತಾಯಂದಿರು ಈ ಹಣವನ್ನು ಸದುಪಯೋಗ ಮಾಡಿಕೊಳ್ಳಬೇಕಾಗಿ ವಿನಂತಿ ಎಂದರು.
ನೋಡಲ್ ಆಧಿಕಾರಿ ಅಶೋಕ್ ಮಾತನಾಡಿ, ಸರ್ಕಾರದ ಈ ಯೋಜನೆಯನ್ನು ಜಾರಿಗೊಳಿಸಲು ಎಲ್ಲರೂ ಶ್ರಮವಹಿಸಿದ್ದು, ಮಹಿಳೆಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಸರ್ಕಾರ ನೀಡುವ ಈ ಹಣದಲ್ಲಿ ಹಲವಾರು ಮಹಿಳೆಯರಿಗೆ ಕುಟುಂಬದ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದರು.
ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ದೊಡ್ಡಸಿದ್ದಪ್ಪ ಮಾತನಾಡಿ, ತಾಲೂಕಿನ 24 ಪಂಚಾಯಿತಿಗಳಲ್ಲಿ ಈ ಯೋಜನೆಯ ನೊಂದಣಿ ಕಾರ್ಯವನ್ನು ಮುಗಿಸಿದ್ದು ಮಹಿಳೆಯರ ಖಾತೆಗಳಿಗೆ ಇಂದು ಹಣ ಜಮಾವಣೆಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿ ಶಬೀರ್ ಅಹಮದ್, ಸಿಡಿಪಿಒ ಅಂಬಿಕಾ, ಸಹಾಯಕ ಕೃಷಿ ನಿರ್ದೆಶಕ ನಾಗರಾಜು, ಗ್ರಾಪಂ ಅಧ್ಯಕ್ಷೆ ಗುಲ್ಜಾರ್ ಭಾನು, ಪಿಡಿಒ ಪೃಥ್ವಿಭಾ, ಮುಖಂಡರಾದ ಕವಿತಮ್ಮ, ಗ್ರಾಪಂ ಸದಸ್ಯರಾದ ಮರುಡಪ್ಪ, ದೇವರಾಜು, ಸೇರಿದಂತೆ ಇತರರು ಇದ್ದರು.