ಗೃಹಲಕ್ಷ್ಮೀ ಹಣದಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಕಟ್ಟಿಸಿದ ತಾಯಿ!
ಬೆಳಗಾವಿಯ ಮಹಿಳೆಯೊಬ್ಬರು ಗೃಹಲಕ್ಷ್ಮೀ ಯೋಜನೆಯ ಹಣದಿಂದ ತಮ್ಮ ಗ್ರಾಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗ್ರಂಥಾಲಯ ನಿರ್ಮಿಸಿದ್ದಾರೆ. ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ ಹಾಗೂ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು (ಅ.13): ಗೃಹಲಕ್ಷ್ಮೀ ಹಣದಿಂದ ಟಿವಿ, ಫ್ರಿಜ್ ತೆಗೆದುಕೊಂಡಿದ್ದು ಸುದ್ದಿಯಾಗಿತ್ತು. ಇತ್ತೀಚೆಗೆ ಉತ್ತರ ಕರ್ನಾಟಕದ ಮಹಿಳೆಯೊಬ್ಬಳು ಇಡೀ ಊರಿಗೆ ಹೋಳಿಗೆ ಊಟವ್ನೂ ಹಾಕಿಸಿದ್ದರು. ಎರಡು ದಿನಗಳ ಹಿಂದೆ ಮಹಿಳೆಯೊಬ್ಬಳು ತನ್ನ ಮಗನಿಗೆ ಬೈಕ್‌ಅನ್ನು ಗೃಹಲಕ್ಷ್ಮೀ ಹಣದಲ್ಲಿ ಖರೀದಿ ಮಾಡಿದ್ದರು. ಈಗ ಬೆಳಗಾವಿಯ ರಾಯಭಾಗ ತಾಲೂಕಿನ ಮಂಟೂರ ಗ್ರಾಮ ಪಂಚಾಯತಿಯ ಮಹಿಳೆ ಮಲ್ಲವ್ವ ಭೀಮಪ್ಪ ಮೇಟಿ, ಗೃಹಲಕ್ಷ್ಮೀಯಿಂದ ಬಂದ ಹಣದಿಂದ ಗ್ರಾಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಡೆವಲಪ್‌ಮೆಂಟ್ ಕಮೀಷನರ್ ಉಮಾ ಮಹದೇವನ್ ದಾಸ್‌ಗುಪ್ತ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಟ್ಯಾಗ್ ಮಾಡಿದ್ದಾರೆ.ಮಂಟೂರ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾಗಿರುವ ಮಲ್ಲವ್ವ ಭೀಮಪ್ಪ ಮೇಟಿ ಅವರ ಕಾರ್ಯಕಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಒಟ್ಟೂ ಒಂದೂವರೆ ಲಕ್ಷ ಖರ್ಚು: ತಮ್ಮ ಊರಿನ ಮಕ್ಕಳು ಓದುವುದಕ್ಕಾಗಿಯೇ ಬೆಂಗಳೂರು, ಧಾರವಾಡ, ಬಿಜಾಪುರಕ್ಕೆ ಹೋಗುತ್ತಾರೆ.ಅಲ್ಲಿ ಅವರ ತರಬೇತಿಗೆ ತಿಂಗಳು ತಿಂಗಳು ಹಣದ ಸಮಸ್ಯೆ ಆಗ್ತಿತ್ತು.ಊಟ, ಆರೋಗ್ಯದ ಸಮಸ್ಯೆ ಕೂಡ ಕಾಡ್ತಿದ್ದವು. ಅಲ್ಲಿ ಲೈಬ್ರರಿಯಲ್ಲಿ ಕುಳಿತು ಅವರು ಓದುತ್ತಾರೆ. ಇಂಥವರಿಗಾಗಿ ನಮ್ಮಲ್ಲಿಯೇ ಒಂದು ಲೈಬ್ರೆರಿ ಕಟ್ಟಬೇಕು ಅನ್ನೋದು ನನ್ನ ಕನಸಾಗಿತ್ತು. ನನಗೆ ಹದಿಮೂರು ತಿಂಗಳಿನಿಂದ ಗೃಹಲಕ್ಷ್ಮೀ ಹಣ 26 ಸಾವಿರ ರೂಪಾಯಿ ಬಂದಿತ್ತು. ಅದರೊಂದಿಗೆ ಗ್ರಾಮ ಪಂಚಾಯಿತಿ ಮೆಂಬರ್ ಆಗಿರುವ ಕಾರಣಕ್ಕೆ ಗೌರವ ಧನ ಕೂಡ ಸಿಗುತ್ತದೆ.ಈ ಎಲ್ಲಾ ಹಣವನ್ನು ಒಟ್ಟು ಮಾಡಿ ನಾನು ಒಂದು ಸಣ್ಣ ಪ್ರಮಾಣದ ಗ್ರಂಥಾಲಯ ಕಟ್ಟಿದ್ದೇನೆ. ಸಣ್ಣ ಗ್ರಂಥಾಲಯಕ್ಕೆ ಒಂದೂವರೆ ಲಕ್ಷ ರೂಪಾಯಿ ಖರ್ಚಾಗಿದೆ ಎಂದು ಮಲ್ಲವ್ವ ಭೀಮಪ್ಪ ಮೇಟಿ ಹೇಳಿದ್ದಾರೆ.
ಇನ್ನು ಮಲ್ಲವ್ವ ಭೀಮಪ್ಪ ಮೇಟಿ ಹೆಚ್ಚೇನೂ ಓದಿದವರೂ ಅಲ್ಲ. ಆದರೆ, ತಮ್ಮ ಊರ ಮಕ್ಕಳು ಓದಬೇಕು. ಒಳ್ಳೆಯ ಕೆಲಸ ಪಡೆದುಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಈ ಕೆಲಸ ಮಾಡಿದ್ದಾಗಿ ಹೇಳುತ್ತಾರೆ. ತಮ್ಮ ಇಡೀ ಕುಟುಂಬದಲ್ಲಿ 8 ಮಂದಿ ಇದ್ದಾರೆ. ಕೃಷಿ ಹಾಗೂ ಕುರಿ ಸಾಕಾಣಿಕೆಯೇ ತಮ್ಮ ಕೆಲಸ ಎಂದು ಹೇಳಿಕೊಂಡಿದ್ದಾರೆ.
ಇನ್ನು ಅವರ ಈ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳೂ ಬಂದಿವೆ. 'ಜನರ ದುಡ್ಡನ್ನು ದೋಚುವ ಕಳ್ಳ ಜನರು ನಿನ್ನನ್ನು ನೋಡಿ ಕಲಿಯಬೇಕಿದೆ ತಾಯಿ. ತಮ್ಮ ನಂತರದ ಹಲವಾರು ತಲೆಮಾರಿಗೆ ಆಸ್ತಿ ಮಾಡಿಟ್ಟುರಿವವರ ಮದ್ಯೆ ನೀವು ಎತ್ತರದಲ್ಲಿ ನಿಲ್ಲುವಿರಿ..'ಎಂದು ರಂಗಪ್ರತಾಪ್ ಸಿಂಹ ಎನ್ನುವವರು ಕಾಮೆಂಟ್ ಮಾಡಿದ್ದಾರೆ. 'ನಿಜವಾದ ಉದ್ದೇಶ ಕ್ಕೆ ಬಳಕೆ ಯಾಗದ ಗ್ರಹ ಲಕ್ಷ್ಮಿ ಯೋಜನೆ. ಈ ಯೋಜನೆ ಯಲ್ಲಿ ತೆರಿಗೆ ಹಣ ವೇಸ್ಟ್ ಆಗಿದೆ. ಈ ಯೋಜನೆ ಹಣ ದಲ್ಲಿ ಸರ್ಕಾರ ವೇ ಇಂತ ಕೆಲಸ ಮಾಡಬಹುದಿತ್ತು..' ಎಂದು ಬರೆದಿದ್ದಾರೆ.
'ನಿಮ್ಮ ಕೆಲಸ ಒಳ್ಳೆಯದೇ ಅಮ್ಮ. ಆದರೆ ನನ್ನ ಅಭಿಪ್ರಾಯ ಏನೆಂದರೆ ಯಾರಿಗೆ ತಮ್ಮ ಸ್ವಂತಕ್ಕೆ ಗೃಹಲಕ್ಷ್ಮಿ ಹಣ ಅಗತ್ಯ ಇಲ್ಲವೋ ಅವರು ಅಂತಹ ಯೋಜನೆಗಳನ್ನು ಉಪಯೋಗಿಸಿ ಕೊಳ್ಳಬಾರದು. ಇದರಿಂದ ಮುಖ್ಯವಾಗಿ ಅಗತ್ಯ ಇರುವರಿಗಾದರೂ ಸಿಗಲಿ..' ಎಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ನೀವು ಮಾಡ್ತಾ ಇರೋದು ಒಳ್ಳೆ ಕೆಲಸ .ದನ್ಯವಾದಗಳು ನಿಮಗೆ ..ಒಳ್ಳೆದಾಗಲಿ... ಆದರೆ ಗೃಹ ಲಕ್ಷಿ ಹಣ ಅಂದ್ರಿ ಅಲ್ವಾ ಅದು ಹೇಗೆ ಸಾಧ್ಯ ಅಂತ ..10 ತಿಂಗಳ ಕಂತಲ್ಲಿ ಇದು ಹೇಗೆ ಸಾಧ್ಯ ಅಂತ' ಎಂದು ಪ್ರಶ್ನೆ ಮಾಡಿದ್ದಾರೆ.
ಗೃಹ ಲಕ್ಷ್ಮಿ ಹಣ ಕೂಡಿಟ್ಟು ಸೊಸೆಗೆ ಫ್ಯಾನ್ಸಿ ಸ್ಟೋರ್ ಹಾಕಿಸಿಕೊಟ್ಟ ಅತ್ತೆ!
'ಸರ್ಕಾರದಿಂದ ಬಂದ ಹಣವೋ ಅಥವಾ ಸ್ವಂತ ದುಡಿಮೆಯ ಹಣವೋ.. ಅದು ಬೇಡ. ಮಕ್ಕಳಿಗೆ ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಅನುಕೂಲವಾಗುವಂತೆ ಗ್ರಂಥಾಲಯ ಮಾಡಿಕೊಟ್ಟದ್ದು ಚೆನ್ನಾಗಿದೆ. ಮುಂದೆ ಇನ್ನೂ ಹೆಚ್ಚು ಹೆಚ್ಚು ಪುಸ್ತಕಗಳು ಬಂದು ಮಕ್ಕಳಿಗೆ ಅನುಕೂಲವಾಗಲಿ.'ಎಂದು ಪ್ರದೀಪ್ ಎನ್ನುವವರು ಕಾಮೆಂಟ್ ಮಾಡಿದ್ದಾರೆ.
ಗೃಹಲಕ್ಷ್ಮೀ ದುಡ್ಡಿನಲ್ಲಿ ಊರಿಗೆಲ್ಲ ಹೋಳಿಗೆ ಊಟ ಹಾಕಿಸಿದ ವೃದ್ಧೆ!