ಅಂತರ್ಜಲ ಕುಸಿತ: ನೀರಿಲ್ಲದೇ ನದಿಗಳ ಒಡಲು ಖಾಲಿ ಖಾಲಿ!
ಪೂರ್ವ ಮುಂಗಾರು ಕೊರತೆಯಿಂದ ನದಿಗಳ ಒಡಲು ಖಾಲಿಯಾಗಿದೆ. ನೀರಿನ ಹರಿವೇ ಇಲ್ಲದೇ ಖಾಲಿ ಬಂಡೆಗಳ ದರ್ಶನ ಎಲ್ಲೆಲ್ಲೂ ಕಾಣಸಿಗುತ್ತಿದೆ. ನದಿ ಪಾತ್ರದ ಅಕ್ಕ-ಪಕ್ಕದ ಬೋರ್‌ವೆಲ್‌ಗಳು ಬತ್ತಿಹೋಗಿವೆ. ಅಂತರ್ಜಲವೂ ಕುಸಿದಿದೆ.
ಹಲಗೂರು (ಮೇ.19): ಪೂರ್ವ ಮುಂಗಾರು ಕೊರತೆಯಿಂದ ನದಿಗಳ ಒಡಲು ಖಾಲಿಯಾಗಿದೆ. ನೀರಿನ ಹರಿವೇ ಇಲ್ಲದೇ ಖಾಲಿ ಬಂಡೆಗಳ ದರ್ಶನ ಎಲ್ಲೆಲ್ಲೂ ಕಾಣಸಿಗುತ್ತಿದೆ. ನದಿ ಪಾತ್ರದ ಅಕ್ಕ-ಪಕ್ಕದ ಬೋರ್‌ವೆಲ್‌ಗಳು ಬತ್ತಿಹೋಗಿವೆ. ಅಂತರ್ಜಲವೂ ಕುಸಿದಿದೆ. ಈ ಬಾರಿ ಮಳೆ ಕೊರತೆಯಿಂದ ಹಲಗೂರು ಸಮೀಪದ ತೊರೆಕಾಡನಹಳ್ಳಿ ಗ್ರಾಮದ ಬಳಿ ಶಿಂಷಾ ನದಿ ಪಾತ್ರ ಬೋಳಾಗಿ ಕಾಣುತ್ತಿದೆ. ನೀರಿನ ಸಣ್ಣ ಹರಿವೂ ಕಾಣಸಿಗುತ್ತಿಲ್ಲ. ಇತ್ತೀಚೆಗೆ ಬಿದ್ದ ಸ್ವಲ್ಪ ಮಳೆಯಿಂದ ಅಲ್ಲಲ್ಲಿ ನೀರು ನಿಂತು ಕಲ್ಲು-ಬಂಡೆಗಳೇ ಕಾಣಸಿಗುತ್ತಿವೆ. ಭಾರೀ ಮಳೆ ಒಮ್ಮೆಯೂ ಸುರಿಯದಿರುವುದರಿಂದ ನದಿ ಪಾತ್ರಗಳು ಆಕರ್ಷಣೆಯನ್ನೇ ಕಳೆದುಕೊಂಡಿವೆ.
ಕಳೆದ ವರ್ಷ ಈ ಭಾಗದಲ್ಲಿ ಪೂರ್ವ ಮುಂಗಾರು ಉತ್ತಮವಾಗಿದ್ದರಿಂದ ಶಿಂಷಾ ನದಿ ಮೈದುಂಬಿ ಹರಿದು ನದಿಯ ಅಕ್ಕ ಪಕ್ಕದಲ್ಲಿ ಬರುವ ಸಾಗ್ಯ, ಅಂತರವಳ್ಳಿ, ದಡಮಹಳ್ಳಿ, ಪುರದೊಡ್ಡಿ, ತೊರೆಕಾಡನಹಳ್ಳಿ, ಬಾಣಸಮುದ್ರ ಸೇರಿ ಇನ್ನೂ ಹಲವಾರು ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿ ರೈತರು ಬೆಳೆದಿದ್ದ ಬೆಳೆಗಳು ಹಾಗೂ ತೆಂಗಿನ ಮರ,ನೀಲಿಗಿರಿ ಮರಗಳು ಹಾಗೂ ಭತ್ತದ ಗದ್ದೆಗಳು ನೀರಿನಲ್ಲಿ ಮುಳುಗಿ, ಅಪಾರ ಬೆಳೆ ನಷ್ಟ ಆಗುವುದರ ಜೊತೆಗೆ ಬಾವಿಯಲ್ಲಿ ಹಾಕಿದ್ದ ಮೋಟಾರ್‌ಗಳು ಸಹ ಪೂರ್ತಿ ಹಾಳಾಗಿ ನಷ್ಟ ಉಂಟಾಗಿತ್ತು.
ಈ ಬಾರಿ ಮುಂಗಾರು ಮಳೆ ಇಲ್ಲದೇ, ಶಿಂಷಾ ನದಿ ಹರಿಯದೇ ಇರುವುದರಿಂದ ಪಕ್ಕದಲ್ಲಿರುವ ಜಮೀನಿನ ಕೊಳವೆಬಾವಿ ಹಾಗೂ ಬಾವಿಗಳಲ್ಲಿ ಅಂತರ್ಜಲವಿಲ್ಲದೇ ವ್ಯವಸಾಯ ಮಾಡುವುದೇ ತುಂಬಾ ಕಷ್ಟವಾಗಿದೆ. ಕಳೆದ ವರ್ಷದ ಅತಿವೃಷ್ಟಿಯಿಂದ ತೊಂದರೆಗೆ ಒಳಗಾಗಿದ್ದ ರೈತರು ಈ ಬಾರಿ ಅನಾವೃಷ್ಟಿಯಿಂದ ಸಂಕಷ್ಟ ಎದುರಿಸುವಂತಾಗಿದೆ. ಪೂರ್ವ ಮುಂಗಾರು ಈ ಸಾಲಿನಲ್ಲಿ ಉತ್ತಮವಾಗಿ ಬೀಳಲಿಲ್ಲ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಿರೀಕ್ಷೆಯಂತೆ ಮಳೆ ಬೀಳದಿದ್ದ ಕಾರಣ ನದಿಗಳು ಕಳಾಹೀನವಾದವು. ಭಾರೀ ಮಳೆಯಾಗದಿರುವುದರಿಂದ ನದಿಗಳು ತುಂಬಿ ಹರಿಯುತ್ತಿಲ್ಲ.
ಕೆನಾಲ್ ಯೋಜನೆ ಹೋರಾಟಕ್ಕೆ ಬೆಂಬಲ ಸೂಚಿಸಲ್ಲ: ಶಾಸಕ ಎಸ್.ಆರ್.ಶ್ರೀನಿವಾಸ್
ಮುಂದಿನ ತಿಂಗಳು ನಿರೀಕ್ಷೆಯಂತೆ ಮುಂಗಾರು ಮಳೆ ಆಗಮಿಸಿದರೆ ನದಿಗಳು ತುಂಬಿ ಹರಿಯುವುದರೊಂದಿಗೆ ಕೆರೆ-ಕಟ್ಟೆಗಳು ಮೈದುಂಬಿಕೊಳ್ಳಲು ಸಾಧ್ಯವಾಗಲಿದೆ. ಈ ಬಾರಿ ಬಿರು ಬೇಸಿಗೆ, ಉಷ್ಣ ಹವೆಯ ಪರಿಣಾಮ ಬೇಸಿಗೆ ಬೆಳೆ ರೈತರ ಕೈ ಸೇರಲಿಲ್ಲ. ಬೆಳೆಗಳನ್ನು ಉಳಿಸಿಕೊಳ್ಳುವುದಕ್ಕೆ ಆಧಾರವಾಗಿದ್ದ ಕೊಳವೆ ಬಾವಿಗಳೂ ಬತ್ತಿಹೋದವು. ಹೊಸದಾಗಿ ಬೋರ್‌ವೆಲ್ ಕೊರೆಸಿದರೂ ನೀರು ಬರದೇ ರೈತರು ಆರ್ಥಿಕ ಸಂಕಷ್ಟಕ್ಕೆ ಗುರಿಯಾದರು. ಕಳೆದ ವರ್ಷ ಮುಂಗಾರು ಮಳೆ ಕೊರತೆಯಿಂದ ಬೆಳೆ ಕಳೆದುಕೊಂಡಿರುವ ರೈತರು ನೀರಿನ ಕೊರತೆಯಿಂದ ಬೇಸಿಗೆ ಬೆಳೆಯನ್ನು ಕೈಸೇರಿಸಿಕೊಳ್ಳಲಾಗಲಿಲ್ಲ. ಇದೀಗ ಮುಂಗಾರು ಮಳೆ ನಿರೀಕ್ಷೆಯಂತೆ ಬೀಳಲಿ ಎಂಬ ಆಶಾಭಾವನೆಯೊಂದಿಗೆ ಎದುರು ನೋಡುತ್ತಿದ್ದಾರೆ.