Bengaluru Karaga 2022: ಕರಗ ಮಹೋತ್ಸವಕ್ಕೆ ಪಾಲಿಕೆ ಹಸಿರು ನಿಶಾನೆ!
ಕೋವಿಡ್ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಸರಳವಾಗಿ ಆಚರಿಸಲ್ಪಟ್ಟಿದ್ದ ವಿಶ್ವವಿಖ್ಯಾತ ಬೆಂಗಳೂರು ಕರಗ ಈ ಬಾರಿ ಅದ್ದೂರಿಯಾಗಿ ನಡೆಸಲು ಸಕಲ ಸಿದ್ಧತೆ ನಡೆದಿದೆ.
ಬೆಂಗಳೂರು (ಫೆ.11): ಕೋವಿಡ್ (Covid 19) ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಸರಳವಾಗಿ ಆಚರಿಸಲ್ಪಟ್ಟಿದ್ದ ವಿಶ್ವವಿಖ್ಯಾತ ಬೆಂಗಳೂರು ಕರಗ (Bengaluru Karaga) ಈ ಬಾರಿ ಅದ್ದೂರಿಯಾಗಿ ನಡೆಸಲು ಸಕಲ ಸಿದ್ಧತೆ ನಡೆದಿದೆ. ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಬೆಂಗಳೂರು ಕರಗ ಉತ್ಸವವನ್ನು ಅದ್ದೂರಿಯಾಗಿ ನಡೆಸಲು ಚಿಂತನೆ ನಡೆಸಲಾಗಿದೆ. ಪ್ರತಿ ವರ್ಷದಂತೆ ಚೈತ್ರ ಮಾಸದ ಹುಣ್ಣಿಮೆ ದಿನದಂದು ಕರಗ ಉತ್ಸವ ನಡೆಯಲಿದ್ದು ಮಾರ್ಚ್ ಮೊದಲ ಅಥವಾ ಎರಡನೇ ವಾರದಿಂದ ಸಕಲ ತಯಾರಿ ಆರಂಭಗೊಳ್ಳಲಿದೆ.
ರಾಜ್ಯದಲ್ಲಿ ಕೊರೋನಾ ಸೋಂಕು (Coronavirus) ಹತೋಟಿಗೆ ಬಂದಿರುವ ಹಿನ್ನೆಲೆಯಲ್ಲಿ ವಿಜೃಂಭಣೆಯ ಕರಗ ಆಚರಣೆಗೆ ಅನುಮತಿ ನೀಡುವಂತೆ ವಿಧಾನ ಪರಿಷತ್ ಸದಸ್ಯ ಹಾಗೂ ಸಮುದಾಯದ ಮುಖಂಡ ಪಿ.ಆರ್.ರಮೇಶ್ ಅವರು, ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ (BBMP) ಮುಖ್ಯ ಆಯುಕ್ತರಿಗೆ ಕಳೆದ ಮೂರು ದಿನಗಳ ಹಿಂದೆ ಮನವಿ ಮಾಡಿಕೊಂಡಿದ್ದರು. ರಮೇಶ್ (Ramesh) ಅವರ ಮನವಿಗೆ ಮುಖ್ಯ ಆಯುಕ್ತರು ಮೌಖಿಕ ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ತಿಗಳರಪೇಟೆಯಲ್ಲಿರುವ ಧರ್ಮರಾಯನ ಸ್ವಾಮಿ ದೇವಾಲಯದ ಆವರಣದಲ್ಲಿ ಕರಗ ಉತ್ಸವದ ಸಕಲ ಸಿದ್ಧತೆ ಆರಂಭಿಸಲಾಗಿದೆ. ದೇವಾಲಯದ ಆವರಣಕ್ಕೆ ಸುಣ್ಣಬಣ್ಣ ಬಳಿಯಲಾಗುತ್ತಿದೆ.
ದೇಗುಲ ಬಳಿಯೇ 39 ಕೊರೋನಾ ಕೇಸ್: ಬೆಂಗಳೂರು ಕರಗಕ್ಕೆ ಕರಿನೆರಳು!
ಈ ಬಾರಿಯೂ ಕರಗ ಹೊರಲಿದ್ದಾರೆ ಜ್ಞಾನೇಂದ್ರ: ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಕರಗ ಉತ್ಸವ ಇಂದಿಗೂ ತನ್ನ ಆಕರ್ಷಣೆಯನ್ನು ಕಳೆದುಕೊಂಡಿಲ್ಲ. ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಕಾಲದಿಂದಲೂ ಕರಗ ಉತ್ಸವ ನಡೆದುಕೊಂಡು ಬರುತ್ತಿದೆ. ಉತ್ಸವಕ್ಕೆ ದೇಶ ವಿದೇಶಗಳಿಂದ ಸಾವಿರಾರು ಮಂದಿ ಆಗಮಿಸುತ್ತಿದ್ದರು. ಇಂದಿಗೂ ಕರಗ ಉತ್ಸವಕ್ಕೆ ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳ 50 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ. ಕಳೆದ ಏಳು ವರ್ಷಗಳಿಂದ ಕರಗ ಹೊರುತ್ತಿರುವ ಅರ್ಚಕ ಜ್ಞಾನೇಂದ್ರ ಅವರು ಈ ಬಾರಿಯೂ ಕರಗ ಹೊರಲು ಅಗತ್ಯವಿರುವ ಸಂಪ್ರದಾಯ ಪಾಲನೆಗೆ ಮುಂದಾಗಿದ್ದಾರೆ.
ರಾಜ್ಯ ಸರ್ಕಾರ ಸಹ ಸಮ್ಮತಿ: ರಾಜ್ಯ ಸರ್ಕಾರವೂ ಕೂಡ ಬೆಂಗಳೂರು ಕರಗ ಉತ್ಸವ ಸೇರಿದಂತೆ ಸಂಪ್ರದಾಯಿಕ ಜಾತ್ರಾ ಮಹೋತ್ಸವಗಳನ್ನು ಕೋವಿಡ್ ನಿಯಮಗಳನ್ನು ಪಾಲಿಸಿ ಆಚರಿಸಲು ಅನುಮತಿ ನೀಡಿ ಆದೇಶಿಸಿದೆ. ಹೀಗಾಗಿ ಈ ಬಾರಿಯ ಬೆಂಗಳೂರು ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಬೆಂಗಳೂರು ಕರಗದ ಮಾದರಿಯಲ್ಲಿ ಸುಮಾರು 15ರಿಂದ 16 ಜಿಲ್ಲೆಗಳಲ್ಲಿ 140ಕ್ಕೂ ಹೆಚ್ಚು ಧರ್ಮರಾಯ ಸ್ವಾಮಿ-ದ್ರೌಪದಮ್ಮ ದೇವಿಯ ಕರಗ ಉತ್ಸವಗಳು ಮತ್ತು ಅನೇಕ ಪಟ್ಟಣಗಳು, ಗ್ರಾಮಗಳ ಧಾರ್ಮಿಕ ಕ್ಷೇತ್ರಗಳಲ್ಲಿ ನೂರಾರು ದೇವಾನುದೇವತೆಗಳ ಜಾತ್ರಗಳು ನಡೆಯಲಿವೆ. ಕೊರೋನಾ ಹತೋಟಿಗೆ ಬಂದಿದ್ದು ಚಿತ್ರಮಂದಿರ, ಜಿಮ್‌ಗಳಿಗೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜನರ ಒಗ್ಗೂಡಿಕೆಗೆ ಶೇ.100ರ ವಿನಾಯಿತಿ ನೀಡಿರುವುದರಿಂದ ಕರಗ ಉತ್ಸವಕ್ಕೂ ನಿರ್ಬಂಧ ತೆರವುಗೊಳಿಸಿ ಸರ್ಕಾರ ಅವಕಾಶ ನೀಡಬೇಕು ಎಂದು ಪಿ.ಆರ್.ರಮೇಶ್ ಮನವಿ ಮಾಡಿದ್ದಾರೆ.
Bengaluru: ಅಮಾನತು ಮಾಡದಂತೆ ಕೋರ್ಟ್ ಕೈಮುಗಿದ ಬಿಬಿಎಂಪಿ ಅಧಿಕಾರಿ..!
ಸದ್ಯ ಕೊರೋನಾ ಇಳಿಕೆಯಾಗಿದೆ. ಕರಗ ಆಚರಣೆಗೆ ಅಡಚಣೆ ಉಂಟಾಗುವುದಿಲ್ಲ ಎಂಬ ಭಾವನೆ ಇದೆ. ಆದರೂ ಮಾರ್ಚ್ ತಿಂಗಳಲ್ಲಿ ಮತ್ತೊಮ್ಮೆ ಅಧಿಕಾರಿಗಳು, ಸಮುದಾಯದ ಮುಖಂಡರ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
-ಗೌರವ್ ಗುಪ್ತಾ, ಬಿಬಿಎಂಪಿ ಮುಖ್ಯ ಆಯುಕ್ತ