ಬೆಂಗಳೂರು: ವಿದ್ಯುತ್ ಇಲ್ಲದೆ ಹಸಿರು ಮೆಟ್ರೋ ಸೇವೆ ಸ್ಥಗಿತ, ಪ್ರಯಾಣಿಕರ ಆಕ್ರೋಶ
ವಿದ್ಯುತ್ ಪೂರೈಕೆ ದೋಷದಿಂದಾಗಿ ಜಯನಗರ ಮೆಟ್ರೋ ನಿಲ್ದಾಣದಲ್ಲಿ ರೈಲು ನಿಂತಿತ್ತು. ಇದರ ಪರಿಣಾಮ ಕಚೇರಿಗಳಿಂದ ಕೆಲಸ ಮುಗಿಸಿಕೊಂಡು ಮನೆಗೆ ಹೊರಡುವ ಸಮಯವಾದ ಸಂಜೆ 5.33ಕ್ಕೆ ಮೆಟ್ರೋ ಸಂಚಾರ ಸ್ಥಗಿತಗೊಂಡಿತು. ಆದರೆ ನಾಗಸಂದ್ರ- ಆರ್.ವಿ. ರಸ್ತೆ ನಡುವೆ ಮೆಟ್ರೋ ಸೇವೆ ಎಂದಿನಂತೆ ಇತ್ತು.
ಬೆಂಗಳೂರು(ಜು.31): ಅಸಮರ್ಪಕ ವಿದ್ಯುತ್ ಪೂರೈಕೆ ಕಾರಣ ಮಂಗಳವಾರ ಸಂಜೆ ನಮ್ಮ ಮೆಟ್ರೋದ ‘ಹಸಿರು ಮಾರ್ಗ’ದಲ್ಲಿ ಮೆಟ್ರೋ ಕೈಕೊಟ್ಟ ಪರಿಣಾಮ ಆರ್.ವಿ. ರಸ್ತೆಯಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್‌ವರೆಗೆ ಒಂದೂವರೆ ಗಂಟೆ ರೈಲು ಸೇವೆ ವ್ಯತ್ಯಯವಾಯಿತು. ಒಂದೆಡೆ ಮಳೆ, ಇನ್ನೊಂದೆಡೆ ಬಸ್ ಇಲ್ಲ, ಮತ್ತೊಂದೆಡೆ ಮೆಟ್ರೋ ಕೂಡ ಕೈಕೊಟ್ಟ ಪರಿಣಾಮ ಈ ಮಾರ್ಗದಲ್ಲಿ ಸಂಚರಿಸುವ ಸಾವಿರಾರು ಪ್ರಯಾಣಿರು ಹೈರಾಣಾದರು.
ವಿದ್ಯುತ್ ಪೂರೈಕೆ ದೋಷದಿಂದಾಗಿ ಜಯನಗರ ಮೆಟ್ರೋ ನಿಲ್ದಾಣದಲ್ಲಿ ರೈಲು ನಿಂತಿತ್ತು. ಇದರ ಪರಿಣಾಮ ಕಚೇರಿಗಳಿಂದ ಕೆಲಸ ಮುಗಿಸಿಕೊಂಡು ಮನೆಗೆ ಹೊರಡುವ ಸಮಯವಾದ ಸಂಜೆ 5.33ಕ್ಕೆ ಮೆಟ್ರೋ ಸಂಚಾರ ಸ್ಥಗಿತಗೊಂಡಿತು. ಆದರೆ ನಾಗಸಂದ್ರ- ಆರ್.ವಿ. ರಸ್ತೆ ನಡುವೆ ಮೆಟ್ರೋ ಸೇವೆ ಎಂದಿನಂತೆ ಇತ್ತು. ಅಲ್ಲಿಂದ ರಾತ್ರಿ 7.5ರವರೆಗೆ ರೈಲುಗಳ ಓಡಾಟ ಇರಲಿಲ್ಲ. ಮಳೆ, ಮೆಟ್ರೋ ಸೇವೆ ಸ್ಥಗಿತಗೊಂಡ ಕಾರಣಗಳಿಂದ ಪ್ರಯಾಣಿಕರು ಕಿರಿಕಿರಿ ಅನುಭವಿಸಿದರು. ಮುಖ್ಯವಾಗಿ ಆರ್.ವಿ. ರಸ್ತೆಗೆ ಬಂದಿಳಿಯುವ ಪ್ರಯಾಣಿಕರು ಹೋಗಬೇಕಾದ ನಿಗದಿತ ಸ್ಥಳ ತಲುಪಲಾಗದೆ ತ್ರಿಶಂಕು ಸ್ಥಿತಿಯಲ್ಲಿದ್ದರು.
10 ಲಕ್ಷದತ್ತ ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಳ: ಪ್ರತಿ ನಿತ್ಯ 7.5 ಲಕ್ಷ ಜನರ ಸಂಚಾರ
ಈ ಮಾರ್ಗಗಳ ನಿಲ್ದಾಣಗಳಲ್ಲಿ ಹೆಚ್ಚಿನ ಪ್ರಯಾಣಿಕರು ಜಮಾವಣೆ ಆಗಿದ್ದರು. ರೈಲು ಸಂಚಾರ ಸ್ಥಗಿತಗೊಂಡ ಬಗ್ಗೆ, ಮರು ಆರಂಭವಾಗುವ ಕುರಿತಂತೆ ಮೆಟ್ರೋ ಸಿಬ್ಬಂದಿ, ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲಲ್ಲಿ ಮೆಟ್ರೋ ಸಿಬ್ಬಂದಿ ಜೊತೆ ವಾಗ್ವಾದಗಳೂ ನಡೆದವು. ಈ ಸಂಬಂಧ ಹಲವರು ‘ಎಕ್ಸ್’ ಮಾಡಿ ಬಿಎಂಆರ್‌ಸಿಲ್ ನಡವಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡದಲ್ಲಿ ಮೆಟ್ರೋ ಸ್ಥಗಿತದ ಬಗ್ಗೆ ಮಾಹಿತಿ ನೀಡದ ಬಗ್ಗೆಯೂ ಅಸಮಾಧಾನ ವ್ಯಕ್ತವಾಯಿತು. ‘ಬಿಎಂಆರ್‌ಸಿಎಲ್ ಪ್ರಕಾರ ಜನರ ಹಣ ಮತ್ತು ಸಮಯಕ್ಕೆ ಬೆಲೆಯೇ ಇಲ್ಲ. ಕೊನೆಪಕ್ಷ ಸಿಲ್ಕ್ ಇನ್‌ಸ್ಟಿಟ್ಯೂಟ್‌ವರೆಗೆ ಸಂಪರ್ಕ ಬಸ್‌ಗಳನ್ನಾದರೂ ಕಲ್ಪಿಸಿ’ ಎಂದು ಒತ್ತಾಯಿಸಿದರು.
ವರ್ಷಾಂತ್ಯಕ್ಕೆ ಹಳದಿ ಮೆಟ್ರೋ ಓಪನ್, ಇನ್ಫೋಸಿಸ್ ಅನುದಾನಿತ ಕೋನಪ್ಪನ ಅಗ್ರಹಾರ ನಿಲ್ದಾಣದಲ್ಲಿ ಹೈಟೆಕ್ ಸೌಲಭ್ಯ!
ರೋಷನ್ ಎಂಬುವವರು ‘ಎಕ್ಸ್’ ನಲ್ಲಿ ‘ಹಾಂಗ್‌ಕಾಂಗ್ ಮೆಟ್ರೋ ನಾಲ್ಕೂವರೆ ದಶಕಗಳಿಂದ ಸೇವೆ ಸಲ್ಲಿಸುತ್ತಿದೆ. ಅಲ್ಲಿ ಒಂದೇ ಒಂದು ಈ ರೀತಿಯ ಘಟನೆಗಳು ನಡೆದಿಲ್ಲ. ಆದರೆ, ಹತ್ತು ವರ್ಷಗಳ ಹಿಂದಷ್ಟೇ ಆರಂಭಗೊಂಡ ‘ನಮ್ಮ ಮೆಟ್ರೋ’ದಲ್ಲಿ ತಿಂಗಳಿಗೊಂದು ಇಂತಹ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಅತ್ಯಂತ ಕಳಪೆ ನಿರ್ವಹಣೆಗೆ ಇದು ಸಾಕ್ಷಿ’ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಮೆಟ್ರೋ ಇಲ್ಲ. ಬನಶಂಕರಿಯಲ್ಲಿ ಎರಡು ತಾಸುಗಳಿಂದ ಬಸ್ ಕೂಡ ಬರುತ್ತಿಲ್ಲ ಎಂದು ಸುದರ್ಶನ್ ಇಳಂಗೋವನ್‘ಎಕ್ಸ್’ನಲ್ಲಿ ಬೇಸರ ಹೊರಹಾಕಿದರು. ‘ಅರ್ಧಗಂಟೆಯಿಂದ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದೇವೆ’ ಎಂದು ಬೇಸರಿಸಿದ್ದಾರೆ.