ಗ್ರೇಟರ್ ಬೆಂಗಳೂರು ಪ್ರಾಧಿಕಾರವು 2026-27ನೇ ಸಾಲಿನ ಉದ್ದಿಮೆ ಪರವಾನಿಗೆ ನವೀಕರಣ ಪ್ರಕ್ರಿಯೆಯನ್ನು ಆರಂಭಿಸಿದೆ. ದಂಡ ರಹಿತವಾಗಿ ನವೀಕರಿಸಲು ಫೆಬ್ರವರಿ 28 ಕೊನೆಯ ದಿನವಾಗಿದ್ದು, ಏಪ್ರಿಲ್ 1ರ ನಂತರ ಶೇ. 100ರಷ್ಟು ದಂಡ ವಿಧಿಸಲಾಗುವುದು. ಈ ನಿಯಮ ಪಾಲಿಸದಿದ್ದರೆ ಪರವಾನಿಗೆಯನ್ನು ತಿರಸ್ಕರಿಸಲಾಗುವುದು.
ಬೆಂಗಳೂರು (ಫೆ.02): ಸಿಲಿಕಾನ್ ಸಿಟಿ ಬೆಂಗಳೂರಿನ ಉದ್ದಿಮೆದಾರರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು (ಜಿಬಿಎ) ಮಹತ್ವದ ಸೂಚನೆಯನ್ನು ನೀಡಿದೆ. 2026-27ನೇ ಸಾಲಿನ ಉದ್ದಿಮೆ ಪರವಾನಿಗೆ (Trade License) ನವೀಕರಣ ಪ್ರಕ್ರಿಯೆ ಇಂದಿನಿಂದ (ಫೆಬ್ರವರಿ 01) ಅಧಿಕೃತವಾಗಿ ಆರಂಭವಾಗಿದ್ದು, ಈ ಸಂಬಂಧ ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಮಾರ್ಗಸೂಚಿಗಳಿರುವ ನೂತನ ಸುತ್ತೋಲೆ ಹೊರಡಿಸಿದ್ದಾರೆ. ಏಪ್ರಿಲ್ 1ರ ನಂತರ ನವೀಕರಣ ಮಾಡುವವರಿಗೆ ಪರವಾನಿಗೆ ಶುಲ್ಕದಷ್ಟೇ ಮೊತ್ತದ (ಶೇ. 100 ರಷ್ಟು) ದಂಡ ವಿಧಿಸುವುದಾಗಿ ಎಚ್ಚರಿಸಲಾಗಿದೆ.
ನವೀಕರಣಕ್ಕೆ ನಿಗದಿಯಾದ ಅವಧಿ ಮತ್ತು ದಂಡದ ವಿವರ:
ಉದ್ದಿಮೆದಾರರು ದಂಡ ರಹಿತವಾಗಿ ಪರವಾನಿಗೆ ನವೀಕರಿಸಲು ಫೆಬ್ರವರಿ 1 ರಿಂದ ಫೆಬ್ರವರಿ 28ರ ವರೆಗೆ ಕಾಲಾವಕಾಶ ನೀಡಲಾಗಿದೆ. ಒಂದು ವೇಳೆ ಮಾರ್ಚ್ 1 ರಿಂದ ಮಾರ್ಚ್ 31ರ ಒಳಗಾಗಿ ನವೀಕರಣ ಮಾಡಿದರೆ ಶೇ. 25 ರಷ್ಟು ದಂಡ ಪಾವತಿಸಬೇಕಾಗುತ್ತದೆ. ಆದರೆ, ಏಪ್ರಿಲ್ 1ರ ನಂತರ ನವೀಕರಣ ಪ್ರಕ್ರಿಯೆ ಕೈಗೊಂಡರೆ ಶೇ. 100 ರಷ್ಟು ದಂಡದ ಮೊತ್ತದೊಂದಿಗೆ ಶುಲ್ಕ ಪಾವತಿಸುವುದು ಕಡ್ಡಾಯವಾಗಿದೆ. ಉದ್ದಿಮೆದಾರರ ಅನುಕೂಲಕ್ಕಾಗಿ 1 ರಿಂದ 5 ಆರ್ಥಿಕ ವರ್ಷಗಳ ಅವಧಿಗೆ ಒಟ್ಟಿಗೆ ನವೀಕರಣ ಮಾಡಲು ಅವಕಾಶ ನೀಡಲಾಗಿದೆ.
ಸಂಪೂರ್ಣ ಆನ್‌ಲೈನ್ ಪ್ರಕ್ರಿಯೆ:
ಪರವಾನಿಗೆ ನವೀಕರಣ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್‌ಲೈನ್ ಮುಖಾಂತರವೇ ಮಾಡಬೇಕೆಂದು ಸೂಚಿಸಲಾಗಿದೆ. ನವೀಕರಣ ಶುಲ್ಕವನ್ನು ಆನ್‌ಲೈನ್ ಅಥವಾ ಕೆನರಾ ಬ್ಯಾಂಕ್ ಚಲನ್ ಮೂಲಕ ಪಾವತಿಸಬಹುದಾಗಿದೆ.
ಪರವಾನಿಗೆ ನಿರಾಕರಣೆಗೆ ಕಟ್ಟುನಿಟ್ಟಿನ ನಿಯಮಗಳು:
ವಲಯ ವರ್ಗೀಕರಣ ಮತ್ತು ಕಟ್ಟಡ ನಿಯಮಾವಳಿಗಳ ಉಲ್ಲಂಘನೆಯಾದಲ್ಲಿ ಪರವಾನಿಗೆ ನವೀಕರಣವನ್ನು ತಿರಸ್ಕರಿಸಲು ಆಯುಕ್ತರು ಸ್ಪಷ್ಟ ಸೂಚನೆ ನೀಡಿದ್ದಾರೆ:
ವಸತಿ ಪ್ರದೇಶದ ನಿಯಮ: ವಸತಿ ಪ್ರದೇಶಗಳಲ್ಲಿ 40 ಅಡಿಗಿಂತ ಕಡಿಮೆ ಅಗಲದ ರಸ್ತೆಗಳಲ್ಲಿ 2015ರ ನಂತರ ಆರಂಭವಾದ ಉದ್ದಿಮೆಗಳ ಪರವಾನಿಗೆಯನ್ನು ನೇರವಾಗಿ ತಿರಸ್ಕರಿಸಲಾಗುವುದು. 40 ಅಡಿಗಿಂತ ಹೆಚ್ಚು ಅಗಲವಿರುವ ರಸ್ತೆಗಳಲ್ಲೂ ನಿಗದಿಪಡಿಸಿದ ಉದ್ದಿಮೆಗಳಿಗೆ ಮಾತ್ರ ವಿಸ್ತೀರ್ಣಕ್ಕೆ ಸೀಮಿತಗೊಳಿಸಿ ಅನುಮತಿ ನೀಡಲಾಗುವುದು.
ಕಟ್ಟಡ ಉಲ್ಲಂಘನೆ: ನಕ್ಷೆ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳು, ವಾಹನ ನಿಲುಗಡೆ (Parking) ಪ್ರದೇಶ ಅಥವಾ ರೂಫ್ ಟಾಪ್‌ಗಳಲ್ಲಿ ನಡೆಸಲಾಗುತ್ತಿರುವ ಉದ್ದಿಮೆಗಳ ನವೀಕರಣಕ್ಕೆ ತಡೆ ನೀಡಲಾಗುವುದು.
ತ್ಯಾಜ್ಯ ವಿಲೇವಾರಿ ಮತ್ತು ಪರಿಸರ ಸಂರಕ್ಷಣೆ:
- ದಿನಕ್ಕೆ 100 ಕೆ.ಜಿ.ಗಿಂತ ಹೆಚ್ಚು ತ್ಯಾಜ್ಯ ಉತ್ಪತ್ತಿ ಮಾಡುವ ಉದ್ದಿಮೆಗಳು ಸ್ಥಳದಲ್ಲೇ ತ್ಯಾಜ್ಯ ಸಂಸ್ಕರಣೆ ಅಥವಾ ಅಧಿಕೃತ ವೆಂಡರ್‌ಗಳೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ ಪತ್ರ ಸಲ್ಲಿಸುವುದು ಕಡ್ಡಾಯ.
- ಹೋಟೆಲ್, ರೆಸ್ಟೋರೆಂಟ್ ಮತ್ತು ಕಲ್ಯಾಣ ಮಂಟಪಗಳಲ್ಲಿ ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ನಿಷೇಧದ ಕುರಿತು ಲಿಖಿತ ಹೇಳಿಕೆ ನೀಡಬೇಕು ಮತ್ತು ಈ ಕುರಿತ ಭಿತ್ತಿಪತ್ರಗಳನ್ನು ಪ್ರದರ್ಶಿಸಬೇಕು.
- ಹಸಿ ಕಸಕ್ಕೆ ಹಸಿರು ಮತ್ತು ಒಣ ಕಸಕ್ಕೆ ನೀಲಿ ಬಣ್ಣದ ಬುಟ್ಟಿಗಳನ್ನು ಪ್ರತ್ಯೇಕವಾಗಿ ಇರಿಸುವುದು ಕಡ್ಡಾಯವಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದೂ ನಗರ ಪಾಲಿಕೆಗಳ ಆರೋಗ್ಯಾಧಿಕಾರಿಗಳು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ನವೀಕರಣ ಪ್ರಕ್ರಿಯೆ ನಡೆಸುವಂತೆ ಆಯುಕ್ತ ಮಹೇಶ್ವರ್ ರಾವ್ ನಿರ್ದೇಶನ ನೀಡಿದ್ದಾರೆ.


