ಬೆಂಗಳೂರು [ಜೂ.19] : ಕಚೇರಿ ಗಮನಕ್ಕೂ ತರದೇ ಕಳೆದ ಎರಡು ದಿನಗಳಿಂದ ಕಾರಣ ತಿಳಿಸದೆ ರಜೆ ಹಾಕಿದ್ದ ಬೆಂಗಳೂರು ಪೂರ್ವ ತಾಲೂಕಿನ ಗ್ರೇಡ್- 2 ತಹಸೀಲ್ದಾರ್ ಹಾಗೂ ಅವಧಿ ಮೀರಿದ ಔಷಧ ವಿತರಿಸುತ್ತಿದ್ದ ಕೆ.ಆರ್.ಪುರ ಸರ್ಕಾರಿ ಆಸ್ಪತ್ರೆ ಔಷಧ ಉಗ್ರಾಣ ವ್ಯವಸ್ಥಾಪಕರನ್ನು ಜಿಲ್ಲಾಧಿಕಾರಿಗಳು ಅಮಾನತುಗೊಳಿಸಿದ್ದಾರೆ. 

ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ. ವಿಜಯಶಂಕರ್ ಅವರು ಮಂಗಳವಾರ ಕೃಷ್ಣರಾಜಪುರದ ತಹಸೀಲ್ದಾರ್ ಕಚೇರಿ ಹಾಗೂ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ಪರಿಶೀಲನೆ ನಡೆಸಿದರು. ಆಸ್ಪತ್ರೆ ಹಾಗೂ ತಹಸೀಲ್ದಾರ್ ಕಚೇರಿಗಳಲ್ಲಿರುವ ಅವ್ಯವಸ್ಥೆ ಕಂಡು ಗರಂ ಆದ ಜಿಲ್ಲಾಧಿಕಾರಿಗಳು, ತಹಸೀಲ್ದಾರ್ ಅವರು ಏಕೆ ಹಾಜರಿಲ್ಲ ಎಂದು ಪ್ರಶ್ನಿಸಿದರು. ಕಳೆದ ಎರಡು ದಿನಗಳಿಂದ ತಹಸೀಲ್ದಾರ್ ಅವರು ಕಚೇರಿಗೆ ಬಂದಿಲ್ಲ ಎಂದು ಸಿಬ್ಬಂದಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಹಲವಾರು ಸಾರ್ವಜನಿಕರು ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲಸಗಳಿಗಾಗಿ ತಹಶೀಲ್ದಾರ್ ಆಗಮನಕ್ಕಾಗಿ ಕಾಯ್ದು ಕುಳಿತಿದ್ದನ್ನು ಗಮನಿಸಿದ ಜಿಲ್ಲಾಧಿಕಾರಿಗಳು, ಮೇಲಾಧಿಕಾರಿಗಳಿಂದ ಅನುಮತಿ ಪಡೆಯದೆ ಹಾಗೂ ಕಚೇರಿ ಗಮನಕ್ಕೂ ತರದೇ ಗ್ರೇಡ್- 2 ತಹಸೀಲ್ದಾರ್ ಎಸ್.ಶಾರದಾ ಅವರು ರಜೆ ಮೇಲೆ ತೆರಳಿಸಿದ್ದಾರೆ. ಇದರಿಂದ ಸಾರ್ವಜನಿಕ ಕೆಲಸಗಳಿಗೆ ತೊಂದರೆಯಾಗುತ್ತಿದೆ ಎಂದು ಕಾರಣ ನೀಡಿ ಅಮಾನತುಗೊಳಿಸಿದರು. 

ಇದೇ ವೇಳೆ ಇಲಾಖೆ ಕಡತಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡದ ವಿಶೇಷ ತಹಸೀಲ್ದಾರ್ ಶಿವಕುಮಾರ್ ಹಾಗೂ ಸುರೇಶ್ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಯಿತು. ಅಲ್ಲದೆ, ಕಡತಗಳನ್ನು ಕೂಡಲೇ ವಿಲೇವಾರಿ ಮಾಡುವಂತೆಯೂ ಸೂಚನೆ
ನೀಡಲಾಯಿತು.

ಅವಧಿ ಮೀರಿದ ಔಷಧಿ ಪತ್ತೆ!: ಕೃಷ್ಣರಾಜಪುರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ಅವಧಿ ಮೀರಿದ ಔಷಧಗಳನ್ನು ವಿತರಿಸುತ್ತಿದ್ದನ್ನು ಕಂಡ ಜಿಲ್ಲಾಧಿಕಾರಿಗಳು  ಹೌಹಾರಿದರು. ಅವಧಿ ಮೀರಿ ಒಂದು ವರ್ಷ ಕಳೆದಿರುವ ಔಷಧಿಗಳನ್ನು ವಿತರಿಸುತ್ತಿದ್ದ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕೆಂಡಾಮಂಡಲವಾದ ಜಿಲ್ಲಾಧಿಕಾರಿಗಳು, ಔಷಧ ಉಗ್ರಾಣ ವ್ಯವಸ್ಥಾಪಕಿ ಶಾಖೀರಾ ಬೇಗಂ ಅವರನ್ನು ಕೂಡಲೇ ಅಮಾನತುಗೊಳಿಸಿದರು. 

ಶಾಖೀರ ಬೇಗಂ ಅವರು ಹೊರ ಹಾಗೂ ಒಳರೋಗಿಗಳಿಗೆ ಅವಧಿ ಮೀರಿದ ಔಷಧಿಗಳನ್ನು ವಿತರಿಸುತ್ತಿದ್ದರು. ಅವಧಿ ಮೀರಿದ ಅಜಿತ್ರೋಮೈಸಿನ್ ಗುಳಿಗೆ ಹಾಗೂ ಅಮಾಕ್ಸಿಸಿಲ್ಲಿನ್ (ಮಕ್ಕಳಿಗೆ) ಓರಲ್ ಸಿರಪ್ ಗಳನ್ನು ವಶಪಡಿಸಿಕೊಂಡರು. ಆಸ್ಪತ್ರೆ ಸಿಬ್ಬಂದಿ ಕೂಡ ಗೈರು: ಆಸ್ಪತ್ರೆ ಅವ್ಯವಸ್ಥೆ ಕಂಡು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಜಿಲ್ಲಾ ಪರಿಷತ್ ಕಚೇರಿಯಲ್ಲಿ ಸಭೆ ಇರುವುದಾಗಿ ಸುಳ್ಳು ಹೇಳಿ ಸಾಕಷ್ಟು ಸಿಬ್ಬಂದಿ ಗೈರು ಹಾಜರಾಗಿದ್ದರು. ಇವರೆಲ್ಲರ ಮೇಲೆ ಕ್ರಮ ಜರುಗಿಸಲುಸರ್ಕಾರಕ್ಕೆ ಪತ್ರ ಬರೆಯುದಾಗಿ ತಿಳಿಸಿದ್ದಾರೆ.