ಪ್ರವಾಹ ಪರಿಹಾರ ನೀಡದೆ ‘ಸ್ಲೀಪಿಂಗ್ ಮೋಡ್’ ಸರ್ಕಾರ: ಹರಿಪ್ರಸಾದ್
ಮಂಗಳೂರು ಸ್ಮಾರ್ಚ್ ಸಿಟಿ ಬದಲಿಗೆ ಡಿಸಾಸ್ಟರ್ ಸಿಟಿಯಾಗಿದೆ, ಅಸಮರ್ಪಕ ಕಾಮಗಾರಿಗಳಿಂದಾಗಿ ಪ್ರತಿ ಮಳೆಗಾಲದಲ್ಲೂ ಕೃತಕ ಪ್ರವಾಹ ಉಂಟಾಗಿ ನಾಗರಿಕರಿಗೆ ಸಮಸ್ಯೆಯಾಗುತ್ತಿದೆ. ರಾಜಕೀಯ ಬಿಟ್ಟು ಜನರ ಸಂಕಷ್ಟಕ್ಕೆ ಸ್ಪಂದಿಸುವಂತೆ ಬಿ.ಕೆ.ಹರಿಪ್ರಸಾದ ಆಗ್ರಹಿಸಿದ್ದಾರೆ
ಮಂಗಳೂರು (ಜು.21) ಭಾರೀ ಪ್ರವಾಹ, ನೈಸರ್ಗಿಕ ವಿಕೋಪಕ್ಕೆ ತುತ್ತಾದ ಜನರಿಗೆ ಪರಿಹಾರ ಒದಗಿಸದೆ ರಾಜ್ಯ ಬಿಜೆಪಿ ಸರ್ಕಾರ ‘ಸ್ಲೀಪಿಂಗ್ ಮೋಡ್’ನಲ್ಲಿದೆ ಎಂದು ರಾಜ್ಯ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ. ಕಳೆದೆರಡು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕರಾವಳಿ(coast) ಭಾಗದಲ್ಲಿ ವಿಪರೀತ ಮಳೆ(Heavy rain)ಯಿಂದಾಗಿ ಹಲವಾರು ಕಡೆ ಜನರಿಗೆ ಗಂಭೀರ ಸಮಸ್ಯೆ ಉಂಟಾಗಿದೆ. ಅಪಾರ ಆಸ್ತಿಪಾಸ್ತಿ ನಷ್ಟವಾಗಿದೆ. ಮನೆಗಳು ಕುಸಿದು, ಗುಡ್ಡ ಕುಸಿದು ಜನರು ಮನೆಗಳನ್ನು ಬಿಟ್ಟು ಬೇರೆ ಕಡೆ ಆಶ್ರಯಿಸುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜನರ ಸಹಾಯಕ್ಕೆ ಧಾವಿಸಬೇಕಿದ್ದ ಸರ್ಕಾರ ಏನನ್ನೂ ಮಾಡದೆ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.
ಮುಖ್ಯಮಂತ್ರಿಗಳು ಬಂದು ಹೋದರೂ ಇನ್ನೂ ಪರಿಹಾರ ವ್ಯವಸ್ಥೆ ಆಗಿಲ್ಲ: ಹರಿಪ್ರಸಾದ್ ಟೀಕೆ
ಉಳ್ಳಾಲ(Ullala) ಭಾಗದಲ್ಲಿ ಕಡಲ್ಕೊರೆತ ತೀವ್ರವಾಗಿ ವ್ಯಾಪಿಸುತ್ತಿದ್ದರೂ ಇದರ ತಡೆಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಅಪೂರ್ಣವಾದ ಕಾಮಗಾರಿಗಳನ್ನು ಪೂರ್ತಿಗೊಳಿಸದೆ ಮತ್ತಷ್ಟುಮನೆಗಳು ಅಪಾಯದ ಅಂಚಿಗೆ ತಲುಪಿವೆ. ತಕ್ಷಣ ಬಾಕಿ ಕಾಮಗಾರಿಗಳನ್ನು ಕೈಗೊಂಡು ಇನ್ನಷ್ಟುಹಾನಿಯಾಗುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಸ್ಮಾರ್ಚ್ ಸಿಟಿಯಲ್ಲ ಡಿಸಾಸ್ಟರ್ ಸಿಟಿ: ಬೆಂಗಳೂರು ಬಳಿಕ ಅತಿ ಹೆಚ್ಚು ತೆರಿಗೆ ಕಟ್ಟುವ ಮಂಗಳೂರು ನಗರ ಸ್ಮಾರ್ಚ್ ಸಿಟಿಯ ಬದಲಿಗೆ ‘ಡಿಸಾಸ್ಟರ್ ಸಿಟಿ’ ಆಗಿದೆ. ಅಸಮರ್ಪಕ ಕಾಮಗಾರಿಗಳಿಂದಾಗಿ ಪ್ರತಿ ಮಳೆಗಾಲದಲ್ಲೂ ಕೃತಕ ಪ್ರವಾಹ ಉಂಟಾಗಿ ನಾಗರಿಕರಿಗೆ ಸಮಸ್ಯೆಯಾಗುತ್ತಿದೆ. ರಾಜಕೀಯ ಬಿಟ್ಟು ಜನರ ಸಂಕಷ್ಟಕ್ಕೆ ಸ್ಪಂದಿಸುವಂತಹ ಕೆಲಸ ಮಾಡಿ ಎಂದು ಬಿಕೆ ಹರಿಪ್ರಸಾದ್ ಸಲಹೆ ನೀಡಿದರು.
PSI Scam: ಬಂಧಿತ ಗಣಪತಿಗೂ ಆರಗಗೂ ಏನು ಸಂಬಂಧ?: ಹರಿಪ್ರಸಾದ್
ಪಠ್ಯಪುಸ್ತಕ ವಿತರಿಸಿ: ಶಾಲಾರಂಭವಾಗಿ ಇಷ್ಟುಸಮಯ ಕಳೆದರೂ ಇನ್ನೂ ಪಠ್ಯಪುಸ್ತಕ ಮಕ್ಕಳ ಕೈಸೇರಿಲ್ಲ. ಉಕ್ರೇನ್ ಯುದ್ಧದಿಂದಾಗಿ ಪೇಪರ್ ಸಿಗುತ್ತಿಲ್ಲ ಎಂದು ಸಚಿವರು ಹೇಳುತ್ತಿದ್ದಾರೆ. ಇದು ಎತ್ತಿಗೆ ಜ್ವರ ಬಂದರ ಎಮ್ಮೆಗೆ ಬರೆ ಹೊಡೆದಂತಾಗಿದೆ. ನಮ್ಮ ದೇಶಕ್ಕೆ ಅತಿ ಹೆಚ್ಚು ಪೇಪರ್ ಆಮದು ಆಗುತ್ತಿರುವುದು ಕೆನಡಾ ದೇಶದಿಂದ. ಭಾರತದ ಕಂಪೆನಿಗಳು ತಮ್ಮ ಲಾಭಕ್ಕಾಗಿ ರಫ್ತು ಮಾಡುತ್ತಿವೆ. ಈ ಲಾಭವನ್ನು ಬಿಟ್ಟು ಮೊದಲು ಮಕ್ಕಳ ಪಠ್ಯಪುಸ್ತಕ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮಾಜಿ ಶಾಸಕರಾದ ಜೆ.ಆರ್. ಲೋಬೊ, ಐವನ್ ಡಿಸೋಜ, ಶಶಿಧರ ಹೆಗ್ಡೆ, ಅಬ್ದುಲ್ ರವೂಫ್, ಶಾಹುಲ್ ಹಮೀದ್, ನೀರಜ್‌ಪಾಲ್ ಮತ್ತಿತರರಿದ್ದರು.
ಸಿಎಂ ಆಯ್ಕೆ ಪಕ್ಷದ ತೀರ್ಮಾನ: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಿನ ಸಿಎಂ ಫೈಟ್ ಕುರಿತು ಪ್ರತಿಕ್ರಿಯಿಸಿದ ಬಿ.ಕೆ. ಹರಿಪ್ರಸಾದ್, ಸಿಎಂ ಯಾರಾಗಬೇಕು ಎನ್ನುವುದನ್ನು ವ್ಯಕ್ತಿ ತೀರ್ಮಾನ ಮಾಡುವುದಲ್ಲ, ಪಕ್ಷ ತೀರ್ಮಾನಿಸುತ್ತದೆ. ಆಯ್ಕೆಯಾಗುವ ಎಲ್ಲ ಶಾಸಕರ ಅಭಿಪ್ರಾಯ ಪಡೆದುಕೊಂಡು ಸಿಎಂ ಆಯ್ಕೆ ಮಾಡಲಾಗುತ್ತದೆ ಎಂದರು. ಯಾವುದೇ ಜಾತಿಯನ್ನು ಕಟ್ಟಿಕೊಂಡು ರಾಜಕೀಯ ಪಕ್ಷ ಕಟ್ಟಲು ಆಗುವುದಿಲ್ಲ. ಕಾಂಗ್ರೆಸ್ ಆ ಕೆಲಸ ಮಾಡಲ್ಲ ಎಂದರು.