ಶಿವಮೊಗ್ಗ [ಜ.18]:  ಸರ್ಕಾರಿ ನೌಕರರಿಗೆ ಹಾಗೂ ಅಧಿಕಾರಿಗಳಿಗೆ ರಿಯಾಯಿತಿ ದರದಲ್ಲಿ ದಿನ ಬಳಕೆ ಹಾಗೂ ಗೃಹಪಯೋಗಿ ವಸ್ತುಗಳನ್ನು ದೊರಕಿಸಿಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರಿ ನೌಕರರ ಸಂಘವು ರಾಜೇಂದ್ರ ನಗರ ಕಂದಾಯ ನೌಕರರ ಭವನದಲ್ಲಿ ಪ್ರಾರಂಭಿಸಿರುವ ಪೊಲೀಸ್‌ ಕ್ಯಾಂಟೀನ್‌ ಮಾದರಿಯ ಮಳಿಗೆ ಶುಭಾರಂಭಗೊಂಡಿತು.

ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಕ್ಯಾಂಟೀನ್‌ ಉದ್ಘಾಟಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌. ಷಡಕ್ಷರಿ ಮಾತನಾಡಿ, ಕ್ಯಾಂಟೀನ್‌ನಲ್ಲಿ ದಿನ ಬಳಕೆ ಹಾಗೂ ಗೃಹಪಯೋಗಿ ಉಪಯೋಗಿ ವಸ್ತುಗಳು ಸೇರಿದಂತೆ ಸುಮಾರು 450 ಕ್ಕೂ ಹೆಚ್ಚು ಉತ್ಪನ್ನ ಲಭ್ಯ ಇವೆ. ರಾಜ್ಯ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳಿಗೆ ಕಡಿಮೆ ದರದಲ್ಲಿ ಉತ್ಪನ್ನಗಳನ್ನು ದೊರಕಿಸಿಕೊಡಬೇಕೆಂಬ ಉದ್ದೇಶದಿಂದ ಕ್ಯಾಂಟೀನ್‌ ಆರಂಭಿಸಲಾಗಿದೆ ಎಂದರು.

ಸರ್ಕಾರಿ ನೌಕರರ ಸಂಘದಿಂದ ರಾಜ್ಯದಲ್ಲಿ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಕ್ಯಾಂಟೀನ್‌ ಪ್ರಾರಂಭಗೊಂಡಿದೆ. ಮುಂದೆ ಕೆಲವೇ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಇದನ್ನು ವಿಸ್ತರಿಸುವ ಉದ್ದೇಶ ಹೊಂದಲಾಗಿದೆ. ಈಗಾಗಲೇ ಆರು ಸಾವಿರಕ್ಕೂ ಹೆಚ್ಚು ಮಂದಿ ನೌಕರರು ಸದಸ್ಯತ್ವ ಪಡೆದಿದ್ದಾರೆ. ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳಿಗೆ ಇದರ ಪ್ರಯೋಜನ ದೊರಕಲಿದೆ ಎಂದು ಹೇಳಿದರು.

ಸೌಲಭ್ಯವನ್ನು ತಮಗೂ ನೀಡುವಂತೆ ನಿವೃತ್ತ ನೌಕರರು, ವಿಶ್ವವಿದ್ಯಾಲಯದ ನೌಕರರು, ಸ್ಥಳೀಯ ಸಂಸ್ಥೆಗಳ ನೌಕರರು, ವೈದ್ಯರು ಕೇಳಿದ್ದಾರೆ. ಮುಂದಿನ ದಿನದಲ್ಲಿ ಅವರಿಗೂ ಸೌಲಭ್ಯ ದೊರಕಿಸಿಕೊಡುವ ಪ್ರಯತ್ನ ನಡೆಸಲಾಗುವುದು. ಈಗಾಗಲೇ ಸಾಕಷ್ಟುಬೇಡಿಕೆ ಬಂದಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗೃಹಪಯೋಗಿ ಹಾಗೂ ದಿನಬಳಕೆ ವಸ್ತುಗಳು ಕಡಿಮೆ ಬೆಲೆಯಲ್ಲಿ ನೌಕರರ ಬಾಂಧವರಿಗೆ ದೊರಕಲಿದೆ. ಕಂಪನಿಗಳಿಂದ ಉತ್ಪನ್ನಗಳು ನೇರವಾಗಿ ಹಾಗೂ ಕಡಿಮೆ ದರದಲ್ಲಿ ದೊರಕಲಿದೆ. ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕೊಡಚಾದ್ರಿ - ಕೊಲ್ಲೂರು ನಡುವೆ ಕೇಬಲ್ ಕಾರ್ !.

ಮಳಿಗೆಯಲ್ಲಿ ಪ್ರಖ್ಯಾತ ಕಂಪನಿಗಳ ರೆಫ್ರಿಜರೇಟರ್‌, ಟಿವಿ, ಮೊಬೈಲ್‌, ಮಿಕ್ಸರ್‌, ಗ್ರೈಂಡರ್‌ ಸೇರಿದಂತೆ ಎಲ್ಲ ರೀತಿಯ ಗೃಹಪಯೋಗಿ ವಸ್ತುಗಳು ಹಾಗೂ ದಿನನಿತ್ಯ ಬಳಕೆಯ ಪದಾರ್ಥ ದೊರಕಲಿವೆ. ನೌಕರರಿಗೆ ಸಾಲ ಸೌಲಭ್ಯ ಲಭ್ಯವಿದೆ. ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ಸಹ ಕೊಳ್ಳಬಹುದಾಗಿದೆ ಎಂದರು.

ಕೊಂಡುಕೊಡಂತಹ ವಸ್ತುಗಳನ್ನು ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ ಆನ್‌ಲೈನ್‌ ಮೂಲಕ ತಮಗೆ ಬೇಕಾದ ವಸ್ತುಗಳನ್ನು ಬುಕಿಂಗ್‌ ಮಾಡುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಿಧಾನಪರಿಷತ್‌ ಸದಸ್ಯ ಆರ್‌. ಪ್ರಸನ್ನ ಕುಮಾರ್‌, ಎಸ್ಪಿ ಶಾಂತರಾಜ್‌, ನೌಕರ ಸಂಘದ ಪದಾಧಿಕಾರಿಗಳು ಹಾಗೂ ನೌಕರ ಬಾಂಧವರು ಉಪಸ್ಥಿತರಿದ್ದರು.