ಶಿವಮೊಗ್ಗ(ಮೇ.13): ಕೊರೋನಾ ಸೋಂಕು ಶಂಕೆಯ ಹಿನ್ನೆಲೆಯಲ್ಲಿ ತಪಾಸಣೆ, ಕ್ವಾರಂಟೈನ್‌ ಹಾಗೂ ಚಿಕಿತ್ಸೆ ಪಡೆಯುವುದಕ್ಕೆ ತಬ್ಲಿಘಿಗಳು ಅಸಹಕಾರ ನೀಡುತ್ತಿರುವ ಘಟನೆ ಹೆಚ್ಚುತ್ತಿದ್ದು, ಇಂತಹವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಪೊಲೀಸರು ಸುಮೋಟೋ ಕೇಸು ದಾಖಲಿಸಬೇಕು ಎಂದು ವಿಧಾನಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಆಗ್ರಹಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ಸೋಂಕು ಹರಡಿರುವುದು ದೃಢಪಟ್ಟರೂ ಅದಕ್ಕೆ ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಬದಲಾಗಿ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಕೂಡಾ ಕ್ವಾರಂಟೈನ್‌ಗೆ ಒಳಪಡಿಸುವ ವೇಳೆ ತಪ್ಪಿಸಿಕೊಳ್ಳಲು ತಬ್ಲಿಘಿಗಳು ಯತ್ನಿಸಿದ್ದು, ಇವರ ವಿರುದ್ಧ ಕೇಸು ದಾಖಲಿಸಲೇ ಬೇಕೆಂದರು.

ಇವರು ತೋರುತ್ತಿರುವ ಅಸಹಕಾರ ನಿಲುವು ಅಪಾಯಕಾರಿ. ಇದರ ಹಿಂದೆ ಯಾವುದೋ ಉದ್ದೇಶ ಇದೆ ಎಂದು ಭಾಸವಾಗುತ್ತಿದೆ. ಇಂತಹವರ ವಿರುದ್ಧ ದಯೆ ತೋರುವ ಅಗತ್ಯವಿಲ್ಲ. ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.

17ರ ನಂತರ ದೇಶವ್ಯಾಪಿ ಮೃದು ಲಾಕ್‌ಡೌನ್‌ ಜಾರಿ ಸಂಭವ: ಏನಿರುತ್ತೆ? ಏನಿರಲ್ಲ?

ತಬ್ಲಿಘಿಗಳ ವರ್ತನೆ ಗಮನಿಸಿದರೆ ಇವರುಗಳು ದೇಶವಿರೋಧಿ ಪೋಷಕರಂತೆ ಕಂಡುಬರುತ್ತಿದ್ದಾರೆ. ಅಪ್ರತ್ಯಕ್ಷವಾಗಿ ಜಿಹಾದಿ ಹೋರಾಟದ ಆತ್ಮಾರ್ಪಣೆಗೊಳ್ಳಲು ಸಿದ್ದವಾದವರು ಎಂಬ ಸಂಶಯ ಬರುತ್ತಿದೆ. ತಬ್ಲಿಘಿಗಳು ಭಯೋತ್ಪಾದಕರೊಂದಿಗೆ ನಂಟು ಹೊಂದಿರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಹಿಂದೂ ಹಾಗೂ ಮುಸ್ಲಿಮರ ನಡುವೆ ದ್ವೇಷ ಮೂಡಿಸುವುದೇ ಇವರ ಉದ್ದೇಶವಾಗಿರುವಂತಿದೆ. ಇವರುಗಳಿಗೆ ದಯೆ ತೋರಿಸುವ ಅಗತ್ಯವಿಲ್ಲ. ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಲ್ಪಸಂಖ್ಯಾತರ ಹಿತ ರಕ್ಷಕರಂತೆ ವರ್ತಿಸುವ ವಿಚಾರವಾದಿಗಳು ಇವರುಗಳಿಗೆ ಬುದ್ಧಿಮಾತು ಹೇಳುತ್ತಿಲ್ಲ. ಬದಲಾಗಿ ಮೌನವಾಗಿದ್ದಾರೆ. ಈ ರೀತಿ ಮೌನಕ್ಕೆ ಶರಣಾಗುವುದು ಒಳ್ಳೆಯದಲ್ಲ. ಯಾವುದೇ ಧರ್ಮದವರು ತಪ್ಪು ಮಾಡಿದರೂ ಅದನ್ನು ಖಂಡಿಸಬೇಕು. ಆದರೆ ಈ ವಿಚಾರದಲ್ಲಿ ವಿಚಾರವಾದಿಗಳ ನಡವಳಿಕೆ ಸಾಕಷ್ಟುಅನುಮಾನ ಹುಟ್ಟುಹಾಕುತ್ತಿದೆ. ಇವರ ದ್ವಿಮುಖ ನಿಲುವು ಸರಿಯಲ್ಲ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಎನ್‌ಆರ್‌ಐ ಸಿಎಎ ವಿಚಾರದಲ್ಲಿ ಅವರನ್ನು ಬೆಂಬಲಿಸಿದ್ದೀರಿ. ಈಗ ತಪ್ಪು ಮಾಡಿದಾಗ ಅವರಿಗೆ ಬುದ್ದಿ ಹೇಳುವುದು ನಿಮ್ಮ ಕರ್ತವ್ಯ. ಇವರು ಪರೋಕ್ಷವಾಗಿ ತಬ್ಲಿಘಿಗಳ ಕುರಿತು ಅನುಕಂಪ ಹೊಂದಿರಬಹುದು ಎಂಬ ಭಾವ ಮೂಡುತ್ತಿದೆ ಎಂದ ಅವರು ಬಹುಶಃ ಎಡಪಂಥೀಯರ ತವರು ಚೀನಾ ದೇಶ ಇದರ ಉಗಮ ಎಂಬ ಕಾರಣಕ್ಕೆ ಇವರು ಮೃದು ಧೋರಣೆ ತಾಳುತ್ತಿರಬಹುದು ಎಂದು ವ್ಯಂಗ್ಯವಾಡಿದರು.

ಕೆಲವೇ ಕೆಲವು ತಬ್ಲಿಘಿ ಗಳು ಸಮಾಜಕ್ಕೆ ಕಂಟಕವಾಗುತ್ತಿದ್ದಾರೆ. ತಬ್ಲಿಘಿಗಳೆಂದರೆ ಮುಸ್ಲಿಂ ಅಂದುಕೊಳ್ಳಬೇಕಿಲ್ಲ. ಬಹುತೇಕ ಮುಸ್ಲಿಂರು ಇವರನ್ನು ವಿರೋಧಿಸುತ್ತಾರೆ. ಆದರೆ ತಬ್ಲಿಘಿಗಳ ವರ್ತನೆಯಿಂದ ಇಡೀ ಸಮುದಾಯವನ್ನು ಸಂಶಯದಿಂದ ನೋಡುವಂತಾಗಿದೆ. ಇದರಿಂದ ಬಡ ಮುಸ್ಲಿಂ ವ್ಯಾಪಾರಿಗಳಿಗೆ ಸಮಸ್ಯೆ ಉಂಟಾಗಿದೆ. ಇಡೀ ಸಮಾಜ ಎರಡು ಹೋಳಾಗುತ್ತಿದೆ. ಇದಕ್ಕೆ ಕಾರಣವಾದ ತಬ್ಲಿಘಿಗಳ ವರ್ತನೆಗೆ ಕಡಿವಾಣ ಹಾಕಬೇಕಿದೆ. ಮುಸ್ಲಿಂ ಸಮುದಾಯದ ನಾಯಕರು ಎಂದು ಘೋಷಿಸಿಕೊಂಡಿರುವವರು ಈಗ ಮೌನ ಮುರಿದು ಅವರಿಗೆ ಬುದ್ದಿ ಹೇಳಬೇಕು ಎಂದು ಒತ್ತಾಯಿಸಿದರು.

ಚಿತ್ರದುರ್ಗ, ದಾವಣಗೆರೆ ಹಾಗೂ ಶಿವಮೊಗ್ಗದಲ್ಲಿ ಕೊರೋನಾ ವೈರಸ್‌ ಹರಡುವುದಕ್ಕೆ ಇವರುಗಳೇ ಕಾರಣಕರ್ತರಾಗಿದ್ದಾರೆ. ದೇಶದಲ್ಲಿ ಕೋರೋನ ಹರಡುವುದೇ ಇವರ ಉದ್ದೇಶವಾಗಿದೆ ಎಂಬ ಅನುಮಾನ ಮೂಡುವಂತೆ ವರ್ತನೆ ತೋರುತ್ತಿದ್ದಾರೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ ಎಂದರು. ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಎಚ್‌.ಸಿ. ಬಸವರಾಜಪ್ಪ, ಚಂದ್ರಶೇಖರ್‌ ಇದ್ದರು.