ಚಿತ್ರದುರ್ಗ(ಏ.22) : ರೋಗಿಗಳ ತುರ್ತು ಸೇವೆಗಾಗಿ ಸರ್ಕಾರ ನೀಡಿರುವ ಆ್ಯಂಬುಲೆಸ್ಸ್‌ ಮೂಲಕವೇ ಮದ್ಯ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿರುವ ಚಿತ್ರಹಳ್ಳಿ ಪೊಲೀಸರು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ 69 ಸಾವಿರ ರು. ಮೌಲ್ಯದ ಮದ್ಯದ ಪ್ಯಾಕೆಚ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹೊಳಲ್ಕೆರೆ ತಾಲೂಕಿನ ಹೊರಕೆರೆದೇವರಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆ್ಯಂಬುಲೆನ್ಸ್‌ ಚಾಲಕ ಸುಭಾನ ಹಾಗೂ ಲ್ಯಾಬ… ಟೆಕ್ನೀಶಿಯನ್‌ ಸಂತೋಷ್‌ ಚಳ್ಳಕೆರೆ ತಾಲೂಕಿನ ಉಳ್ಳಾರ್ತಿ ಗ್ರಾಮದ ನರಸಿಂಹರಾಜು ಎಂಬ ವ್ಯಕ್ತಿಗೆ ಸೇರಿದ ಬಾರ್‌ನಿಂದ ಮದ್ಯ ತುಂಬಿಸಿಕೊಂಡು ಬಂದು ಖಾಸಗಿ ಓಮ್ನಿಗಳಿಗೆ ವರ್ಗಾಯಿಸಿ ಬೇರೆ ಬೇರೆ ಕಡೆಗಳಿಗೆ ಸಾಗಾಟ ಮಾಡುತ್ತಿದ್ದರು.

 

ಖಚಿತ ಮಾಹಿತಿಯನ್ನಾಧರಿಸಿ ಆ್ಯಂಬುಲೆನ್ಸ್‌ ಬೆನ್ನಟ್ಟಿದ ಚಿತ್ರಹಳ್ಳಿ ಪೊಲೀಸರು ಮಲ್ಲಾಡಿಹಳ್ಳಿ ಬಳಿ ಆ್ಯಂಬುಲೆಸ್ಸ್‌ ನಿಂದ ಮಾರುತಿ ಓಮ್ನಿಗೆ ಮದ್ಯದ ಪ್ಯಾಕೆಚ್‌ಗಳನ್ನು ಬದಲಾಯಿಸುತ್ತಿದ್ದ ವೇಳೆ ದಾಳಿ ನಡೆಸಿದ್ದಾರೆ. ಈ ವೇಳೆ ಖಾಸಗಿ ಮಾರುತಿ ಓಮ್ನಿ ಸೇರಿದಂತೆ ಓಮ್ನಿಯಲ್ಲಿದ್ದ ಮತ್ತಿಬ್ಬರು ಆರೋಪಿಗಳಾದ ಜೀವನ್‌ ಮತ್ತು ಗಿರೀಶ್‌ ಎಂಬುವರನ್ನು ಬಂಧಿಸಲಾಗಿದೆ. ನಾಲ್ಕು ಮಂದಿ ಆರೋಪಿಗಳ ವಿಚಾರಣೆ ಮುಂದುವರಿದಿದೆ.

 

180 ಎಂಎಲ್‌ ನ 48 ಬ್ಯಾಕ್‌ಪೈಪರ್‌ ಡಿಲಕ್ಸ್‌ ವಿಸ್ಕಿ ಪೌಚ್‌ಗಳು ಇರುವ 14 ಬಾಕ್ಸ್‌ಗಳು ದಾಳಿ ವೇಳೆ ವಶಪಡಿಸಿಕೊಳ್ಳಲಾಗಿದೆ. 90 ರು. ಬೆಲೆಬಾಳುವ ಮದ್ಯದ ಪೌಚ್‌ ಗಳನ್ನು 500 ರು.ಗೆ ಮಾರಾಟ ಮಾಡಲಾಗುತ್ತಿತ್ತು. ಈ ಸಂಬಂಧ ಚಿತ್ರಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರಡೂ ವಾಹನಗಳ ವಶಕ್ಕೆ ಪಡೆಯಲಾಗಿದೆ.