Asianet Suvarna News Asianet Suvarna News

ಅಕ್ರಮ ಗಣಿಗಾರಿಕೆಗೆ ಸರ್ಕಾರ ಕುಮ್ಮಕ್ಕು: ದರ್ಶನ್‌

ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ಒಂದೇ ಕುಟುಂಬದ ಇಬ್ಬರು ಪ್ರಭಾವಿ ವ್ಯಕ್ತಿಗಳು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದರೂ, ಸರ್ಕಾರದ ನೇರ ಕೈವಾಡದಿಂದಾಗಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ರೈತಸಂಘದ ಮುಖಂಡ ದರ್ಶನ್‌ ಪುಟ್ಟಣ್ಣಯ್ಯ ಆರೋಪಿಸಿದರು.

 Government support for illegal  mining Darshan snr
Author
First Published Jan 15, 2023, 6:35 AM IST

 ಮಂಡ್ಯ  : ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ಒಂದೇ ಕುಟುಂಬದ ಇಬ್ಬರು ಪ್ರಭಾವಿ ವ್ಯಕ್ತಿಗಳು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದರೂ, ಸರ್ಕಾರದ ನೇರ ಕೈವಾಡದಿಂದಾಗಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ರೈತಸಂಘದ ಮುಖಂಡ ದರ್ಶನ್‌ ಪುಟ್ಟಣ್ಣಯ್ಯ ಆರೋಪಿಸಿದರು.

ಆಡಳಿತ ಪಕ್ಷದ ನಾಯಕರೊಂದಿಗೆ ಸಂಬಂಧ ಹೊಂದಿರುವ ಎಲೆಚಾಕನಹಳ್ಳಿ ಬಸವರಾಜು ಅವರ ಪತ್ನಿ ಹೇಮಲತಾ ಬಸವರಾಜು ಮತ್ತು ಸಹೋದರ ಅಶೋಕ್‌ಗೌಡ ಪಾಟೀಲ್‌ ಎಂಬುವರಿಗೆ ಸೇರಿದ ಈ ಗಣಿಗಾರಿಕೆಯಲ್ಲಿ ನಿಷೇಧಿತ ಸ್ಫೋಟಕಗಳನ್ನು ಬಳಸಿ ಕಲ್ಲುಗಳನ್ನು ಸಿಡಿಸುತ್ತಿರುವುದರಿಂದ ಸುತ್ತಮುತ್ತಲ ಕೃಷಿ ಜಮೀನಿನಲ್ಲಿ ಧೂಳು ಹರಡಿಕೊಂಡು ಪರಾಗಸ್ಪರ್ಶ ಕ್ರಿಯೆಗೆ ಅಡ್ಡಿಯಾಗಿದೆ. ಕೃಷಿ ಹಿನ್ನಡೆ ಅನುಭವಿಸುತ್ತಿದೆ. ಇದರ ನೇರ ಪರಿಣಾಮವನ್ನು ರೈತರು ಎದುರಿಸುತ್ತಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಅಕ್ರಮ ಗಣಿಗಾರಿಕೆಯಿಂದ 500ಕ್ಕೂ ಹೆಚ್ಚು ಕುಟುಂಬವಿರುವ ಈ ಗ್ರಾಮದಲ್ಲಿ ಹಲವಾರು ಮನೆಗಳು ಬಿರುಕು ಬಿಟ್ಟಿವೆ, ರಸ್ತೆ, ಸೇತುವೆಗಳು ಹಾಳಾಗಿವೆ, ಬಹುಮುಖ್ಯವಾಗಿ ಸಮೀಪದಲ್ಲೇ ಇರುವ ಹುಲಿಕೆರೆ ಸುರಂಗ ಹಾಗೂ ಕನಗನಮರಡಿ ಮೇಲ್ಗಾಲುವೆ ಇವುಗಳೆಲ್ಲಾ ಅಪಾಯಕ್ಕೆ ಸಿಲುಕಿವೆ ಎಂದು ದೂರಿದರು.

ಗಣಿ ಇಲಾಖೆಯವರು ಕೆಆರ್‌ಎಸ್‌ನಿಂದ ವಾಯು ಮಾರ್ಗದಲ್ಲಿ 20 ಕಿ.ಮೀ.ಗಿಂತ ಹೊರಗಿರುವ ಪರಿಣಾಮ ಕನಗನಮರಡಿಯಲ್ಲಿ ಗಣಿಗಾರಿಕೆಗೆ ಕಾನೂನಿನನ್ವಯ ಅವಕಾಶ ನೀಡಲಾಗಿದೆ ಎನ್ನುತ್ತಾರೆ. ವಾಸ್ತವದಲ್ಲಿ ಕಲ್ಲಿನ ಸೆಲೆ ಕೆಆರ್‌ಎಸ್‌ಗೆ ನೇರ ಸಂಬಂಧಪಟ್ಟಿದೆ. ಈ ಬಗ್ಗೆ ಅನಕ್ಷರಸ್ಥರಾದ ರೈತರೂ ಕೂಡ ಇಲ್ಲಿ ಅಪಾಯ ಸಂಭವಿಸುವ ಸಾಧ್ಯತೆಯನ್ನು ತಿಳಿಸುತ್ತಾರೆ. ಆದರೆ, ಅಧಿಕಾರಿ ವರ್ಗ ಇದಾವುದನ್ನೂ ಕಿವಿಗೆ ಹಾಕಿಕೊಳ್ಳದೆ ಪ್ರಭಾವಿಗಳ ಪರವಾಗಿ ಕಾರ‍್ಯನಿರ್ವಹಿಸುತ್ತಿದ್ದಾರೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್‌.ಕೆಂಪೂಗೌಡ ಆರೋಪಿಸಿದರು.

ಕಾನೂನು ಸಮರ:

ಅಕ್ರಮಗಳ ವಿರುದ್ಧ ನಾವೆಷ್ಟೇ ಬೀದಿಗಿಳಿದು ಹೋರಾಟ ನಡೆಸಿದರೂ ಆಳುವವರ ರೈತ ವಿರೋಧಿ ನೀತಿಯಿಂದಾಗಿ ಹೋರಾಟಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇದು ರೈತ ಸಂಘದ ಹೋರಾಟಕ್ಕೆ ಹಿನ್ನಡೆ ಎಂದು ಅರ್ಥವಲ್ಲ, ಇವತ್ತಿನ ರಾಜಕೀಯ ಸನ್ನಿವೇಶದಲ್ಲಿ ನಡೆದಿರುವ ವಾಸ್ತವದ ಪ್ರತಿಬಿಂಬ ಇದು ಎಂದು ದರ್ಶನ್‌ ಪುಟ್ಟಣ್ಣಯ್ಯ ವಿಷಾದಿಸಿದರು.

ಸುಮಾರು 70 ದಿನಗಳಿಂದ ರೈತರಿಗೆ ಸಿಗಬೇಕಾದ ನ್ಯಾಯಕ್ಕಾಗಿ ಹಗಲಿರುಳೂ ಹೋರಾಟ ನಡೆಸಿದರೂ, ಆಳುವವರು ರೈತರ ಬಗ್ಗೆ ಕನಿಷ್ಠ ಕಾಳಜಿ ತೋರುತ್ತಿಲ್ಲ. ಈಗಾಗಲೇ ನಮ್ಮ ಹೋರಾಟದ ಫಲವಾಗಿಯೇ ಕೆಆರ್‌ಎಸ್‌ ವ್ಯಾಪ್ತಿಯ 13 ಗಣಿಗಾರಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಅದೇ ರೀತಿ ಕೆಲವೆಡೆ ಪ್ರಭಾವಿಗಳ ಮರ್ಜಿಗೊಳಗಾಗಿ ಇಂದಿಗೂ ಅಕ್ರಮವಾಗಿ ಕ್ರಷರ್‌ಗಳು ಧೂಳೆಬ್ಬಿಸುತ್ತಿವೆ. ಈ ಬಗ್ಗೆ ರೈತ ಸಂಘ ಗಂಭೀರ ಚರ್ಚೆ ನಡೆಸಿ ಕಾನೂನು ಹೋರಾಟಕ್ಕೆ ಇಳಿದಿರುವುದಾಗಿ ತಿಳಿಸಿದರು.

ಸರ್ಕಾರ ಕಬ್ಬು ಬೆಳೆಗಾರರಿಗೆ ಟನ್‌ಕಬ್ಬಿಗೆ 150 ರು. ಘೋಷಿಸಿದೆ. ಆದರೆ, ಇದು ಸರ್ಕಾರದಿಂದ ಕೊಡುವ ನೆರವಿನ ಹಣವಲ್ಲ, ಬದಲಿಗೆ ಕಾರ್ಖಾನೆಗಳು ಉಪ ಉತ್ಪನ್ನಗಳ ಆಧಾರದ ಮೇಲೆ ಲಾಭಾಂಶದಲ್ಲಿ 150 ರು. ನೀಡುವುದಾಗಿದೆ. ಕಾರ್ಖಾನೆಯವರೂ ಕೂಡ ಈ ಹಣವನ್ನು ಕೊಡಲಾಗದು ಎಂದು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಯಥನಾಲ್‌, ಬಗಾಸ್‌, ಕಾಕಂಬಿ ಮುಂತಾದ ಉಪ ಉತ್ಪನ್ನಗಳಲ್ಲಿ ಕಬ್ಬು ಸರಬರಾಜುದಾರರಿಗೆ ಇಂತಿಷ್ಟುಲಾಭಾಂಶ ನೀಡಬೇಕು ಎಂದು ರಂಗರಾಜನ್‌ ವರದಿಯಲ್ಲಿ ತಿಳಿಸಲಾಗಿದೆ.

ಆದರೆ, ಕಾರ್ಖಾನೆಯವರು ಕೊಡಬೇಕಾದ ಹಣವೂ ರೈತರಿಗೆ ಸಿಗುತ್ತಿಲ್ಲ. ಮಂಡ್ಯ ಭಾಗದಲ್ಲಿ ಇರುವ ಕಾರ್ಖಾನೆಗಳಲ್ಲಿ ಈ ಉಪ ಉತ್ಪನ್ನಗಳು ತಯಾರಾಗುತ್ತಿಲ್ಲವಾದ್ದರಿಂದ ಕೇವಲ ಕಾಕಂಬಿ ಆಧಾರಿತವಾಗಿ 100 ರು. ಮಾತ್ರ ದೊರೆಯಬಹುದು. ಅದೂ ಕಾರ್ಖಾನೆ ಮಾಲೀಕರು ಒಪ್ಪಿದರೆ ಮಾತ್ರ. ಇಂತಹ ಧೋರಣೆಯನ್ನು ಸರ್ಕಾರ ಅನುಸರಿಸುತ್ತಿರುವುದರಿಂದ ರೈತರ ಸಮಸ್ಯೆಗಳು ಪರಿಹಾರ ಕಾಣದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಗಲು ವಿದ್ಯುತ್‌ಗೆ ಒತ್ತಾಯ:

ಕೃಷಿ ಪಂಪ್‌ಸೆಟ್‌ಗಳಿಗೆ ಸರ್ಕಾರ ಕೇವಲ ರಾತ್ರಿ ವೇಳೆ ಮಾತ್ರ ವಿದ್ಯುತ್‌ ಸರಬರಾಜು ಮಾಡುತ್ತಿರುವುದರಿಂದ ರೈತರು ಚಿರತೆ ಮತ್ತಿತರ ಅಪಾಯಕಾರಿ ವಿಷ ಜಂತುಗಳಿಂದ ಪ್ರಾಣ ಕಳೆದುಕೊಳ್ಳುವಂತಹ ಸನ್ನಿವೇಶ ಸೃಷ್ಠಿಯಾಗಿದೆ ಎಂದು ದರ್ಶನ್‌ ಪುಟ್ಟಣ್ಣಯ್ಯ ಆತಂಕ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಬದಲು ಹಗಲು ಹೊತ್ತಿನಲ್ಲೇ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸರಬರಾಜು ಮಾಡಿದರೆ ರಾತ್ರಿಯ ವೇಳೆ ರೈತರು ನಿದ್ರೆಗೆಡುವುದು ಮತ್ತು ಅಪಾಯಕ್ಕೆ ಸಿಲುಕುವುದನ್ನು ತಪ್ಪಿಸಬಹುದಾಗಿದೆ ಎಂದು ಸಲಹೆ ನೀಡಿದರು.

ಮುಖಂಡರಾದ ರವಿಕುಮಾರ್‌, ಬಲರಾಂ, ಚಿಕ್ಕಣ್ಣ, ಜಯರಾಂ ಇತರರು ಗೋಷ್ಠಿಯಲ್ಲಿದ್ದರು.

Follow Us:
Download App:
  • android
  • ios