ಸುರೇಶ ಭೀ ಬಾಳೋಜಿ 

ಸವದತ್ತಿ[ಅ.4]: ನಿರಂತರವಾಗಿ ಸುರಿದ ಮಳೆ, ನೆರೆ ಹಾವಳಿಗೆ ಮಲಪ್ರಭಾ ಅಣೆಕಟ್ಟೆಯ ಕೆಳಭಾಗದ ಸವದತ್ತಿ ತಾಲೂಕಿನ ಗ್ರಾಮಗಳ ಜನರು ಭಾರಿ ಸಂಕಷ್ಟ ಅನುಭವಿಸಿದ್ದು, ಸರ್ಕಾರದ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಅಣೆಕಟ್ಟೆಗೆ ಸಂಗ್ರಹಗೊಂಡ ಹೆಚ್ಚಿನ ಪ್ರಮಾಣದ ನೀರನ್ನು ಪದೆ ಪದೇ ಹೊರ ಬಿಟ್ಟಿರುವುದರಿಂದ ಒಮ್ಮೆ ಮುಳಗಡೆಯಾದ ನದಿ ಪಾತ್ರದ ಜನರು ಸುಧಾರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿಯೇ ಮತ್ತೆ ಮುಳುಗಡೆಯ ಸಂಕಷ್ಟ ಅನುಭವಿಸಿದ್ದರು. ಮುನವಳ್ಳಿಯ ಭಾಗವೆಲ್ಲ ಮಲಪ್ರಭಾ ನೀರಲ್ಲಿ ಮುಳುಗಿ ಹೋಗಿದ್ದು ಅಂಗಡಿ ಮತ್ತು ಮನೆಗಳಲ್ಲಿನ ಎಲ್ಲ ವಸ್ತುಗಳು ಸಂಪೂರ್ಣ ನಾಶವಾಗಿ ಸಂಕಷ್ಟಕ್ಕೆ ದೂಡಿತ್ತು.

4 ಹೋಬಳಿಗಳಲ್ಲಿ 4363 ಮನೆಗಳಿಗೆ ಹಾನಿ: 

ತಾಲೂಕಿನ ನಾಲ್ಕು ಹೋಬಳಿಗಳಲ್ಲಿ ಒಟ್ಟು  4363 ಮನೆಗಳು ಹಾನಿಯಾಗಿವೆ. ಯರಗಟ್ಟಿ ಹೋಬಳಿಯಲ್ಲಿ 833 ಮನೆಗಳು ಹಾನಿಯಾಗಿದ್ದು, ಅದರಲ್ಲಿ ಶೇ.75ರವರೆಗೆ 35 ಮನೆಗಳು ಹಾನಿಯಾಗಿವೆ. ಇನ್ನು ಶೇ.35ರಷ್ಟು798 ಮನೆಗಳು ಹಾನಿಗೊಳಗಾಗಿವೆ. ಮುನವಳ್ಳಿ ಹೋಬಳಿಯಲ್ಲಿ 1077 ಮನೆಗಳು ಹಾನಿಯಾಗಿದ್ದು, ಅದರಲ್ಲಿ 55 ಮನೆಗಳು ಸಂಪೂರ್ಣ ಹಾನಿಯಾಗಿವೆ.  ಶೇ.75ರವರೆಗೆ 208 ಮನೆಗಳು ಹಾನಿಯಾಗಿದ್ದು, ಇನ್ನು ಶೇ.75ರಷ್ಟು 814ಮನೆಗಳು ಹಾನಿಗೊಳಗಾಗಿವೆ. ಮುರಗೋಡ ಹೋಬಳಿಯಲ್ಲಿ ಒಟ್ಟು974 ಮನೆಗಳು ಹಾನಿಯಾಗಿದ್ದು, ಅದರಲ್ಲಿ 11 ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಶೇ.75ರ ವರೆಗೆ 485 ಮನೆಗಳು ಹಾನಿಯಾಗಿದ್ದು, ಇನ್ನು ಶೇ.75ರಷ್ಟು 478 ಮನೆಗಳು ಹಾನಿಗೊಳಗಾಗಿವೆ.

ಸವದತ್ತಿ ಹೋಬಳಿಯಲ್ಲಿ 1479 ಮನೆಗಳು ಹಾನಿಯಾಗಿದ್ದು, ಅದರಲ್ಲಿ 20 ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಶೇ.75ರವರೆಗೆ 351 ಮನೆಗಳು ಹಾನಿಯಾಗಿದ್ದು, ಇನ್ನು ಶೇ.25ರಷ್ಟು 1108 ಮನೆಗಳು ಹಾನಿಗೊಳಗಾಗಿವೆ. ಒಟ್ಟಾರೆ ತಾಲೂಕಿನ ನಾಲ್ಕು ಹೋಬಳಿಗಳಲ್ಲಿ 86 ಮನೆಗಳು ಸಂಪೂರ್ಣ ಹಾಳಾಗಿದ್ದು, 1079 ಮನೆಗಳು ಶೇ.75ರಷ್ಟು ಹಾಳಾಗಿವೆ. 3198 ಮನೆಗಳು ಶೇ.25ರಷ್ಟು ಹಾಳಾಗಿದ್ದು, ಒಟ್ಟು 4363 ಮನೆಗಳು ಮಳೆ ಮತ್ತು ನೆರೆ ಹಾವಳಿಯಲ್ಲಿ ಹಾಳಾಗಿರುವುದು ದಾಖಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಶೇ.25ರಷ್ಟು ಮನೆಗಳು ಹಾನಿಯಾಗಿರುವ 3198 ಫಲಾನುಭವಿಗಳಲ್ಲಿ ಈಗಾಗಲೆ 776ಫಲಾನುಭವಿಗಳಿಗೆ 25 ಸಾವಿರಗಳಂತೆ ಪರಿಹಾರ ನೀಡಲಾಗಿದ್ದು, ಇನ್ನುಳಿದ ಫಲಾನುಭವಿಗಳಿಗೆ ಪರಿಹಾರದ ವ್ಯವಸ್ಥೆಯನ್ನು ತಾಲೂಕು ಆಡಳಿತ ಕೈಗೊಳ್ಳುತ್ತಿದೆ. ಸಂಪೂರ್ಣ ಮನೆಗಳು ಹಾನಿಯಾಗಿರುವ ಮತ್ತು ಶೇ.75ರಷ್ಟು ಹಾನಿಯಾಗಿರುವ ಫಲಾನುಭವಿಗಳಿಗೆ ರಾಜೀವ ಗಾಂಧಿ ಹೌಸಿಂಗ್ ಬೋರ್ಡ್‌ನಿಂದ ನೇರವಾಗಿ ಪರಿಹಾರ ಬರಲಿದೆ. ತಾಲೂಕಿನಲ್ಲಿ ಮನೆಗಳಲ್ಲಿ ನೀರು ಹೋಗಿ ಹಾನಿ ಅನುಭವಿಸಿದ 2544 ಫಲಾನುಭವಿಗಳಿಗೆ 10 ಸಾವಿರಗಳಂತೆ ಈಗಾಗಲೇ ಪರಿಹಾರ ತಲುಪಿಸಲಾಗಿದೆ.

ಇನ್ನು ನೆರೆಹಾವಳಿಗೆ ಜಾನುವಾರುಗಳು ಸಹ ನಲುಗಿ ಹೋಗಿದ್ದು, ತಾಲೂಕಿನಲ್ಲಿ ಒಟ್ಟು 122 ಜಾನುವಾರುಗಳು ಸತ್ತಿದ್ದು, ಜಾನುವಾರುಗಳ ಮಾಲೀಕರಿಗೆ 10.64 ಲಕ್ಷಗಳ ಪರಿಹಾರವನ್ನು ನೀಡಲಾಗಿದೆ. 41 ಕುರಿ, 9 ಆಕಳು, 2 ಎತ್ತು, 4 ಹೋರಿ, 11 ಎಮ್ಮೆ, 2 ಎಮ್ಮೆ ಕರು, 23 ಹಂದಿ, 30 ಆಡು ಸೇರಿದಂತೆ 122 ಪ್ರಾಣಿಗಳು ನೆರೆಹಾವಳಿಯಲ್ಲಿ ಸತ್ತಿವೆ. 

ಭೇಟಿ ನೀಡದ ಕೇಂದ್ರದ ತಂಡ: 

ತಾಲೂಕಿನಲ್ಲಿ ಸಂಭವಿಸಿದ ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಶಾಸಕ ಆನಂದ ಮಾಮನಿಯವರು ನಿರಂತರವಾಗಿ ನೆರವಾಗುತ್ತಿದ್ದು, ನೆರೆ ಸಂಭವಿಸಿದ ದಿನದಿಂದ ಇಲ್ಲಿಯವರೆಗೆ ಸಂತ್ರಸ್ತರ ಫಲಾನುಭವಿಗಳಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಸವದತ್ತಿ ತಾಲೂಕಿನಂತೆ ಪಕ್ಕದ ತಾಲೂಕು ರಾಮದುರ್ಗದಲ್ಲಿಯೂ ನೆರೆ ಸಂಭವಿಸಿದ್ದು, ಮುಖ್ಯಮಂತ್ರಿ ಸೇರಿದಂತೆ ಸಾಕಷ್ಟು ಮುಖಂಡರು ಸಂತ್ರಸ್ತರ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಮುನವಳ್ಳಿಯಲ್ಲಾಗಿರುವ ತೊಂದರೆಗೆ ಸಂಸದ ಸುರೇಶ ಅಂಗಡಿಯವರು 2 ಬಾರಿ ಭೇಟಿ ನೀಡಿರುವುದು ಬಿಟ್ಟರೆ ಕೇಂದ್ರದ ಯಾವ ತಂಡವು ಇಲ್ಲಿಗೆ ಭೇಟಿ ನೀಡಿಲ್ಲ.

ಈ ಬಗ್ಗೆ ಮಾತನಾಡಿದ ಸವದತ್ತಿ ಶಾಸಕ ಆನಂದ ಮಾಮನಿ ಅವರು, ಕ್ಷೇತ್ರದ ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದು, ನೆರೆ ಹಾವಳಿಯಿಂದ ತತ್ತರಿಸಿದ ಜನರಿಗೆ ಬದುಕು ಕಟ್ಟಿಕೊಳ್ಳಲು ಸೂಕ್ತ ಪರಿಹಾರದ ವ್ಯವಸ್ಥೆ ಮಾಡಲಾಗುತ್ತಿದೆ. ನೆರೆಯಿಂದ ತಾಲೂಕಿನಲ್ಲಿ ರಸ್ತೆ ಮತ್ತು ಸೇತುವೆಗಳು ಹದಗೆಟ್ಟು ಹೋಗಿದ್ದು, ಅವುಗಳ ಅಭಿವೃದ್ಧಿಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.  

ನೆರೆ ಸಂತ್ರಸ್ತರ ಫಲಾನುಭವಿಗಳಿಗೆ ಕೇಂದ್ರದ ನೆರವು ಇಲ್ಲದಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರು ಮಧ್ಯಸ್ಥಿಕೆ ವಹಿಸಿ ನೆರೆಹಾವಳಿಗೆ ತುತ್ತಾದ ಪ್ರತಿಯೊಂದು ತಾಲೂಕನ್ನು ಗಮನದಲ್ಲಿಟ್ಟುಕೊಂಡು ಪರಿಹಾರ ವಿತರಿಸುವಂತ ಕಾರ್ಯ ಮಾಡಬೇಕಿದೆ ಎಂದು ಕಾಂಗ್ರೆಸ್ ಮುಖಂಡ ವಿಶ್ವಾಸ ವೈದ್ಯ ಅವರು ತಿಳಿಸಿದ್ದಾರೆ.