ಹುಲಕೋಟಿಯಲ್ಲಿ ಕುಟುಂಬ ಸಮೇತ ಕೋವಿಡ್‌ ಲಸಿಕೆ ಹಾಕಿಸಿಕೊಂಡ ಹಿರಿಯ ಶಾಸಕ ಎಚ್‌.ಕೆ. ಪಾಟೀಲ| ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ರಣತಂತ್ರವೇನಿಲ್ಲ, ಬಿಜೆಪಿ ಸರ್ಕಾರದ ಸುಳ್ಳು ಭರವಸೆ, ತೊಂದರೆ, ಜನರ ಬದುಕು ಅಸಹನೀಯ ಮಾಡಿರುವುದು, ಬೆಲೆ ಏರಿಕೆ ಬಗ್ಗೆ ಜನರಿಗೆ ಮನವರಿಕೆ ಮಾಡುತ್ತೇವೆ| ಬಿಜೆಪಿಯ ಅವ್ಯವಸ್ಥೆ ಬಗೆಗಿನ ಜಾಗೃತಿಯಿಂದಲೇ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ| 

ಗದಗ(ಮಾ.21): ಮಹಾಮಾರಿ ಕೊರೋನಾ ವಿಷಯದಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡಬಾರದು ಎಂದು ಕಾಂಗ್ರೆಸ್‌ ಹಿರಿಯ ಶಾಸಕ ಎಚ್‌.ಕೆ. ಪಾಟೀಲ ಹೇಳಿದ್ದಾರೆ.

ಭಾನುವಾರ ಅವರ ಸ್ವಗ್ರಾಮವಾದ ಹುಲಕೋಟಿಯ ದಿ. ಕೆ.ಎಚ್‌. ಪಾಟೀಲ ಆಸ್ಪತ್ರೆಯಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಕೋವಿಡ್‌ ಲಸಿಕೆ ಹಾಕಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಸರ್ಕಾರ ಕೂಡಲೇ ಕೊರೋನಾ ಕುರಿತು ಜಾಗೃ​ತ​ವಾಗಬೇಕಿದೆ. ತಜ್ಞರು ಹೇಳಿರುವುದನ್ನು ಸರ್ಕಾರ ಗಂಭೀರವಾಗಿ ಪಾಲಿಸಬೇಕು. ಯಾವುದೇ ಕಾರಣಕ್ಕೂ ಅಲಕ್ಷ್ಯ ಸಲ್ಲದು. ಮೊದಲ ಬಾರಿ ಆದಂತೆ ಈ ಬಾರಿಯೂ ನಿರ್ಲಕ್ಷ್ಯ ಮಾಡಬೇಡಿ. ಇದರಿಂದ ನೀವೇ ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಪಂಚರಾಜ್ಯ ಚುನಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪಂಚರಾಜ್ಯ ಚುನಾವಣೆ ಪ್ರಜಾಪ್ರಭುತ್ವದಲ್ಲಿ ಮಹತ್ವದ ಚುನಾವಣೆ ಆಗಬೇಕಿದೆ. ಆದರೆ, ಚುನಾವಣೆಯ ಮೌಲ್ಯಗಳನ್ನು ಅಲ್ಲಗಳೆಯುವ ರೀತಿಯಲ್ಲಿ ಬಿಜೆಪಿ ವಾತಾವರಣ ಸೃಷ್ಟಿಸುತ್ತಿದ್ದು, ಜನರಿಗೆ ತಪ್ಪು ತಿಳಿವಳಿಕೆ ಮೂಡಿಸುತ್ತಿದೆ. ಧರ್ಮ, ಜಾತಿ, ದೇವರನ್ನು ಚುನಾವಣೆ ನಡುವೆ ತರುತ್ತಿದೆ. ಇದ್ಯಾವುದನ್ನೂ ಚುನಾವಣಾ ಆಯೋಗ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಅದು ಹಲ್ಲು ಇಲ್ಲದ ಹಾವಿನಂತೆ ಸುಮ್ಮನೆ ಬಿದ್ದುಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಮೋದಿ ಅಲೆ ಈ ಬಾರಿ ನಿರ್ನಾಮ ಆಗಬೇಕು. ಬೆಲೆ ಏರಿಕೆ, ಭ್ರಷ್ಟಾಚಾರ, ನಿರುದ್ಯೋಗ ಎಲ್ಲವೂ ಬಿಜೆಪಿಗೆ ತಕ್ಕಪಾಠ ಕಲಿಸುತ್ತದೆ. ಪಂಚರಾಜ್ಯದಲ್ಲಿ ಈ ಬಾರಿ ಮೋದಿ ಅಲೆ ಯಾವ ಕಾರಣಕ್ಕೂ ಸಫಲವಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗಜೇಂದ್ರಗಡ: ನವಜಾತ ಶಿಶು ಕೊಂದು ಹೊಲದಲ್ಲಿ ಬಿಸಾಡಿದ ದುರುಳರು

ರಾಜ್ಯ ಉಪಚುನಾವಣೆ ಕುರಿತು ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ರಣತಂತ್ರವೇನಿಲ್ಲ. ಬಿಜೆಪಿ ಸರ್ಕಾರದ ಸುಳ್ಳು ಭರವಸೆ, ತೊಂದರೆ, ಜನರ ಬದುಕು ಅಸಹನೀಯ ಮಾಡಿರುವುದು, ಬೆಲೆ ಏರಿಕೆ ಬಗ್ಗೆ ಜನರಿಗೆ ಮನವರಿಕೆ ಮಾಡುತ್ತೇವೆ. ಬಿಜೆಪಿಯ ಅವ್ಯವಸ್ಥೆ ಬಗೆಗಿನ ಜಾಗೃತಿಯಿಂದಲೇ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ ಎಂದರು.

ಕಾಂಗ್ರೆಸ್‌ ಮನೆಯೊಂದು 3 ಬಾಗಿಲು ಕುರಿತು ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್‌ಗೆ ಒಂದೇ ಬಾಗಿಲು, ಒಬ್ಬಳೇ ಅಧಿನಾಯಕಿ, ಒಂದೇ ಪಕ್ಷ, ಒಂದೇ ತತ್ವ, ಸಿದ್ಧಾಂತವಿದೆ. ಕಾಂಗ್ರೆಸ್‌ 2, 3, 4 ಎಂದು ಏನಾದರೂ ಅಂದುಕೊಳ್ಳಿ, ಅದು ಬಿಜೆಪಿಯ ಸೃಷ್ಟಿಯೇ ಹೊರತು ಮತ್ತೇನಲ್ಲ. ಕೊರೋನಾ ನಡುವೆಯೂ ದೇಶದ 100 ಜನ ಶ್ರೀಮಂತರ ಆದಾಯ ಶೇ. 35ರಷ್ಟು ಹೆಚ್ಚಾಗಿರುವುದೇ ಮೋದಿಯ ಕೊಡುಗೆ. ಭ್ರಷ್ಟರನ್ನು ಮಟ್ಟಹಾಕುವ, ಲಗಾಮು ಹಾಕುವ ಕೆಲಸ ಮೊದಲು ಆಗಲಿ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಹಿರಿಯ ಶಾಸಕ ಎಚ್‌.ಕೆ. ಪಾಟೀಲ್‌ ಆಕ್ರೋಶ ವ್ಯಕ್ತಪಡಿಸಿದರು.