ಗುರುಮಠಕಲ್(ಜ.23): ಸಾಮಾಜಿಕ ಜಾಲತಾಣಗಳು ಹಾಗೂ ಅಂತರ್ಜಾಲದ ದುರ್ಬಳಕೆ ಕುರಿತು ಶಿಕ್ಷಕರ ವಿರುದ್ಧ ವಿವಿಧೆಡೆ ಆರೋಪಗಳು ಮೂಡಿಬರುತ್ತಿರುವ ಬೆನ್ನಲ್ಲೇ, ವಿಜ್ಞಾನ ವಿಷಯ ಬೋಧಕ ಶಿಕ್ಷಕರೊಬ್ಬರು ಮಕ್ಕಳಿಗೆ ಅಶ್ಲೀಲ ಚಿತ್ರ, ದೃಶ್ಯಗಳ ತೋರಿಸಿ ಪಾಠ ಮಾಡುತ್ತಾರೆಂದು ಮಗದೊಂದು ಆರೋಪ ಇಲ್ಲಿಗೆ ಸಮೀಪದ ಮಡೇಪಲ್ಲಿ ಗ್ರಾಮದಿಂದ ಕೇಳಿಬಂದಿದೆ. 

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಜ್ಞಾನ ಶಿಕ್ಷಕ ಚಂದ್ರಪಾಲ ಅವರು ವಿದ್ಯಾರ್ಥಿಗಳಿಗೆ ಅಶ್ಲೀಲ ಚಿತ್ರಗಳನ್ನು ತೋರಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ ಹಿನ್ನೆಲೆಯಲ್ಲಿ, ಶಿಕ್ಷಣ ಇಲಾಖೆ ಅಧಿಕಾರಿಗಳು ಬುಧವಾರ ಶಾಲೆಗೆ ಭೇಟಿ ನೀಡಿ ಪೋಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕನನ್ನು ವಿಚಾರಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಶಾಲೆಯಲ್ಲಿ ಅಶ್ಲೀಲವಾದಂತಹ ಚಿತ್ರಗಳನ್ನು ತೋರಿಸಿದ್ದರ ಕುರಿತು ಮಕ್ಕಳು ತಮಗೆ ಹೇಳಿದ್ದು, ಶಾಲೆಗೆ ಹೋಗಲು ಮುಜುಗರದಿಂದ ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದ ಪೋಷಕರಾದ ಮೊಗಲಪ್ಪ, ಮಲ್ಲೇಶ, ವೆಂಕಟಪ್ಪ ಹಾಗೂ ಮಹಾದೇವಪ್ಪ ಅವರು, ಈ ಕುರಿತು ಅಧಿಕಾರಿಗಳಿಗೆ ದೂರು ನೀಡಲಾಗಿತ್ತು ಎಂದರು. ಆದರೆ, ಈ ಆರೋಪಗಳ ಬಗ್ಗೆ ಪ್ರತಿಕ್ರಿಯಿಸುವ ಶಿಕ್ಷಕ ಚಂದ್ರಪಾಲ್, ವಿಜ್ಞಾನ ವಿಷಯ ಬೋಧನೆಯ ಸಮಯದಲ್ಲಿ ಪಠ್ಯಕ್ಕೆ ಪೂರಕ ಚಿತ್ರಗಳನ್ನು, ಮಾನವನ ದೈಹಿಕ ಬೆಳವಣಿಗೆ ಹಾಗೂ ಜೀವ ವಿಕಸನ, ಜೈವಿಕ ಬದಲಾವ ಣೆಗಳಿಗೆ ಸಂಬಂಧಿಸಿದಂತೆ ಮೊಬೈಲ್‌ನಲ್ಲಿ ಮಕ್ಕಳಿಗೆ ಚಿತ್ರಗಳನ್ನು ತೋರಿಸಿದ್ದನ್ನು ಹೊರ ತುಪಡಿಸಿದರೆ, ಬೇರಾವ ಅಶ್ಲೀಲ ಚಿತ್ರಗಳನ್ನು ತೋರಿಸಿಲ್ಲ ಎಂದು ಸಮಜಾಯಿಷಿ ನೀಡುತ್ತಾರೆ. 

ಆರೋಪಗಳ ಹಿನ್ನೆಲೆಯಲ್ಲಿ ವಿಚಾರಣೆಗೆ ಬಂದಿದ್ದ ಶಿಕ್ಷಣ ಸಂಯೋಜಕ ಶಿವರಾಜ್ ಸಾಕಾ ಹಾಗೂ ಸಿಆರ್‌ಪಿ ಕ್ರಾಂತಿಕುಮಾರ್ ಕಂಬದ್ ಅವರ ತಂಡ ಶಿಕ್ಷಕ ಚಂದ್ರಪಾಲ್ ಅವರಿಂದ ವಿವರಣೆ ಪಡೆದಿದ್ದು, ಪ್ರಕರಣದ ಕುರಿತ ಪರಿಶೀಲನಾ ವರದಿಯನ್ನು ಮೇಲಧಿಕಾರಿಗಳಿಗೆ ನೀಡಲಾಗುತ್ತದೆ. ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದರು. 

ಪಠ್ಯಕ್ಕೆ ಹೊರತಾದ ವಿಷಯಗಳನ್ನು ಶಾಲೆಯಲ್ಲಿ ಮೊಬೈಲ್ ಮೂಲಕ ತೋರಿಸಿದ್ದಾರೆ ಎನ್ನುವ ಆರೋಪದ ಬಗ್ಗೆ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಶಿಕ್ಷಕ ಚಂದ್ರಪಾಲ್, ‘ನಮ್ಮ ಪಠ್ಯವಸ್ತುವಿಗೆ ಅನುಗುಣವಾಗಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಗರ್ಭಾವ್ಯವಸ್ಥೆ, ಜನನ, ದೈಹಿಕ ಬೆಳವಣಿಗೆಗೆ ಸಂಬಂಧಿಸಿದ್ದನ್ನು ಮಾತ್ರ ನಾನು ಮಕ್ಕಳಿಗೆ ಬೋಧಿಸಿದ್ದೇನೆ.’ ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಾತನಾಡಿದ ವಿಜ್ಞಾನ ಶಿಕ್ಷಕ ಚಂದ್ರಪಾಲ ಮಡೇಪಲ್ಲಿ ಅವರು, ವಿಜ್ಞಾನ ವಿಷಯ ಬೋಧನೆ ಸಮಯದಲ್ಲಿ ಪಠ್ಯಕ್ಕೆ ಪೂರಕವಾದಂತಹ ಚಿತ್ರಗಳನ್ನು, ಮಾನವನ ದೈಹಿಕ ಬೆಳವಣಿಗೆ ಹಾಗೂ ಜೀವ ವಿಕಸನ, ಜೈವಿಕ ಬದಲಾವಣೆಗಳಿಗೆ ಸಂಬಂಧಿಸಿದಂತೆ ಮೊಬೈಲ್‌ನಲ್ಲಿ ಮಕ್ಕಳಿಗೆ ಚಿತ್ರಗಳನ್ನು ತೋರಿಸಿದ್ದನ್ನು ಹೊರತುಪಡಿಸಿದರೆ, ಬೇರಾವ ಅಶ್ಲೀಲ ಚಿತ್ರಗಳನ್ನು ತೋರಿಸಿಲ್ಲ ಎಂದು ಹೇಳಿದ್ದಾರೆ.