‘ಗುಣಮಟ್ಟದ ಶಿಕ್ಷಣದಿಂದ ಸರ್ಕಾರಿ ಶಾಲೆ ಉಳಿವು’

ಸರ್ಕಾರಿ ಕನ್ನಡ ಶಾಲೆಗಳು ಉಳಿಯಬೇಕಾದರೆ, ಶಿಕ್ಷಕರು, ಎಸ್‌ಡಿಎಂಸಿ ಹಾಗೂ ಮಕ್ಕಳ ಪೋಷಕರು ಪರಸ್ಪರ ಒಗ್ಗೂಡಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿದಾಗ ಮಾತ್ರ ಸಾಧ್ಯ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ತಿಳಿಸಿದ್ದಾರೆ.

Government school survives with quality education snr

 ತುಮಕೂರು :  ಸರ್ಕಾರಿ ಕನ್ನಡ ಶಾಲೆಗಳು ಉಳಿಯಬೇಕಾದರೆ, ಶಿಕ್ಷಕರು, ಎಸ್‌ಡಿಎಂಸಿ ಹಾಗೂ ಮಕ್ಕಳ ಪೋಷಕರು ಪರಸ್ಪರ ಒಗ್ಗೂಡಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿದಾಗ ಮಾತ್ರ ಸಾಧ್ಯ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ತಿಳಿಸಿದ್ದಾರೆ.

ನಗರದ ಶಿರಾ ಗೇಟ್‌ನ ಉತ್ತರ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕೆಎನ್‌ಆರ್‌ ಮತ್ತು ಆರ್‌ಆರ್‌ ಅಭಿಮಾನಿ ಬಳಗ, ಹಳೆ ವಿದ್ಯಾರ್ಥಿಗಳ ಸಂಘ, ಎಸ್‌ಡಿಎಂಸಿ ಆಡಳಿತ ಮಂಡಳಿ ಹಾಗೂ ಪೋಷಕರು ಆಯೋಜಿಸಿದ್ದ ಉಚಿತ ಲೇಖನ ಸಾಮಗ್ರಿ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಶಿರಾಗೇಟ್‌ ಉತ್ತರ ಬಡಾವಣೆ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಟಿ.ಜಿ.ಪ್ರಸನ್ನಕುಮಾರ್‌ ಮಾತನಾಡಿ, ಸರ್ಕಾರಿ ಶಾಲೆಗೆ ಬರುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮೆಲ್ಲರ ಗುರಿಯಾಗಿದೆ. ಹಾಗಾಗಿಯೇ ಹಳೆಯ ವಿದ್ಯಾರ್ಥಿಗಳ ಸಂಘ, ಎಸ್‌ಡಿಎಂಸಿ ಆಡಳಿತ ಮಂಡಳಿ ಹಾಗೂ ಪೋಷಕರು ಸೇರಿ, ದಾನಿಗಳ ನೆರವಿನಿಂದ ಶಾಲೆಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯ ವ್ಯವಸ್ಥೆ ಮಾಡಿದ್ದೇವೆ. ಅಲ್ಲದೆ ಮಕ್ಕಳಿಗೆ ಪ್ರತಿವರ್ಷ ಉಚಿತವಾಗಿ ನೋಟ್‌ ಪುಸ್ತಕ ವಿತರಿಸುವ ಕೆಲಸ ಮಾಡುತ್ತಿದ್ದೇವೆ. ಸುತ್ತಮುತ್ತ ಖಾಸಗಿ ಶಾಲೆಗಳಿದ್ದರೂ ನಮ್ಮ ಶಾಲೆಯಲ್ಲಿ ಆರುನೂರಕ್ಕೂ ಹೆಚ್ಚು ಮಕ್ಕಳಿದ್ದಾರೆ. ಅವರ ಉನ್ನತ ಶಿಕ್ಷಣದ ಕನಸು ನನಸಾಗಬೇಕಾದರೆ ಪೋಷಕರು ಆಗಾಗ್ಗೆ ಶಾಲೆಗೆ ಭೇಟಿ ನೀಡಿ, ಮಕ್ಕಳ ಶೈಕ್ಷಣಿಕ ಸ್ಥಿತಿಯನ್ನು ಅರಿತು ಶಿಕ್ಷಕರಿಗೆ ಸಲಹೆ, ಸಹಕಾರ ನೀಡಬೇಕೆಂದು ಸಲಹೆ ನೀಡಿದರು.

ನಗರಪಾಲಿಕೆಯ ಎರಡನೇ ವಾರ್ಡಿನ ಸದಸ್ಯ ಎಸ್‌.ಮಂಜುನಾಥ ಮಾತನಾಡಿ, ಕನ್ನಡ ಮಾಧ್ಯಮ ಶಾಲೆಗಳು ಇಂದು ಅಧೋಗತಿಗೆ ತಲುಪಿವೆ. ಆದರೂ ನಮ್ಮ ಉತ್ತರ ಬಡಾವಣೆಯ ಶಾಲೆ ದಿನದಿಂದ ದಿನಕ್ಕೆ ಅಭಿವೃದ್ಧಿ ಪಥದಲ್ಲಿ ಸಾಗಿದೆ. ಇದಕ್ಕೆ ಶಾಲೆಯ ಮುಖ್ಯಶಿಕ್ಷಕರಾದ ಡಿ.ಎಸ್‌.ಶಿವಸ್ವಾಮಿ ಮತ್ತು ಎಸ್‌ಡಿಎಂಸಿ ಮಂಡಳಿ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘ ಕಾರಣ ಎಂದರು.

ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಓಬಳಯ್ಯ ಮಾತನಾಡಿ, ಸುತ್ತಮುತ್ತಲ ಹತ್ತಾರು ಕನ್ನಡ ಮಾಧ್ಯಮ ಶಾಲೆಗಳು ಮುಚ್ಚಿದ್ದರೂ ನಮ್ಮ ಶಾಲೆಯ ದಾಖಲಾತಿ ಸಂಖ್ಯೆ ಹೆಚ್ಚಿದೆ. ಇದಕ್ಕೆ ಕಾರಣ, ಒಳ್ಳೆಯ ಕಟ್ಟಡ, ಗುಣಮಟ್ಟದ ಬೋಧನೆ ಮತ್ತು ಪಠ್ಯೇತರ ಚಟುವಟಿಕೆಗಳು ಎಂದರು.

ಶಾಲೆ ಪದವೀಧರ ಮುಖ್ಯಶಿಕ್ಷಕ ಡಿ.ಎಸ್‌.ಶಿವಸ್ವಾಮಿ ಮಾತನಾಡಿ, ಈ ವರ್ಷ ನಮ್ಮ ಶಾಲೆಯಲ್ಲಿ 560 ಮಕ್ಕಳು ಓದುತ್ತಿದ್ದಾರೆ. ಪ್ರತಿವರ್ಷ ದಾಖಲಾಗುವವರ ಸಂಖ್ಯೆ ಹೆಚ್ಚಾಗಿದೆ. ಐದಾರು ಕಿ.ಮೀ.ದೂರದಿಂದ ಮಕ್ಕಳು ನಮ್ಮ ಶಾಲೆಗೆ ಕಲಿಯಲು ಬರುತ್ತಿದ್ದಾರೆ. ಇದಕ್ಕೆ ಕಾರಣ ಗುಣಮಟ್ಟದ ಶಿಕ್ಷಣ. ಕಳೆದ ವರ್ಷ ಪ್ರತಿ ಮಗುವಿಗೆ ಒಂದು ಸಾವಿರ ರು.ಗಳ ಮೌಲ್ಯದ ನೋಟ್ಸ್‌ ಮತ್ತು ಲೇಖನ ಸಾಮಗ್ರಿಗಳನ್ನು ಎಲ್ಲಾ ಮಕ್ಕಳಿಗೆ ವಿತರಿಸಲಾಗಿತ್ತು ಎಂದರು.

ಮಕ್ಕಳಿಗೆ ನೋಟ್ಸ್‌ ಪುಸ್ತಕ ವಿತರಿಸಲಾಯಿತು. ವೇದಿಕೆಯಲ್ಲಿ ಶಾಲೆಯ ಪದವೀಧರ ಮುಖ್ಯಶಿಕ್ಷಕ ಎಸ್‌.ಡಿ.ಶಿವಸ್ವಾಮಿ, ಎಸ್‌ಡಿಎಂಸಿ ಸದಸ್ಯರಾದ ಜಬೀನಾ, ನೀಲಮ್ಮ, ವಿಜಯಕುಮಾರಿ, ಅರುಣಕುಮಾರಿ, ಮಂಜುಳ, ಭಾಗ್ಯಮ್ಮ, ಹನುಮ ರಂಗಯ್ಯ, ಬಸವನಗೌಡ, ಪುಷ್ಪ, ಭರತಕುಮಾರ್‌ ಹಗೂ ಶಾಲೆಯ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.

ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಶಿಕ್ಷಣ ಎಂಬುದು ಎಲ್ಲಾ ಸಮಸ್ಯೆಗಳಿಂದ ಮನುಷ್ಯ ಹೊರಬರಲು ಸಹಾಯ ಮಾಡುತ್ತದೆ. ಹಾಗಾಗಿ ಸಭೆ, ಸಮಾರಂಭಗಳಲ್ಲಿ ಗಣ್ಯರಿಗೆ ಹಾರ, ತುರಾಯಿ ಬದಲು ಶಾಲಾ ಮಕ್ಕಳಿಗೆ ಈ ರೀತಿಯ ನೋಟ್‌ ಪುಸ್ತಕ ವಿತರಿಸಿದರೆ ಬಡ ಮಕ್ಕಳ ಓದಿಗೆ ಅನುಕೂಲ ಮಾಡಿದಂತಹ ತೃಪ್ತಿ ದೊರೆಯುತ್ತದೆ. ಈ ನಿಟ್ಟಿನಲ್ಲಿ ಕೆಎನ್‌ಆರ್‌ ಮತ್ತು ಆರ್‌ಆರ್‌ ಅಭಿಮಾನಿ ಬಳಗದ ಕಾರ್ಯ ಶ್ಲಾಘನೀಯ. ಎಲ್ಲಾ ಸಂಘ ಸಂಸ್ಥೆಗಳು ಇದನ್ನು ಅಳಡಿಸಿಕೊಂಡರೆ ಉತ್ತಮ.

ಜಿ.ಬಿ.ಜ್ಯೋತಿಗಣೇಶ್‌ ಶಾಸಕ

Latest Videos
Follow Us:
Download App:
  • android
  • ios