Big 3: ಸರ್ಕಾರಿ ಶಾಲೆ ಜಾಗ ಒತ್ತುವರಿ: ಗ್ರಾಮಸ್ಥರ ಹೋರಾಟಕ್ಕೆ ಅಧಿಕಾರಿಗಳ ಜಾಣಕುರುಡು
Big 3 Davanagere Story: ಶಾಲೆ ಒಳಗೆ ಕೂತು ಕಲಿಯಬೇಕಿದ್ದ ಮಕ್ಕಳೆಲ್ಲ ಹೊರಗೆ ಬಂದು "ನಮಗೆ ನಮ್ಮ ಶಾಲೆ ಜಾಗವನ್ನ ಉಳಿಸಿ ಕೊಡಿ" ಎಂದು ಹೋರಾಟ ಮಾಡುತ್ತಿದ್ದಾರೆ
ದಾವಣಗೆರೆ (ನ. 10): ಈ ಹಿಂದೆ ಸರ್ಕಾರಿ ಶಾಲೆಗಳ ಆರಂಭಕ್ಕಾಗಿ ಅದೆಷ್ಟೋ ಜನರು ಜಮೀನುಗಳನ್ನು ದಾನ ಮಾಡಿದ ನೂರಾರು ಉದಾಹರಣೆಗಳಿವೆ. ಆದ್ರೆ ಈ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಇರೋ ಜಾಗವನ್ನು ಅತಿಕ್ರಮಿಸಿ ಬೇಲಿ ಹಾಕಿಕೊಳ್ಳುತ್ತಿದ್ದಾರೆ. ಸಿಕ್ಕ ಸಿಕ್ಕಷ್ಟು ಒತ್ತುವರಿ ಮಾಡಿ ಅದು ನಮಗೆ ಸೇರಿದ್ದು ಎಂದು ತಕರಾರು ಮಾಡ್ತಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಬೇಸತ್ತಿದ್ದು ದಯಮಾಡಿ ಶಾಲೆ ಉಳಿಸಿ ಎಂದು ಅಂಗಲಾಚುತ್ತಿದ್ದಾರೆ. ಶಾಲೆ ಒಳಗೆ ಕೂತು ಕಲಿಯಬೇಕಿದ್ದ ಮಕ್ಕಳೆಲ್ಲ ಹೊರಗೆ ಬಂದು "ನಮಗೆ ನಮ್ಮ ಶಾಲೆ ಜಾಗವನ್ನ ಉಳಿಸಿ ಕೊಡಿ" ಎಂದು ಹೋರಾಟ ಮಾಡುತ್ತಿದ್ದಾರೆ.
ಅಷ್ಟಕ್ಕೂ ಈ ದೃಶ್ಯ ಕಂಡು ಬಂದಿದ್ದು ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಉಜ್ಜಪ್ಪವಡೇಯರಹಳ್ಳಿಯಲ್ಲಿ. 106 ಮಕ್ಕಳು ಓದುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುತ್ತಮುತ್ತ ಒತ್ತುವರಿದಾರರ ಕಾಟ ದಿನೇ ದಿನೇ ಹೆಚ್ಚಾಗಿದೆ. ಸರ್ಕಾರಿ ಶಾಲೆಗೆ ಸೇರಿದ ಜಾಗದಲ್ಲಿ ಕೆಲವರು ಬೇಲಿ ಹಾಕಿದ್ದರೆ. ಇನ್ನು ಕೆಲವರು ಮನೆಗಳ ಕಟ್ಟಿದ್ದಾರೆ. 4.8 ಎಕರೆ ಜಮೀನಿನಲ್ಲಿ ಒಟ್ಟು 14 ಜನ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದಾರಂತೆ. ಈ ಬಗ್ಗೆ ಬೇಸತ್ತಿರುವ ಗ್ರಾಮಸ್ಥರೆಲ್ಲಾ ಸ್ಕೂಲ್ ಉಳಿಸಿ ಎಂದು ತಹಶೀಲ್ದಾರ್ ಹಾಗು ಇಓಗೆ ಮನವಿ ಮಾಡಿದ್ದಾರೆ.
ಇನ್ನು ಈ ಸ್ಕೂಲ್ ಜಾಗ ಈಗಲೂ ಗ್ರಾಮ ಠಾಣಾ ಎಂದು ಗ್ರಾಮ ಪಂಚಾಯತ್ನಲ್ಲಿ ದಾಖಲೆಗಳಿವೆ. ಆದ್ರೆ ಕೆಲ ಖಾಸಗಿ ವ್ಯಕ್ತಿಗಳು ತಮ್ಮದೇ ಆಸ್ತಿ ಎಂಬಂತೆ ಬೇಲಿ ಹಾಕಿಕೊಂಡಿದ್ದಾರಂತೆ. ಇನ್ನು ಕೆಲವರು ಮನೆಯನ್ನು ಕಟ್ಟಿ ಇದು ನಮಗೆ ಸೇರಿದ ಜಾಗ ಅಂತಿದ್ದಾರಂತೆ. ಹೀಗಾಗಿ ಶಾಲೆ ಜಾಗ ಅತಿಕ್ರಮವಾಗಿದ್ದು ನಮ್ಮ ಸ್ಕೂಲ್ ಜಾಗ ಉಳಿಯಲೇ ಬೇಕು ಎಂದು ಗ್ರಾಮಸ್ಥರೆಲ್ಲ ಮನವಿ ಮಾಡ್ತಿದ್ದಾರೆ.
ಇದನ್ನೂ ಓದಿ: Big 3: ಯಾದಗಿರಿಯ ಹೋತಪೇಟೆ ಜನರಿಗೆ ಕುಡಿಯುವ ನೀರೇ ವಿಷ!
ಶಾಲೆ ಶಾಶ್ವತ ಬಂದ್: ಒತ್ತುವರಿ ಮಾಡಿರೋ ಜಾಗವನ್ನ ತೆರವು ಮಾಡದಿದ್ದರೆ ಶಾಲೆಯನ್ನ ಶಾಶ್ವತವಾಗಿ ಮುಚ್ಚುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಜಗಳೂರು ತಹಶೀಲ್ದಾರ್ ಸಂತೋಷಕುಮಾರ್ ಹಾಗು ತಾಲ್ಲೂಕ್ ಪಂಚಾಯತ್ ಇಓ ಹಾಗು ಜಗಳೂರು ಬಿಇಓ ಗ್ರಾಮದ ಸ್ಕೂಲ್ ಆವರಣದಲ್ಲಿ ಎರಡು ಗಂಟೆಗಳ ಕಾಲ ಸಭೆ ನಡೆಸಿ ಅತಿಕ್ರಮಣ ಮಾಡಿಕೊಂಡಿರುವವರನ್ನು ಕರೆಸಿ ಮಾತನಾಡಿದ್ದಾರೆ. ಗ್ರಾಮ ಪಂಚಾಯತ್‌ನ ದಾಖಲೆಗಳನ್ನು ಪರಿಶೀಲಿಸಿ ಸ್ಕೂಲ್ ಜಾಗವನ್ನು ಉಳಿಸಿಕೊಡುವುದಾಗಿ ಅಧಿಕಾರಿಗಳು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ. ಕೂಡಲೇ ಒತ್ತುವರಿದಾರರಿಗೆ ನೋಟೀಸ್ ನೀಡುತ್ತೇವೆ ಎಂದು ಅಧಿಕಾರಿಗಳು ಸಮಾಧಾನದ ಉತ್ತರ ನೀಡಿದ್ದು, ಇದುವರೆಗೂ ಕೊಟ್ಟ ಮಾತು ಹಾಗೇಯೇ ಉಳಿದಿದೆ.
ಸ್ಕೂಲ್ ಜಾಗ ಒತ್ತುವರಿ ಬಗ್ಗೆ ಗ್ರಾಮದಲ್ಲಿ ವಾತವರಣ ಬೂದಿಮುಚ್ಚಿದ ಕೆಂಡದಂತಿದೆ. ಸರ್ಕಾರಿ ಶಾಲೆ ಉಳಿಸಿಲು ಒಂದು ಗುಂಪು ಟೊಂಕಕಟ್ಟಿ ನಿಂತಿದೆ. ಸ್ಕೂಲ್ ಉಳಿಸಿಲು ಎಂತಹ ಹೋರಾಟಕ್ಕಾದ್ರು ನಾವು ಸದಾ ಸಿದ್ದ ಎನ್ನುತ್ತಿದ್ದಾರೆ. ಅದೇನೆ ಇರಲಿ ಒತ್ತುವರಿ ಯಾರೇ ಮಾಡಿರಲಿ. ಆ ಶಾಲೆಯಲ್ಲಿ ಕಲಿಯುತ್ತಿರೋದು ನಮ್ಮ ಮಕ್ಕಳು ಅನ್ನೋದು ಅರಿವಿರಲಿ ಅಷ್ಟೇ. ಒಟ್ಟಾರೆ ಅಧಿಕಾರಿಗಳೇ ಜನ ಪ್ರತಿನಿಧಿಗಳೇ ಕೂಡಲೇ ಸಮಸ್ಯೆ ಬಗೆ ಹರಿಸಿ ಮಕ್ಕಳಿಗೆ ಸುಸಜ್ಜಿತವಾದ ಕಲಿಕಾ ವಾತವರಣವನ್ನ ನಿರ್ಮಿಸಿ ಕೊಡಿ ಅನ್ನೋದು ಬಿಗ್-3 ಆಗ್ರಹ.