ಹಾವೇರಿ[ಜ.22): ನೆರೆ ಸಂತ್ರಸ್ತರ ಮನವಿಯಂತೆ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೊಳಗಾದ ‘ಬಿ’ ವರ್ಗದ ಮನೆಗಳ ದುರಸ್ತಿಗೆ ಪರಿಹಾರ ನೀಡುವ ಮಾನದಂಡವನ್ನು ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದೆ. ಎ ಮತ್ತು ಬಿ ವರ್ಗದ ಮನೆಗಳನ್ನು ಪೂರ್ಣ ಕೆಡವಿ ಪುನರ್‌ ನಿರ್ಮಿಸಿದರೆ 5 ಲಕ್ಷ ಪರಿಹಾರ ಹಾಗೂ ಬಿ ವರ್ಗದ ಮನೆಗಳನ್ನು ಪೂರ್ಣವಾಗಿ ಕೆಡವದೆ ದುರಸ್ತಿ ಮಾಡಲು 3 ಲಕ್ಷ ಪರಿಹಾರ ಪಾವತಿಸಲು ಆದೇಶಿಸಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಕಳೆದ ಆಗಸ್ಟ್‌-ಸೆಪ್ಟಂಬರ್‌ ಹಾಗೂ ಅಕ್ಟೋಬರ್‌ ತಿಂಗಳಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದ ಕಾರಣದಿಂದ ಹಾನಿಯಾದ ಮನೆಗಳ ಪುನರ್‌ ನಿರ್ಮಾಣ ಕಾರ್ಯಕ್ಕಾಗಿ ಸರ್ಕಾರ ಅಗತ್ಯ ಅನುದಾನ ಒದಗಿಸಲು ಎ, ಬಿ ಹಾಗೂ ಸಿ ಮೂರು ವರ್ಗಗಳಾಗಿ ವಿಂಗಡಿಸಿ ಈ ಪೈಕಿ ಸಿ ವರ್ಗದ ಮನೆಗಳ ದುರಸ್ತಿಗಾಗಿ ತಹಸೀಲ್ದಾರ್‌ ಹಂತದಲ್ಲಿ ಒಂದು ಬಾರಿಗೆ 50 ಸಾವಿರ ಪರಿಹಾರ ಬಿಡುಗಡೆ ಮಾಡಲಾಗಿತ್ತು. ಹಾಗೂ ಎ ಮತ್ತು ಬಿ ವರ್ಗದ ಮನೆಗಳಿಗೆ ತಲಾ 5 ಲಕ್ಷ ಅನುದಾನ ಒದಗಿಸುವುದಾಗಿ ಆದೇಶಮಾಡಿ ಮೊದಲ ಕಂತಿನ ಪರಿಹಾರವಾಗಿ 1ಲಕ್ಷ ಅನುದಾನವನ್ನು ಈಗಾಗಲೇ ಸಂತ್ರಸ್ತರ ಖಾತೆಗೆ ಬಿಡುಗಡೆ ಮಾಡಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡುವ ಮೊದಲು ಸದರಿ ಎ ಮತ್ತು ಬಿ ವರ್ಗದ ಸಂತ್ರಸ್ತರು ಹಾನಿಗೊಳಗಾದ ಮನೆಗಳ ತಳಪಾಯ ಹಂತದಿಂದ ಪುನರ್‌ ನಿರ್ಮಾಣ ಆರಂಭಿಸಿ ಈ ಕುರಿತ ಭಾವಚಿತ್ರವನ್ನು ಅಪ್‌ಮಾಡಿದಲ್ಲಿ ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡುವ ಷರತ್ತು ನಿಗದಿ ಪಡಿಸಲಾಗಿತ್ತು. ಈ ಷರತ್ತಿನ ಕುರಿತಂತೆ ಗ್ರಾಮಗಳಲ್ಲಿ ಕೆಲವು ಫಲಾನುಭವಿಗಳು ಭಾಗಶಃ ಹಾನಿಗೊಳಗಾದ ಮನೆಗಳನ್ನು ಪೂರ್ಣ ನೆಲಸಮ ಮಾಡಿ ತಳಪಾಯ ಹಂತದಿಂದಲೇ ನಿರ್ಮಿಸಬೇಕಾದಲ್ಲಿ 5 ಲಕ್ಷ ಅನುದಾನ ಸಾಕಾಗುವುದಿಲ್ಲ. ಇದಕ್ಕೆ 10 ರಿಂದ  20 ಲಕ್ಷ ಅನುದಾನ ಬೇಕಾಗುತ್ತದೆ. ಈ ಕಾರಣದಿಂದ ಹಾನಿಗೊಳಗಾದ ಭಾಗವನ್ನು ಮಾತ್ರ ಪುನರ್‌ ನಿರ್ಮಾಣ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂಬ ಮನವಿಗೆ ಸರ್ಕಾರ ಸ್ಪಂದಿಸಿ ಪರಿಷ್ಕೃತ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ.

ಪರಿಸ್ಕೃತ ಆದೇಶದಂತೆ ಎ ಮತ್ತು ಬಿ ವರ್ಗದ ಮನೆಗಳನ್ನು ಪೂರ್ಣವಾಗಿ ಕೆಡವಿ ಹಾಗೂ ಪುನರ್‌ ನಿರ್ಮಾಣ ಮಾಡುವ ಮನೆಗಳಿಗೆ ನಾಲ್ಕು ಹಂತಗಳಲ್ಲಿ . 5 ಲಕ್ಷ ಅನುದಾನ ಹಾಗೂ ಭಾಗಶಃ ಹಾನಿಗೀಡಾದ ಮನೆಗಳ ದುರಸ್ತಿ ಕಾರ್ಯ ಕೈಗೊಳ್ಳಲು . 3 ಲಕ್ಷ ಎರಡು ಹಂತದಲ್ಲಿ ಪಾವತಿಸಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಹೊಸ ಮಾರ್ಗಸೂಚಿಯಂತೆ ಎ ಮತ್ತು ಬಿ ವರ್ಗದ ಮನೆಗಳನ್ನು ಪೂರ್ಣವಾಗಿ ಕೆಡವಿ ಹಾಗೂ ಪುನರ್‌ ನಿರ್ಮಾಣ ಮಾಡುವ ಮನೆಗಳಿಗೆ . 5 ಲಕ್ಷ ಪರಿಹಾರವನ್ನು ನಾಲ್ಕು ಹಂತವಾರು (ತಳಪಾಯ, ಕಿಟಕಿ, ಛಾವಣಿ ಮತ್ತು ಪೂರ್ಣ) ಫೋಟೋಗಳನ್ನು ಕಡ್ಡಾಯವಾಗಿ ಜಿಪಿಎಸ್‌ ಮುಖಾಂತರ ಅಳವಡಿಸಿದ ನಂತರ ಪಾವತಿಸಲಾಗುವುದು.

ಭಾಗಶಃ ಹಾನಿಗೀಡಾದ ಮನೆಗಳ ದುರಸ್ತಿ ಕಾರ್ಯಗಳು, ಇತ್ಯಾದಿಗಳನ್ನು ಕೈಗೊಳ್ಳುವ ಸಲುವಾಗಿ . 3 ಲಕ್ಷಗಳಿಗೆ ಸೀಮಿತಕ್ಕೊಳಪಟ್ಟು ಪರಿಹಾರವನ್ನು ಎರಡು ಹಂತವಾರು ಫೋಟೋಗಳನ್ನು (ಮನೆ ಭಾಗಶಃ ಹಾನಿಗೊಳಗಾದ ಫೋಟೋ ಮತ್ತು ಮನೆ ದುರಸ್ತಿ ಮಾಡಿಕೊಂಡು ನಂತರ ಫೋಟೋ) ಕಡ್ಡಾಯವಾಗಿ ಜಿಪಿಎಸ್‌ ಮುಖಾಂತರ ಅಳವಡಿಸಿದ ನಂತರ ಪಾವತಿಸಲಾಗುವುದು.

‘ಸಿ’ ವರ್ಗದ ಮನೆಗಳ ಪರಿಹಾರದ ಮೊತ್ತ 50 ಸಾವಿರಗಳಾಗಿದ್ದು, ಇದರಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.