ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಅ.02): ಕಂದಾಯ ಇಲಾಖೆಯ ಮಾದರಿಯಲ್ಲಿ ಕೆಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿ ಬಿಬಿಎಂಪಿಯಿಂದ ವಾಣಿಜ್ಯ ಉದ್ದೇಶಕ್ಕೆ ಗುತ್ತಿಗೆ ನೀಡಲಾದ ಆಸ್ತಿಗಳನ್ನು ಮಾರಾಟ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಕೊರೋನಾ ಸೋಂಕಿ ಆರ್ಥಿಕ ಸಂಕಷ್ಟ ಸುಧಾರಣೆ ಉದ್ದೇಶದ ಹೆಸರಿನಲ್ಲಿ ಕಂದಾಯ ಇಲಾಖೆಯ ಕರ್ನಾಟಕ ಭೂ ಮಂಜೂರಾತಿ ನಿಯಮ 1969ರ ನಿಯಮ 19ರಿಂದ 22 ಪ್ರಕಾರ ಸರ್ಕಾರದ ಭೂಮಿಯನ್ನು ಖಾಸಗಿ ಸಂಸ್ಥೆಗಳಿಗೆ ನೀಡಲಾದ ಆಸ್ತಿಯನ್ನು ನಿಯಮ 27 ಅಡಿಯಲ್ಲಿ ಗುತ್ತಿಗೆ ಪಡೆದ ಸಂಸ್ಥೆಗಳಿಗೆ ಕಾಯಂ ಆಗಿ ಆಸ್ತಿ ಮಾರಾಟ ಮಾಡುವ ತೀರ್ಮಾನವನ್ನು ಇತ್ತೀಚೆಗೆ ರಾಜ್ಯ ಸರ್ಕಾರ ತೆಗೆದುಕೊಂಡಿತ್ತು.

ಇದೀಗ ಇದೇ ಮಾದರಿಯಲ್ಲಿ ಕರ್ನಾಟಕ ಮುನಿಪಲ್‌ ಕಾಪೋರೆಷನ್‌ ಕಾಯ್ದೆ 1976 (ಕೆಎಂಸಿ)ಕ್ಕೆ ತಿದ್ದುಪಡಿ ತರುವುದರೊಂದಿಗೆ ಬಿಬಿಎಂಪಿಯಿಂದ ವಾಣಿಜ್ಯ ಉದ್ದೇಶಕ್ಕೆ ವಿವಿಧ ಸಂಸ್ಥೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೀಡಲಾದ 235 ಆಸ್ತಿಗಳ ಮಾರಾಟಕ್ಕೆ ನಗರಾಭಿವೃದ್ಧಿ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯ ಗುತ್ತಿಗೆ ಆಧಾರದ ಮೇಲೆ ನೀಡಲಾದ 324 ಆಸ್ತಿಗಳ ಮೌಲ್ಯವನ್ನು ಲೆಕ್ಕಚಾರ ಮಾಡಲಾಗಿದ್ದು, 4,554 ಕೋಟಿ ರು. ಬೆಲೆ ಬಾಳಲಿದೆ ಎಂದು ಬಿಬಿಎಂಪಿ ಆಸ್ತಿ ವಿಭಾಗ ವರದಿ ಸಿದ್ಧಪಡಿಸಿದೆ.

ಅದರಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ನೀಡಲಾದ ಆಸ್ತಿಗಳನ್ನು ಮಾತ್ರ ಮಾರಾಟಕ್ಕೆ ಮುಂದಾಗಿರುವ ಬಿಬಿಎಂಪಿ 3,679 ಕೋಟಿ ರು. ಮೌಲ್ಯದ 235 ಆಸ್ತಿಗಳನ್ನು ವಾಣಿಜ್ಯಉದ್ದೇಶಕ್ಕೆ ಗುತ್ತಿಗೆ ನೀಡಿದೆ ಎಂಬ ಅಂಕಿ ಅಂಶ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ. ಉಳಿದಂತೆ ಶೈಕ್ಷಣಿಕ ಉದ್ದೇಶಕ್ಕೆ 356 ಕೋಟಿ ರು. ಮೌಲ್ಯದ 24 ಆಸ್ತಿ, ವಿವಿಧ ಸರ್ಕಾರಿ ಇಲಾಖೆಗಳಿಗೆ 440 ಕೋಟಿ ರು. ಮೌಲ್ಯದ 43 ಆಸ್ತಿ ಹಾಗೂ ಧಾರ್ಮಿಕ ಸಂಸ್ಥೆಗಳಿಗೆ 77 ಕೋಟಿ ರು. ಮೌಲ್ಯದ 22 ಆಸ್ತಿಗಳನ್ನು ಗುತ್ತಿಗೆ ನೀಡಲಾಗಿದೆ.

'ಕೊರೋನಾ ಪರೀಕ್ಷೆ ನಿರಾಕರಿಸಿದರೆ ಕೇಸ್‌ ಹಾಕ್ತೀವಿ'

ಗುತ್ತಿಗೆ ಮುಗಿದ 116 ಆಸ್ತಿಗೆ ನೋಟಿಸ್‌

ಪಾಲಿಕೆಯಿಂದ ಗುತ್ತಿಗೆ ನೀಡಲಾದ 324 ಪೈಕಿ ವಾಣಿಜ್ಯ ಉದ್ದೇಶದಕ್ಕೆ ನೀಡಿದ 235 ಆಸ್ತಿಗಳಲ್ಲಿ 116 ಆಸ್ತಿಗಳ ಗುತ್ತಿಗೆ ಅವಧಿ ಪೂರ್ಣಗೊಂಡು ಮೂರ್ನಾಲ್ಕು ವರ್ಷ ಕಳೆದರೂ ನವೀಕರಣ ಅಥವಾ ಪಾಲಿಕೆಗೆ ವಾಪಾಸ್‌ ನೀಡಿಲ್ಲ. ಹೀಗಾಗಿ, 116 ಆಸ್ತಿ ಗುತ್ತಿಗೆ ಪಡೆದವರಿಗೆ ನೋಟಿಸ್‌ ಜಾರಿ ಮಾಡಿ ಈಗಾಗಲೇ 6 ಆಸ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 47 ಆಸ್ತಿಗಳ ಗುತ್ತಿಗೆ ನವೀಕರಣ ಮಾಡಲಾಗಿದೆ. 26 ಆಸ್ತಿಗಳ ವಶಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪಾಲಿಕೆ ಆಸ್ತಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಬಿಬಿಎಂಪಿಯ ಒಟ್ಟು ಆಸ್ತಿ ಸಂಖ್ಯೆ 6,828

ಬೆಂಗಳೂರು ಮಹಾನಗರ ಪಾಲಿಕೆಗೆ 2007ರಲ್ಲಿ ರಾಜ್ಯ ಸರ್ಕಾರ ಬೆಂಗಳೂರಿನ ಸುತ್ತಲಿನ ಏಳು ಪುರಸಭೆ, ಒಂದು ಪಟ್ಟಣ ಪಂಚಾಯಿತಿ ಸೇರಿದಂತೆ 110 ಹಳ್ಳಿಗಳನ್ನು ಬೆಂಗಳೂರಿಗೆ ಸೇರಿಸುವ ಮೂಲಕ 800 ಚದರ ಕಿ.ಮೀ ವ್ಯಾಪ್ತಿಯ ಬಿಬಿಎಂಪಿ ರಚನೆ ಮಾಡಿತ್ತು. ಈ ವೇಳೆ ಖಾಲಿ ನಿವೇಶ, ಕಟ್ಟಡ, ಕಚೇರಿ, ಆಟದ ಮೈದಾನ, ಪಾರ್ಕ್, ಶಾಲೆ, ಕೆರೆ, ಆಸ್ಪತ್ರೆಗಳು ಸೇರಿದಂತೆ ಸಾವಿರಾರು ಸಂಖ್ಯೆ ಆಸ್ತಿಗಳು ಬಿಬಿಎಂಪಿಗೆ ಸೇರ್ಪಡೆಗೊಂಡಿವೆ. ಆದರೆ, ಆ ಆಸ್ತಿಗಳ ಒಟ್ಟು ಸಂಖ್ಯೆ ಎಷ್ಟು, ಎಷ್ಟು ವಿಸ್ತೀರ್ಣ, ಎಷ್ಟುಮೌಲ್ಯ ಹೊಂದಿವೆ ಎಂಬರ ಬಗ್ಗೆ ನಿಖರವಾಗಿ ಮಾಹಿತಿ ಇರಲಿಲ್ಲ. ಇದೀಗ ಬಿಬಿಎಂಪಿಯ ಆಸ್ತಿ ವಿಭಾಗ ಬಿಬಿಎಂಪಿ ಮಾಲೀಕತ್ವದ ಎಲ್ಲ ಆಸ್ತಿಗಳ ದಾಖಲೆ ಸಮೇತ ಮಾಹಿತಿ ಕಲೆಹಾಕಿದ್ದು, ಒಟ್ಟು 6,828 ಆಸ್ತಿಗಳಿವೆ ಎಂದು ದೃಢೀಕರಿಸಿದೆ. ಈ ಆಸ್ತಿಗಳ ಮೌಲ್ಯ ಎಷ್ಟು ಎಂಬುರ ಬಗ್ಗೆಯೂ ಲೆಕ್ಕಚಾರ ನಡೆಸಲಾಗುತ್ತಿದೆ.

ಕೋಟ್ಯಂತರ ರು. ಬೆಲೆ ಬಾಳು ಆಸ್ತಿಗಳನ್ನು ಅತ್ಯಂತ ಕಡಿಮೆ ಬೆಲೆಗೆ ಗುತ್ತಿಗೆ ನೀಡಲಾಗಿದೆ. ಈ ಆಸ್ತಿಗಳು ಮತ್ತೆ ಪಾಲಿಕೆಗೆ ವಾಪಾಸ್‌ ಬರುವುದಿಲ್ಲ, ಹೀಗಾಗಿ, ಈ ಆಸ್ತಿಗಳನ್ನು ಮಾರ್ಗಸೂಚಿ ದರಕ್ಕಿಂತ ಎರಡು ಪಟ್ಟದರಕ್ಕೆ ಅದೇ ಸಂಸ್ಥೆಗೆ ಮಾರಾಟ ಮಾಡುವುದರಿಂದ ಪಾಲಿಕೆ ಹೆಚ್ಚಿನ ಪ್ರಮಾಣ ಸಂಪನ್ಮೂಲ ಕ್ರೋಢೀಕರಣವಾಗಲಿದೆ. ಈ ನಿಟ್ಟಿನಲ್ಲಿ ನಗರಾಭಿವೃದ್ಧಿ ಕೆಎಂಸಿ ಕಾಯ್ದೆಗೆ ತಿದ್ದುಪಡಿಗೆ ಸಿದ್ಧತೆ ಮಾಡುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಅವರು ತಿಳಿಸಿದ್ದಾರೆ.