Asianet Suvarna News Asianet Suvarna News

ಎಲೆಚುಕ್ಕಿ ರೋಗಕ್ಕೆ ಔಷಧ ಒದಗಿಸದ ಸರ್ಕಾರ; ರೈತರ ಆಕ್ರೋಶ

  • ಎಲೆಚುಕ್ಕಿ ರೋಗಕ್ಕೆ ಔಷಧ ಒದಗಿಸದ ಸರ್ಕಾರ
  •  ಕುಶಾವತಿ ತೋಟಗಾರಿಕಾ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿ ರೈತರ ಆಕ್ರೋಶ
Government not providing medicine for leaf disease shivamogga rav
Author
First Published Oct 22, 2022, 7:51 AM IST

ತೀರ್ಥಹಳ್ಳಿ (ಅ.22) : ಎಲೆಚುಕ್ಕಿ ರೋಗದಿಂದ ಅಡಕೆ ತೋಟವೇ ನಾಶವಾಗುವ ಸ್ಥಿತಿಗೆ ತಲುಪಿದೆ. ಈ ರೋಗ ನಿಯಂತ್ರಣಕ್ಕೆ ಸರ್ಕಾರ ಘೋಷಣೆ ಮಾಡಿರುವ ಶಿಲೀಂಧ್ರ ನಾಶಕವನ್ನು ಕೂಡ ಸಕಾಲದಲ್ಲೇ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಅಡಕೆ ಬೆಳೆಗಾರರು ಶುಕ್ರವಾರ ಪಟ್ಟಣದ ಕುಶಾವತಿಯ ತೋಟಗಾರಿಕಾ ಕೇಂದ್ರದ ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಂಗನ ಕಾಯಿಲೆ ಲಸಿಕೆ ಉತ್ಪಾದನೆ ಸ್ಥಗಿತ, ಆತಂಕ

ಮೊದಲ ಕಂತಿನಲ್ಲಿ ತಾಲೂಕಿಗೆ ಬಂದಿದ್ದ .19.25 ಲಕ್ಷ ಸಹಾಯಧನದಲ್ಲಿ ಶಿಲೀಂಧ್ರನಾಶಕ ಸಿಂಪರಣೆಗೆ ಖರೀದಿಸಿದ್ದ ಔಷಧವನ್ನು 867 ರೈತರಿಗೆ ಹಂಚಿಕೆ ಮಾಡಲಾಗಿದೆ. ಮೊದಲು ಬಂದವರಿಗೆ ಇದರ ವಿತರಣೆಯಾಗಿದೆ. ಬುಧವಾರ ಮತ್ತು ಗುರುವಾರ ಕೇವಲ ಎರಡೇ ದಿನದಲ್ಲಿ ವಿತರಣೆಯಾಗಿದೆ. ಔಷಧವನ್ನು ಒಯ್ಯಲು ಶುಕ್ರವಾರ ಮುಗಿದಿರುವುದೇ ಬಹುತೇಕ ಗೊಂದಲಕ್ಕೆ ಕಾರಣವಾಗಿದೆ. ಕೂಗಾಡುತ್ತಿದ್ದ ರೈತರ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಅಧಿಕಾರಿಗಳು ಅಸಹಾಯಕರಾಗಿದ್ದ ಸನ್ನಿವೇಶ ನಿರ್ಮಾಣವಾಗಿತು ್ತ.

ತಾಲೂಕಿನಲ್ಲಿ ಅಧಿಕೃತವಾಗಿ ಸುಮಾರು 15000ಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಕೆಲವು ಬೆಳೆಗಾರರು ಔಷಧಕ್ಕಾಗಿ ಒತ್ತಾಯ ಮಾಡುತ್ತಿದ್ದು, ಮತ್ತೆ ಕೆಲವರು ಸಹಾಯಧನವನ್ನು ತಮ್ಮ ಖಾತೆಗೆ ವರ್ಗಾಯಿಸಿದರೆ ನಾವೇ ಖರೀದಿಸುತ್ತೇವೆ ಎಂದೂ ಆಗ್ರಹಿಸುತ್ತಿರುವುದು ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿದೆ.

ಪ್ರತಿ ಹೆಕ್ಟೇರಿಗೆ .4000 ಸಹಾಯಧನವನ್ನು ಘೋಷಣೆ ಮಾಡಿದ್ದ ಸರ್ಕಾರದ ಆದೇಶದಂತೆ ಸಹಾಯಧನದ ಹಣವನ್ನು ನೇರವಾಗಿ ರೈತರ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡುವಂತೆಯೂ ಮೊದಲಿಗೆ ಸೂಚಿಸಲಾಗಿತ್ತು. ಸಹಾಯಧನದ ಹಣವನ್ನು ನೇರವಾಗಿ ರೈತರ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡುವ ನಿರ್ಣಯವನ್ನು ದಿಢೀರನೇ ಬದಲಿಸಿದ ಸರ್ಕಾರದ ಮಧ್ಯಂತರ ಆದೇಶವೇ ಗೊಂದಲಕ್ಕೆ ಕಾರಣವಾಗಿದೆ. ಸರ್ಕಾರದ ಈ ನಿರ್ಧಾರ ಅನುಮಾನಕ್ಕೂ ಕಾರಣವಾಗಿದೆ ಎಂಬುದು ಕೆಲ ರೈತರ ಅನಿಸಿಕೆಯಾಗಿದೆ.

ಕಳೆದ ವಾರ ಆಗುಂಬೆ ಹೋಬಳಿಯ ಗಿಳಿಗನಮನೆ ಗ್ರಾಮದಲ್ಲಿ ನಡೆದ ಕಾರ್ಯಾಗಾರದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಸಮ್ಮುಖದಲ್ಲಿ ಅಡಕೆಗೆ ತಗುಲಿರುವ ಎಲೆಚುಕ್ಕಿ ರೋಗ ನಿಯಂತ್ರಣದ ಸಲುವಾಗಿ ಸಾಂಕೇತಿಕವಾಗಿ ಶಿಲೀಂಧ್ರನಾಶಕ ಔಷಧವನ್ನು ವಿತರಿಸಲಾಗಿತ್ತು. ಅತಿ ಹೆಚ್ಚು ಬಾಧಿತವಾದ ಪ್ರದೇಶಗಳಿಗೆ ಆದ್ಯತೆ ಮೇರೆಗೆ ಬೆಳೆಗಾರರಿಗೆ ವಿತರಿಸುವಂತೆಯೂ ತೋಟಗಾರಿಕಾ ಇಲಾಖೆಗೆ ಸೂಚನೆ ನೀಡಲಾಗಿತ್ತು. ಶಿವಮೊಗ್ಗ ಕೃಷಿ ವಿ.ವಿ.ಯ ಉಪಕುಲಪತಿಗಳು ಮತ್ತು ತೋಟಗಾರಿಕಾ ಇಲಾಖೆ ಹಿರಿಯ ಅಧಿಕಾರಿಗಳು ಇದರಲ್ಲಿ ಭಾಗವಹಿಸಿದ್ದರು. ಔಷಧಕ್ಕಾಗಿ ಶುಕ್ರವಾರ ಬಂದಿದ್ದ ಆಗುಂಬೆ ಭಾಗದ ಕೆಲವು ರೈತರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ, ಕಳೆದ ಮೂರು ವರ್ಷಗಳಿಂದ ನಾವು ಸರ್ಕಾರವನ್ನು ಆಗ್ರಹಿಸುತ್ತಿದ್ದೇವೆ. ಕೊಳೆರೋಗ ಮುಂತಾದ ಸಮಸ್ಯೆಗಳು ಮಾತ್ರವಲ್ಲದೇ ಕಾಡು ಪ್ರಾಣಿಗಳ ಬಾಧೆಯಿಂದ ನಲುಗಿದ್ದೀವೆ. ನಮ್ಮ ಗೋಳನ್ನು ಕೇಳುವವರೆ ಇಲ್ಲವಾಗಿದೆ ಎಂದೂ ದೂರಿದರು.

ಅಡಕೆ ಸಂಶೋಧನಾ ಕೇಂದ್ರ ಇದ್ದೂ ಇಲ್ಲದಂತಾಗಿದೆ. ಅಡಕೆ ಬೆಳೆಗಾರರಿಗೆ ಈ ಕೇಂದ್ರದಿಂದ ಯಾವುದೇ ಪ್ರಯೋಜನ ಇಲ್ಲವಾಗಿದೆ. ಸರ್ಕಾರದ ಸಹಾಯಧನÜದ ಸಲುವಾಗಿ ಪಹಣಿಗೆ ಕೆಲಸ ಕಾರ್ಯ ದಿನಗಟ್ಟಲೆ ಕಾದಿದ್ದೀವಿ. ಇಲ್ಲಿಗೆ ಬಂದರೆ ಔಷಧ ಖಾಲಿಯಾಗಿದೆ ಅಂತಾರೆ. ದೊಡ್ಡದಾಗಿ ಪ್ರಚಾರ ಕೊಟ್ಟಇಲಾಖೆ ಎರಡೇ ದಿನದಲ್ಲಿ ಖಾಲಿಯಾಗಿದೆ ಅಂತಿದ್ದಾರೆ. ನಮ್ಮ ಗೋಳು ಯಾರಿಗೆ ಹೇಳೋದು? ಈ ಔಷಧಿ ಬಗ್ಗೆ ನಮಗೆ ಪೂರ್ಣ ನಂಬಿಕೆಯೂ ಇಲ್ಲ ಎಂದು ಆಲಗೇರಿಯ ರೈತ ಸುಬ್ಬಯ್ಯ ಹೇಳಿದರು.

ಕರ್ನಾಟಕಕ್ಕೆ ಎಫ್‌ಎಸ್‌ಎಲ್‌ ವಿವಿ ಮಂಜೂರು: ಗೃಹ ಸಚಿವ ಆರಗ ಜ್ಞಾನೇಂದ್ರ

ಸರ್ಕಾರ ಪ್ರತಿ ಹೆಕ್ಟೇರಿಗೆ 4 ಸಾವಿರ ಮೌಲ್ಯದ ಔಷಧವನ್ನು ಕೊಡುವ ಘೋಷಣೆ ಮಾಡಿದ್ದರೂ ಇಲ್ಲಿ ಒಂದು ಎರಡು ಪ್ಯಾಕ್‌ ಮಾತ್ರ ಕೊಡ್ತಿದ್ದಾರೆ. ಇದು ಗಾಯದ ಮೇಲೆ ಬರೆ ಎಳೆಯುವ ಕ್ರಮವಾಗಿದೆ. ಔಷಧವನ್ನು ಕೊಡುವ ಬದಲಿಗೆ ಸಹಾಯಧನವನ್ನು ನೇರವಾಗಿ ರೈತರ ಬ್ಯಾಂಕ್‌ ಖಾತೆಗೆ ನೀಡಬೇಕಾಗಿತ್ತು

- ಹಸಿರುಮನೆ ಮಹಾಬಲೇಶ್‌, ಮಾಜಿ ಅಧ್ಯಕ್ಷ, ತಾಲೂಕು ಎಪಿಎಂಸಿ

ಇನ್ನು ಎರಡು ಮೂರು ದಿನಗಳಲ್ಲಿ ಸಹಾಯಧನ ಬರಲಿದ್ದು, ಉಳಿದ ರೈತರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಈವರೆಗೆ ಬಂದಿರುವ ಅನುದಾನದಲ್ಲಿ ತಾಲೂಕಿನ 867 ರೈತರಿಗೆ ಔಷಧವನ್ನು ವಿತರಣೆ ಮಾಡಲಾಗಿದೆ

- ಪ್ರಕಾಶ್‌, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ

Follow Us:
Download App:
  • android
  • ios