ಸರ್ಕಾರ ಹೆಣ್ಣು ಮಕ್ಕಳಿಗೆ ವಿಶೇಷ ಸ್ಥಾನಮಾನ ನೀಡಿದೆ : ಕೆ. ಮಂಜುನಾಥ್
ದೇಶದಲ್ಲಿ ಹೆಣ್ಣು ಮಕ್ಕಳಿಗೆ ಸರ್ಕಾರ ವಿಶೇಷ ಸ್ಥಾನಮಾನ ನೀಡಿದೆ, ಆದರೆ ಸಾಮಾನ್ಯ ಜನರು ಮೂಢನಂಬಿಕೆಗೆ ಹೆಚ್ಚು ಒತ್ತನ್ನು ನೀಡಿ ಹೆಣ್ಣು ಮಕ್ಕಳ ಜೀವನದಲ್ಲಿ ಸಂತೋಷಪಡದೆ ಬೇಸರ ವ್ಯಕ್ತಪಡಿಸುವವರ ಸಂಖ್ಯೆಯೇ ಹೆಚ್ಚಿದೆ ಎಂದು ತಹಸೀಲ್ದಾರ್ ಕೆ. ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.
ಕೊರಟಗೆರೆ: ದೇಶದಲ್ಲಿ ಹೆಣ್ಣು ಮಕ್ಕಳಿಗೆ ಸರ್ಕಾರ ವಿಶೇಷ ಸ್ಥಾನಮಾನ ನೀಡಿದೆ, ಆದರೆ ಸಾಮಾನ್ಯ ಜನರು ಮೂಢನಂಬಿಕೆಗೆ ಹೆಚ್ಚು ಒತ್ತನ್ನು ನೀಡಿ ಹೆಣ್ಣು ಮಕ್ಕಳ ಜೀವನದಲ್ಲಿ ಸಂತೋಷಪಡದೆ ಬೇಸರ ವ್ಯಕ್ತಪಡಿಸುವವರ ಸಂಖ್ಯೆಯೇ ಹೆಚ್ಚಿದೆ ಎಂದು ತಹಸೀಲ್ದಾರ್ ಕೆ. ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿಯ ಸಭಾಗಂಣದಲ್ಲಿ ತುಮಕೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಸಹಯೋಗದಲ್ಲಿ ಏರ್ಪಡಿಸಲಾದ ಬೇಟಿ ಬಚಾವೋ ಬೇಟಿ ಪಡವೋ ಯೋಜನೆಯ ಅಡಿಯಲ್ಲಿ ಧಾರ್ಮಿಕ ಮುಖಂಡರು, ಚುನಾಯಿತ ಪ್ರತಿನಿಧಿಗಳು ಮತ್ತು ಸಮುದಾಯದ ಮುಖಂಡರ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹೆಣ್ಣು ಮಕ್ಕಳ ರಕ್ಷಣೆ, ಲಿಂಗಾನುಪಾನ, ಮಹಿಳಾ ಸಬಲೀಕರಣ ಮತ್ತು ಹೆಣ್ಣು ಭ್ರೂಣ ಹತ್ಯೆಯನ್ನು ಕುರಿತು ಹೆಚ್ಚಿನ ಅರಿವು ಮೂಡಿಸಲು ಕೇಂದ್ರ ಸರ್ಕಾರ ಬೇಟಿ ಬಚಾವೋ ಬೇಟಿ ಪಡವೋ ಯೊಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಹೆಣ್ಣು ಮಕ್ಕಳ ಜನನವನ್ನು ನಾವು ಖುಷಿಯಿಂದ ಸಂಭ್ರಮಿಸಬೇಕು, ನಾವು ನಮ್ಮ ಹೆಣ್ಣು ಮಕ್ಕಳ ಬಗ್ಗೆ ಒಂದೇ ರೀತಿಯ ಅಭಿಮಾನ ಹೊಂದಿರಬೇಕು ಎಂದು ಹೇಳಿದರು.
ಸರ್ಕಾರವು ಹೆಣ್ಣು ಮಕ್ಕಳು ಜೀವನದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲಿ ಎಂದು ಶಿಕ್ಷಣಕ್ಕೆ ಹೆಚ್ಚು ಒತ್ತನ್ನು ನೀಡುತ್ತಿದೆ. ಬಡ ಕುಟುಂಬದ ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ಹಾಸ್ಟಲ್‌ನ ವ್ಯವಸ್ಥೆ ನೀಡಿ ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ವಿಚಾರ. ಇತ್ತೀಚಿನ ದಿನಗಳಲ್ಲಿ ಗಮನಕ್ಕೆ ಬಾರದೆ ಬಾಲ್ಯ ವಿವಾಹವು ಹೆಚ್ಚುತ್ತಿದೆ. ಆದ್ಧರಿಂದ ನಾಗರೀಕರು ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯುವ ಬಾಲ್ಯ ವಿವಾಹ ಜೊತೆಗೆ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುವುದು ಕಂಡುಬಂದಲ್ಲಿ ಅದನ್ನು ತಡೆದು ಮಕ್ಕಳ ಇಲಾಖೆಗೆ ಮತ್ತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಆ ಹೆಣ್ಣು ಮಗುವಿನ ರಕ್ಷಣೆಗೆ ಮುಂದಾಗಿ ಎಂದು ಕಿವಿ ಮಾತು ಹೇಳಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಂಬಿಕಾ ಮಾತನಾಡಿ, ತಾಲೂಕಿನಲ್ಲಿ 18 ವರ್ಷ ಒಳಗಿನ ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳದ ಪೋಕ್ಸೊ ಪ್ರಕರಣವು ತಿಂಗಳಿಗೆ 2 ದಾಖಲಾಗುತ್ತಿದೆ, ಜನರಲ್ಲಿ ಬಾಲ್ಯ ವಿವಾಹದ ಬಗ್ಗೆ ಅರಿವು ಮೂಡಿಸಿದರು ಸಹ ಪ್ರಕರಣಗಳ ಸಂಖೈ ಏರಿಕೆಯಾಗುತ್ತಲೆ ಇದೆ ಎಂದು ಹೇಳಿದರು.
ಬಾಲ್ಯ ವಿವಾಹ ಜೊತೆಗೆ ಅದಕ್ಕೆ ಪ್ರೋತ್ಸಾಹ ನೀಡುವುದು ಶಿಕ್ಷಾರ್ಹ ಅಪರಾಧ ಅಂತವರ ವಿರುದ್ಧ ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಒಳಪಡಿಸಲಾಗುವುದು, ತುಮಕೂರು ಜಿಲ್ಲೆಯಲ್ಲಿ 18 ವರ್ಷದ ಒಳಗಿನ ಹೆಣ್ಣು ಮಕ್ಕಳು ಬಾಲ್ಯ ವಿವಾಹವಾಗಿ 620 ಮಂದಿ ಗರ್ಭಿಣಿಯಾಗಿದ್ದಾರೆ. ಜನರು ಹೆಚ್ಚೆತ್ತು ಇನ್ನು ಮುಂದೆಯಾದರೂ ಹೆಣ್ಣು ಮಕ್ಕಳ ಮೇಲೆ ನಡೆಯುವ ಲೈಂಗಿಕ ಕಿರುಕುಳ, ಬಾಲ್ಯ ವಿವಾಹವನ್ನು ತಡೆಯುವುದು ನಮ್ಮ ನಿಮ್ಮೆಲ್ಲರಾ ಕರ್ತವ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾ.ಪಂ ಇಒ ಅಪೂರ್ವ, ಪೊಲೀಸ್ ಇಲಾಖೆಯ ಪಿಎಸ್‌ಐ ಚೇತನ್‌ಕುಮಾರ್ ಸೇರಿದಂತೆ ಶಿಕ್ಷಣ ಇಲಾಖೆಯವರು ಹಾಜರಿದ್ದರು.
18 ವರ್ಷದ ಒಳಗಿನ ಹೆಣ್ಣು ಮಕ್ಕಳ ಮೇಲೆ ನಡೆಸುವ ದೌರ್ಜನ್ಯ, ಲೈಂಗಿಕ ಕಿರುಕುಳ, ಬಾಲ್ಯ ವಿವಾಹವು ಪೋಕ್ಸೋ ಪ್ರಕರಣಕ್ಕೆ ಒಳಪಡುತ್ತದೆ. ಇವುಗಳನ್ನು ತಡೆಗಟ್ಟುವ ಸಲುವಾಗಿ ಮಹಿಳಾ ಮತ್ತು ಮಕ್ಕಳ ಇಲಾಖೆಯು ಸಾರ್ವಜನಿಕರಲ್ಲಿ ಅರಿವು ಮೂಡಿಸಿದ ದಿನಗಳಿಂದ ಇಂತಹ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ, ಸಾರ್ವಜನಿಕರು ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸ್ ಇಲಾಖೆ ಮತ್ತು ಮಕ್ಕಳ ಇಲಾಖೆಗೆ ಮಾಹಿತಿ ನೀಡಬೇಕು.
ಚೇತನ್ ಕುಮಾರ್ ಪಿಎಸ್‌ಐ ಕೊರಟಗೆರೆ.