Yadgir; ವಾಸಕ್ಕೆ ಮನೆಯಿಲ್ಲದೇ ಮದುವೆಯಿಂದ ವಂಚಿತ, ರಾತ್ರಿ ವಾಸಕ್ಕೆ 6 ಕಿಮೀ ಅಲೆದಾಟ!

ಹುಟ್ಟು ಬಡತನ್ದಲ್ಲಿ ಬೆಳೆದ  ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಹಾಲಗೇರಾ ಗ್ರಾಮದ ದೇವಿಂದ್ರಮ್ಮ ತನ್ನ ಇಬ್ಬರು ಸಹೋದರರ ಜೊತೆ ಸೋರುವ ಚಿಕ್ಕ ಕೋಣೆಯಲ್ಲಿ ವಾಸಿಸುತ್ತಿದ್ದು, ಅಲ್ಲಿಯೇ ಅಡುಗೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ.

government failure in ensuring house to homeless women in yadgir gow

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಜು.15): ಬಡತನವೆಂಬ ಶಾಪದಿಂದ ವಾಸಕ್ಕೆ ಮನೆಯಿಲ್ಲದೇ ಆ ಮೂವರು ಮದುವೆಯಾಗದೇ ನರಕಯಾತನೆ ಜೀವನ ನಡೆಸುತ್ತಿದ್ದಾರೆ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಸರಕಾರದ ಆಶ್ರಯ ಮನೆ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಹಾಲಗೇರಾ ಗ್ರಾಮದ ದೇವಿಂದ್ರಮ್ಮ ತನ್ನ ಇಬ್ಬರು ಸಹೋದರರಾದ ಚೆನ್ನಪ್ಪ ಹಾಗೂ ಯಲ್ಲಪ್ಪ ಅವರ ಜೊತೆ ಸಂಕಷ್ಟದಲ್ಲಿ ವಾಸ ಮಾಡ್ತಿದ್ದಾಳೆ. ಮೂವರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಕಷ್ಟದ ಬೇಗುದಿಯಲ್ಲಿ ಬೆಯ್ಯುತ್ತಿದ್ದಾರೆ.

ವಾಸಕ್ಕೆ ಮನೆಯಿಲ್ಲ, ಸರ್ಕಾರ ಪರಿಹಾರದ ಹಣ ನೀಡ್ತಿಲ್ಲ..!
ಕಳೆದ ಐದು ವರ್ಷದಿಂದ ಚಿಕ್ಕದಾದ ಕೋಣೆಯಲ್ಲಿ ಸಹೋದರಿ ದೇವಿಂದ್ರಮ್ಮ ತನ್ನ ಇಬ್ಬರು ಸಹೋದರರ ಜೊತೆ ವಾಸವಾಗಿದ್ದಾಳೆ. ಆದರೆ ಪತ್ರಾಸ್ ಗಳಲ್ಲಿ ರಂಧ್ರ ಬಿದ್ದ ಹಿನ್ನೆಲೆ ಮಳೆ ಬಂದಾಗ ಕೊಣೆಗಳು ಸೋರಿ ಮನೆ ತುಂಬ ನೀರು ನಿಲ್ಲುತ್ತವೆ. ಚಿಕ್ಕದಾದ ಕೋಣೆಯಲ್ಲಿ ಅಗತ್ಯ ವಸ್ತುಗಳು ಇಡುವ ಅಲ್ಲಿಯೇ ಅಡುಗೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಕುಳಿತುಕೊಳ್ಳಲು ಮಾತ್ರ ಜಾಗವಿದ್ದು ಆದರೆ ಮೂವರು ವಾಸಕ್ಕೆ ಜಾಗದ ಕೊರತೆ ಇದೆ. ಮನೆ ದುರಸ್ತಿ ಮಾಡಿಕೊಳ್ಳಬೇಕೆಂದರೇ ಕೈಯಲ್ಲಿ ಹಣವಿಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ. ಮಳೆ ಬಂದ್ರೆ ಕೊಣೆಯು ಸಂಪೂರ್ಣವಾಗಿ ಸೋರುತ್ತದೆ ಕೊಣೆಯು ನೀರಿನಿಂದ ಸಂಗ್ರಹವಾಗುತ್ತದೆ. ಮಳೆಗಾಲದಲ್ಲಿ ಈ ಮೂವರು ನರಕಯಾತನೆ ಜೀವನ ಅನುಭವಿಸುವಂತಾಗಿದೆ. ದೇವಿಂದ್ರಮ್ಮ ಹಾಗೂ ಇಬ್ಬರು ಸಹೋದರರು ವಾಸವಿರುವ ಮನೆಯು 15 ವರ್ಷದ ಹಿಂದೆ ಭಾರಿ ಮಳೆಗೆ ಕುಸಿದಿದೆ. ಆದರೆ ಸರಕಾರದಿಂದ ಒಂದು ರೂಪಾಯಿ ಪರಿಹಾರದ ಪಾವತಿಯಾಗಿಲ್ಲ. ಹೀಗಾಗಿ ಮನೆ ಕುಸಿದಿದ್ದ ಮುಂಭಾಗದ ಚಿಕ್ಕದಾದ ಕೋಣೆಯಲ್ಲಿ ಮೂವರು ವಾಸವಾಗಿದ್ದಾರೆ.

ಹೆಣ್ಣು ಕೊಡಲು ಹಿಂದೇಟು..!
ಜೀವನದಲ್ಲಿ ಒಂದು ಒಳ್ಳೆ ಮನೆ ಇರಬೇಕು ಎಂಬುದು ಎಲ್ಲರ ಬಯಕೆ. ಆದ್ರೆ ದೇವಿಂದ್ರಮ್ಮ, ಚೆನ್ನಪ್ಪ ಹಾಗೂ ಯಲ್ಲಪ್ಪ ಸಹೋದರಿ-ಸಹೋದರರು ಹುಟ್ಟು ಬಡವರು. ಅವರ ಅಪ್ಪ-ಅಮ್ಮ ಕಟ್ಟಿಸಿಹೋದ ಮನೆಯಲ್ಲಿಯೇ ಜೀವನ ಸಾಗಿಸುತ್ತಿದ್ದರು. ಆದ್ರೆ ಈಗ ಆ ಮನೆ ಹಳೆಯದಾಗಿದ್ದು, ಮಳೆ ಬಂದಾಗ ಮನೆ ಸಂಪೂರ್ಣವಾಗಿ ಸೋರಿ ಕೂರಲು ಊಟ ಮಾಡಲು ಹಾಗೂ ಮಲಗಲು ಆಗುವುದಿಲ್ಲ. ಇದರಿಂದಾಗಿ ಮೂವರು ಕೂಡ ಮದುವೆಯಾಗಿಲ್ಲ, ಯಾಕಂದ್ರೆ ಮನೆ ಚೆನ್ನಾಗಿಲ್ಲ, ಜಮೀನು ಇಲ್ಲ ಅಂತ ಹೆಣ್ಣಿನ ಕಡೆಯವ್ರು ಕೇಳ್ತಾರಂತೆ ಇದರಿಂದಾಗಿ ನಮಗೆ ಯಾರು ಹೆಣ್ಣು ಕೊಡ್ತಿಲ್ಲ ಅಂತ ಸುವರ್ಣ ನ್ಯೂಸ್ ಬಳಿ ತಮ್ಮ ನೋವು ಹೇಳಿಕೊಂಡಿದ್ದಾರೆ. ಚಿಕ್ಕದಾದ ಕೋಣೆಯಲ್ಲಿ ವಾಸಮಾಡುವದನ್ನು ಅರಿತು ಹೆಣ್ಣು ಮಕ್ಕಳ ಪೋಷಕರು ನಿಮಗೆ ಮನೆಯಿಲ್ಲ‌ ನೀವು ಕಟ್ಟಿಸಿಕೊಳ್ಳಿ ಎಂದು ಹೆಣ್ಣು ಕೊಡಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಮದುವೆ ಭಾಗ್ಯದಿಂದ ಸಹೋದರರು ವಂಚಿತರಾಗಿದ್ದಾರೆ.

ಹಗಲು ಕಿತ್ತ ಹೋದ ಮನೆ, ರಾತ್ರಿಯಾದರೇ ವಡಗೇರಾದಲ್ಲಿ ವಾಸ...!
ಬೇಸಿಗೆ ಕಾಲದಲ್ಲಿ ಮನೆ ಹೊರಗಡೆ ಮಲಗುತ್ತಾರೆ. ಆದರೆ ಮಳೆಗಾಲದಲ್ಲಿ ಕೊಣೆ ಸೋರುವ ಹಿನ್ನೆಲೆ ರಾತ್ರಿ ವೇಳೆ 6 ಕಿಮೀ ದೂರದ ತಾಲೂಕಾ ಕೇಂದ್ರ ವಡಗೇರಾಗೆ ತೆರಳಿ ಆಸ್ಪತ್ರೆ ಜಾಗದಲ್ಲಿ ಮಲಗುತ್ತಾರೆ. ನಿತ್ಯವೂ 6 ಕಿ.ಮೀ ಅಲೆದಾಡುವದು ಅನಿವಾರ್ಯವಾಗಿದೆ. ಕೊಣೆಗೊಳಗೆ ಕೆಲವೊಮ್ಮೆ ಹಾವು ಹಾಗೂ ಚೆಳುಗಳು ಬರುತ್ತಿದ್ದು ಇದರಿಂದ ಆತಂಕದಲ್ಲಿಯೇ ಜೀವನ ನಡೆಸುತ್ತಿದ್ದಾರೆ.ಇದರಿಂದ ನೆಮ್ಮದಿ ಕಳೆದುಕೊಂಡಿದ್ದಾರೆ.

ವಾಸಕ್ಕೆ ಮನೆಯಿಲ್ಲದ್ದಕ್ಕೆ ಸುವರ್ಣ ನ್ಯೂಸ್ ಬಳಿ ದೇವಿಂದ್ರಮ್ಮ ಕಣ್ಣೀರು: ಸರಕಾರದಿಂದ ಯಾವುದೇ ಸೌಲಭ್ಯ ಸಿಗದೇ ದೇವಿಂದ್ರಮ್ಮ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ತನ್ನ ಇಬ್ಬರು ಸಹೋದರರ ಪಾಲಿಗೆ ತಾಯಿಯಂತೆ ಅಡುಗೆ ‌ಮಾಡಿ ಇಬ್ಬರ ಕಾಳಜಿ ಮೆರೆಯುತ್ತಿದ್ದಾಳೆ. ಯಾರು ಸಹಾಯ ಮಾಡದಕ್ಕೆ ದೇವಿಂದ್ರಮ್ಮ ಕಣ್ಣೀರು ಹಾಕ್ತಿದ್ದಾಳೆ. ದೇವಿಂದ್ರಮ್ಮ ಮಾತನಾಡಿ, ಐದು ವರ್ಷದಿಂದ ಚಿಕ್ಕದಾದ ಕೋಣೆಯಲ್ಲಿ ವಾಸ ಮಾಡುತ್ತಿದ್ದೆವೆ.ಕೊಣೆಯು ಸೋರುತ್ತದೆ. ಜಾಗವಿಲ್ಲ, ಹಾವು ಚೇಳುಗಳು ಬರುತ್ತವೆ. ಹಗಲು ಹೊತ್ತಿನಲ್ಲಿ ಅಡುಗೆ ಮಾಡಿಕೊಂಡು ಕೂಲಿ ಕೆಲಸ ಮಾಡಿ ರಾತ್ರಿ ನಾವು ವಡಗೇರಾದಲ್ಲಿ ಮಲಗುತ್ತೆವೆ. ಸರಕಾರ ಇಲ್ಲವೇ ಯಾರಾದರೂ ಸಹಾಯ ಮಾಡಿ ನಮಗೆ ಆಶ್ರಯವಾಗಬೇಕೆಂದು ದೇವಿಂದ್ರಮ್ಮ ಸಹಾಯಕ್ಕಾಗಿ ಕಣ್ಣೀರು ಹಾಕುತ್ತಾ ಅಂಗಲಾಚಿದ್ದಾಳೆ. ಈಗಲಾದರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಡ ಕುಟುಂಬಸ್ಥರಿಗೆ ಆಶ್ರಯ ಮನೆ ಸೌಲಭ್ಯ ನೀಡಿ ಆಶ್ರಯವಾಗಬೇಕಿದೆ.

Latest Videos
Follow Us:
Download App:
  • android
  • ios