Kudligi: ಬಡವರ ಬಿಪಿಎಲ್‌ ಕಾರ್ಡ್‌ ಕಿತ್ತುಕೊಂಡ ಸರ್ಕಾರ..!

*  ಅನರ್ಹರ ಕಾರ್ಡ್‌ ರದ್ದು ಮಾಡುವ ವೇಳೆ ಕೂಲಿಕಾರ್ಮಿಕರಿಗೆ ಎಪಿಎಲ್‌ ಕಾರ್ಡ್‌
*  ಆಹಾರ ಇಲಾಖೆ, ಕೃಷಿ ಇಲಾಖೆ ಮಾಡಿದ ಎಡವಟ್ಟಿನಿಂದ ಬಡವರ ಅಲೆದಾಟ
*  ಆಹಾರ ಇಲಾಖೆಗೆ ಹಿಡಿಶಾಪ ಹಾಕುತ್ತಿರುವ ಜನರು

Government Converted Poor People BPL Card to APL Card at Kudligi in  Vijayanagara grg

ಭೀಮಣ್ಣ ಗಜಾಪುರ

ಕೂಡ್ಲಿಗಿ(ಜ.10):  ಆಹಾರ ಇಲಾಖೆಯವರು ಅನರ್ಹರ ಬಿಪಿಎಲ್‌ ಕಾರ್ಡ್‌ಗಳನ್ನು(BPL Card) ತೆಗೆದುಹಾಕುವುದನ್ನು ಬಿಟ್ಟು ನಿಜವಾದ ಕೂಲಿಕಾರ್ಮಿಕರ, ನಿರ್ಗತಿಕರ ಬಿಪಿಎಲ್‌ ಕಾರ್ಡ್‌ಗಳನ್ನು ಎಪಿಎಲ್‌ ಕಾರ್ಡ್‌ಗಳಾಗಿ(APL Card) ಮಾರ್ಪಾಟು ಮಾಡಲಾಗಿದೆ. ತಾಲೂಕಿನ ನೂರಾರು ಬಡಕುಟುಂಬಗಳಿಗೆ(Poor Families) ಅದರಿಂದ ದಿಕ್ಕು ತೋಚದಂತಾಗಿದೆ.

7.5 ಎಕರೆಗಿಂತ ಹೆಚ್ಚು ಭೂಮಿ(Land) ಹೊಂದಿರುವವರ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದು ಮಾಡಿ ಎಪಿಎಲ್‌ ಮಾಡುವ ನಿಯಮ ಇದೆ. ಆದರೆ, 2 ಎಕರೆ, 3 ಎಕರೆ ಜಮೀನು ಇದ್ದವರ ಬಿಪಿಎಲ್‌ ಕಾರ್ಡ್‌ಗಳನ್ನೂ ಎಪಿಎಲ್‌ಗೆ ವರ್ಗಾವಣೆ ಮಾಡುವ ಮೂಲಕ ನೂರಾರು ಬಡಕುಟುಂಬಗಳ ಅನ್ನಕ್ಕೆ ಕೊಕ್ಕೆ ಹಾಕಿದ್ದಾರೆ. ತಿಂಗಳಿಂದಲೂ ತಾಲೂಕಿನ ನೂರಾರು ಬಡಕುಟುಂಬಗಳು ತಹಸೀಲ್ದಾರ್‌ ಕಚೇರಿಯಲ್ಲಿರುವ ಆಹಾರ ಇಲಾಖೆಗೆ(Department of Food) ಅಲೆದಾಡುತ್ತಿದ್ದರೂ ಇಲ್ಲಿ ವರೆಗೂ ಈ ಬಡವರಿಗೆ ಪರಿಹಾರ ಸಿಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಕೃಷಿ ಇಲಾಖೆಯವರು(Department of Agriculture) ಎಡವಟ್ಟು ಮಾಡಿದ್ದಾರೆ ಎಂದು ಅವರ ಕಡೆಗೆ ಬೆರಳು ತೋರಿಸುತ್ತಾರೆ. ಕೃಷಿ ಇಲಾಖೆಯವರನ್ನು ಕೇಳಿದರೆ ನಮ್ಮ ತಪ್ಪಿಲ್ಲ, ಆಹಾರ ಇಲಾಖೆಯವರನ್ನು ಕೇಳಿ ಎಂದು ಹೇಳುತ್ತಾರೆ. ಹೀಗಾಗಿ, ಬಿಪಿಎಲ್‌ ಕಾರ್ಡ್‌ಗಳನ್ನು ಕಳೆದುಕೊಂಡವರು ಆಹಾರ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.

Ration Card ರದ್ದತಿಯಿಂದ 249 ಕೋಟಿ ರು. ಉಳಿತಾಯ

ತಾಲೂಕಿನ ಅಮ್ಮನಕೆರೆ ಗ್ರಾಮದ ಬೈರಮ್ಮ ಎನ್ನುವ ದಲಿತ ಮಹಿಳೆಯ(Dalit Woman) ಜಮೀನು 5 ಎಕರೆಗಿಂತ ಕಡಿಮೆ ಇದ್ದರೂ ಬಿಪಿಎಲ್‌ ಕಾರ್ಡ್‌ ರದ್ದುಪಡಿಸಲಾಗಿದೆ. 217 ಎಕರೆ ಜಮೀನು ಈ ಮಹಿಳೆಯ ಹೆಸರಿನಲ್ಲಿದೆ ಎಂದು ರೈತರ ಜಮೀನು ದಾಖಲೀಕರಣದಲ್ಲಿ ಬರುತ್ತದೆ. ಹಿರೇಹೆಗ್ಡಾಳ್‌ ಗ್ರಾಮದ ನಾಗಪ್ಪ ಎನ್ನುವವವರಿಗೆ 7 ಎಕರೆಗಿಂತಲೂ ಕಡಿಮೆ ಇದ್ದರೂ ಬಿಪಿಎಲ್‌ ಕಾರ್ಡ್‌ ಹಿಂಪಡೆಯಲಾಗಿದೆ. ಇಂತಹ ನೂರಾರು ರೈತರ(Farmers) ಪಟ್ಟಿಸಿಗುತ್ತದೆ. ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಕೆಲವರು ಆರೋಪಿಸಿದ್ದಾರೆ.

ಕೂಡ್ಲಿಗಿ(Kudligi) ತಾಲೂಕಿನಲ್ಲಿ 500ಕ್ಕೂ ಹೆಚ್ಚು ಬಡಕುಟುಂಬಗಳನ್ನು ಎಪಿಎಲ್‌ ಕಾರ್ಡ್‌ಗೆ ಪರಿವರ್ತಿಸಲಾಗಿದೆ. ಕೃಷಿ ಇಲಾಖೆಯವರು ಮಾಡಿದ ಎಫ್‌ಐಡಿ ಆಧಾರದ ಮೇಲೆ ನಾವು 7.5 ಎಕರೆಗಿಂತ ಹೆಚ್ಚು ಇದ್ದ ಕುಟುಂಬಗಳನ್ನು ಬಿಪಿಎಲ್‌ನಿಂದ ತೆಗೆದು ಎಪಿಎಲ್‌ಗೆ ಪರಿವರ್ತನೆ ಮಾಡಿದ್ದೇವೆ ಎನ್ನುತ್ತಾರೆ ತಾಲೂಕಿನ ಆಹಾರ ಇಲಾಖೆಯವರು. ಎಫ್‌ಐಡಿ ಮಾಡುವವರ ಎಡವಟ್ಟಿನಿಂದಾಗಿ ಬಡವರು ಕೈ ಕೈ ಹಿಸುಕಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಎಫ್‌ಐಡಿ ಮಾಡುವಾಗ ಜಂಟಿ ಖಾತೆ, ಪಕ್ಕದ ಜಮೀನುಗಳು, ಅದೇ ಹೆಸರಿನಲ್ಲಿರುವ ಇನ್ನಿತರ ರೈತರ ಸರ್ವೇ ನಂಬರ್‌ಗಳು ನಮೂದಾಗಿರುವುದರಿಂದ ವಾಸ್ತವವಾಗಿ ಜಮೀನು 7 ಎಕರೆಗಿಂತಲೂ ಕಡಿಮೆ ಇರುವ ರೈತ ಕುಟುಂಬಗಳು ಬಿಪಿಎಲ್‌ ಕಾರ್ಡ್‌ನಿಂದ ವಂಚಿತವಾಗಬೇಕಾಗಿದೆ.

ಎಪಿಎಲ್‌ ಕಾರ್ಡ್‌ ತೆಗೆದುಹಾಕಲು ಆಹಾರ ಇಲಾಖೆಗೆ ಹೋದರೆ ಸಾಫ್ಟ್‌ವೇರ್‌ ಒಪನ್‌ ಆಗಿಲ್ಲ ಎಂದು ತಿಂಗಳಿಂದಲೂ ಹೇಳುತ್ತಿದ್ದು, ಒಪನ್‌ ಆದಾಗ ಬನ್ನಿ ಎಂದು ಹೇಳಿ ಕಳುಹಿಸುತ್ತಾರೆ. ವಾರಕ್ಕೊಂದು ಬಾರಿ ಮಾತ್ರ ಸಾಫ್ಟ್‌ವೇರ್‌ ಒಪನ್‌ ಆಗುತ್ತಂತೆ. ಆಗ ಬಂದರೆ ಮಾತ್ರ ನಿಮ್ಮ ಎಪಿಎಲ್‌ ಕಾರ್ಡ್‌ ತೆಗೆದುಹಾಕಬಹುದು ಎನ್ನುತ್ತಾರೆ ಅಧಿಕಾರಿಗಳು. ಪುನಃ ಬಿಪಿಎಲ್‌ಗೆ ಹೊಸ ಅರ್ಜಿ ಹಾಕಬೇಕು. ಆ ಸಾಫ್ಟ್‌ವೇರ್‌ ಒಪನ್‌ ಆಗುವವರೆಗೂ ಕಾಯಬೇಕು. ಆನಂತರ ಮಂಜೂರು ಆಗಬೇಕು. ಅಲ್ಲಿಯವರೆಗೆ ಬಡಕುಟುಂಬಗಳು ಯಾರದೋ ತಪ್ಪಿಗೆ ಅನ್ನವಿಲ್ಲದೇ ಪರಿತಪಿಸಬೇಕಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು ಅರ್ಹರಿಗೆ ನ್ಯಾಯ ಒದಗಿಸಬೇಕಿದೆ.

BPL Card Cancellation : ಬಿಪಿಎಲ್‌ ಕಾರ್ಡ್‌ ರದ್ಧತಿ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ

ನನ್ನ ಹೆಸರಿಗೆ 4 ಎಕರೆಗಿಂತಲೂ ಕಡಿಮೆ ಜಮೀನು ಇದ್ದರೂ ನನಗೆ ಬಿಪಿಎಲ್‌ ಕಾರ್ಡ್‌ ತೆಗೆದುಹಾಕಿ ಎಪಿಎಲ್‌ ಕಾರ್ಡ್‌ ಮಾಡಿದ್ದಾರೆ. ಹತ್ತಾರು ಬಾರಿ ಆಹಾರ ಇಲಾಖೆಗೆ ಅಲೆದಾಡಿದರೂ ಪ್ರಯೋಜನವಾಗಿಲ್ಲ. ಆಹಾರ ಇಲಾಖೆ, ಕೃಷಿ ಇಲಾಖೆ ಮಾಡಿದ ಎಡವಟ್ಟಿನಿಂದ ನಾನು ಅಲೆದಾಡುವ ಪರಿಸ್ಥಿತಿ ಬಂದಿದೆ. ಆಹಾರ ಇಲಾಖೆಗೆ ಹೋದರೆ ಅಲ್ಲಿ ಸ್ಪಂದಿಸುತ್ತಿಲ್ಲ. ಹೀಗಾದರೆ ನಾವು ಯಾರ ಹತ್ತಿರ ಹೋಗಬೇಕು ಹೇಳಿ? ನಮಗೆ ಈಗ ತಿಂಗಳಿಂದಲೂ ಅಕ್ಕಿ ಕೊಟ್ಟಿಲ್ಲ. ಕುಟುಂಬದಲ್ಲಿ ಮೂರು ಮಕ್ಕಳು ಸೇರಿದಂತೆ ಐದು ಜನ ಇದ್ದೀವಿ. ನಾವು ಹೇಗೆ ಜೀವನ ಮಾಡ್ಬೇಕು ಹೇಳಿ? ಅಂತ ಗಜಾಪುರ ಗ್ರಾಮಸ್ಥ ಬಾರಿಕರ ಕೊಟ್ರಪ್ಪ ತಿಳಿಸಿದ್ದಾರೆ.  

ಕೃಷಿ ಇಲಾಖೆಯವರು ರೈತರ ಮಾಹಿತಿ ಇರುವ ಎಫ್‌ಐಡಿ ಮಾಹಿತಿ ಆಧಾರದ ಮೇಲೆ ವರದಿ ನೀಡಿದ್ದಾರೆ. ಅದರ ಆಧಾರದ ಮೇಲೆ ಹೆಚ್ಚು ಭೂಮಿ ಇರುವ ರೈತರ ಬಿಪಿಎಲ್‌ ಕಾರ್ಡ್‌ಗಳನ್ನು ತೆಗೆದುಹಾಕಲಾಗಿದೆ. ಅನ್ಯಾಯವಾಗಿರುವವರು ಎಪಿಎಲ್‌ ಕಾರ್ಡ್‌ ತೆಗೆಸಿ ಹಾಕಿ ಬಿಪಿಎಲ್‌ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಬಹುದು ಅಂತ ಕೂಡ್ಲಿಗಿ ತಾಲೂಕು ಆಹಾರ ಇಲಾಖೆ ಅಧಿಕಾರಿ ಗೀತಾಂಜನೇಯ ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios