ಬಿಬಿಎಂಪಿ ಚುನಾವಣೆಗೆ ಮತ್ತೆ 3 ತಿಂಗಳು ಸಮಯ ಕೇಳಿದ ಸರ್ಕಾರ
ನ.30ರಿಂದ ಅನ್ವಯವಾಗುವಂತೆ ಮುಂದಿನ ಮೂರು ತಿಂಗಳಿಗೆ ವಿಸ್ತರಿಸಲು ಕೋರಿಕೆ
ಬೆಂಗಳೂರು(ನ.24): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಚುನಾವಣೆ ನಡೆಸಲು ಮತ್ತೆ ಮೂರು ತಿಂಗಳ ಸಮಯ ನೀಡುವಂತೆ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಕೋರಿದೆ. ಈ ಕುರಿತು ರಾಜ್ಯ ನಗರಾಭಿವೃದ್ಧಿ ಇಲಾಖೆಯು ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದು, ಬಿಬಿಎಂಪಿಯ 243 ವಾರ್ಡ್‌ಗಳಿಗೆ ನ.30 ರೊಳಗೆ ಮೀಸಲಾತಿ ನಿಗದಿಪಡಿಸಬೇಕು ಹಾಗೂ ಡಿ.31ರೊಳಗೆ ಚುನಾವಣೆ ನಡೆಸಬೇಕು ಎಂದು ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ 2022ರ ಸೆ.30ರಂದು ಆದೇಶಿಸಿದೆ. ಈ ಆದೇಶ ಪಾಲನೆ ಮಾಡಲು ಮೂರು ತಿಂಗಳ ಕಾಲ ಅವಧಿ ವಿಸ್ತರಣೆ ಮಾಡಬೇಕು ಎಂದು ಕೋರಿದೆ.
243 ವಾರ್ಡ್‌ಗಳಲ್ಲಿ ಎಸ್ಸಿ-ಎಸ್ಟಿವರ್ಗಗಳಿಗೆ ಮೀಸಲಾತಿ ನಿಗದಿಪಡಿಸಿದ ಬಳಿಕ ಹಿಂದುಳಿದ ವರ್ಗ ಎ ಮತ್ತು ಬಿ ಗೆ ಮೀಸಲಾತಿ ನಿಗದಿಪಡಿಸಲು ಇರುವ ವಿಧಾನವೇನು. ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ನ ನಿರ್ದೇಶನದ ಪ್ರಕಾರ ರಾಜಕೀಯ ಮೀಸಲಾತಿಗೆ ಅರ್ಹರಿರುವ ಹಿಂದುಳಿದ ವರ್ಗಗಳ ವಿವರವಾದ ಪಟ್ಟಿಸಲ್ಲಿಸಬೇಕು. ಹಾಗೆಯೇ, ಪೂರಕ ವರದಿಯಲ್ಲಿ ಸಲ್ಲಿಸಲಾಗಿರುವ ಹಿಂದುಳಿದ ವರ್ಗಗಳ ಜನಸಂಖ್ಯೆಯ ವಾಸ್ತವ ದತ್ತಾಂಶದ ದೃಢೀಕರಣವೇನು ಎಂಬುದು ಸೇರಿದಂತೆ ವಿವಿಧ ಅಂಶಗಳನ್ನು ಪರಿಶೀಲಿಸುವಂತೆ ಸರ್ಕಾರ 2022ರ ನ.17ರಂದು ಆಯೋಗಕ್ಕೆ ಪತ್ರ ಬರೆದಿದೆ. ಅದನ್ನು ಪರಿಶೀಲಿಸಿ ಶೀಘ್ರ ಪ್ರತಿಕ್ರಿಯಿಸುವುದಾಗಿ ಆಯೋಗ ಸಹ ಹೇಳಿದೆ.
ಬಿಬಿಎಂಪಿ ವಾರ್ಡ್ ಮೀಸಲು ಕರಡು ಪಟ್ಟಿ ಇನ್ನೊಂದು ವಾರದಲ್ಲಿ ಪ್ರಕಟ?
ಈ ಎಲ್ಲ ಬೆಳವಣಿಗಳ ಹಿನ್ನೆಲೆಯಲ್ಲಿ ಹೊಸದಾಗಿ ಮೀಸಲಾತಿ ನಿಗದಿಪಡಿಸಬೇಕೇ ಬೇಡ ಎಂಬ ತೀರ್ಮಾನಕ್ಕೆ ಬರಲು ಆಯೋಗದ ನಿಲುವು ಮುಖ್ಯವಾಗಿದೆ. ಅದರ ನಂತರವಷ್ಟೇ ಅರ್ಹ ಹಿಂದುಳಿದ ವರ್ಗಗಳಿಗೆ ನ್ಯಾಯ ಸಮ್ಮತ ಮೀಸಲಾತಿ ಒದಗಿಸಲು ಸಾಧ್ಯವಾಗಲಿದೆ. ಬಿಬಿಎಂಪಿ ಚುನಾವಣೆ ನಡೆಸಲು ಹೈಕೋರ್ಟ್ ನೀಡಿರುವ ಆದೇಶವನ್ನು ಪಾಲಿಸಲು 2022ರ ನ.30ರಿಂದ ಅನ್ವಯವಾಗುವಂತೆ ಮುಂದಿನ ಮೂರು ತಿಂಗಳಿಗೆ ವಿಸ್ತರಿ ಸಬೇಕು ಎಂದು ಕೋರಿರುವ ಸರ್ಕಾರ, ಈ ಪ್ರಮಾಣ ಪತ್ರವನ್ನು ಮಾನ್ಯ ಮಾಡಿದರೆ ಯಾರಿಗೂ ತೊಂದರೆ ಉಂಟಾಗುವುದಿಲ್ಲ ಎಂದು ತಿಳಿಸಿದೆ. ಈ ಪ್ರಮಾಣ ಪತ್ರ ಆಧರಿಸಿ ನ್ಯಾಯಾಲಯ ವಿಚಾರಣೆ ನಡೆಸಬೇಕಿದೆ.
ಮುಂದೂಡಿಕೆ ಮನವಿಗೆ ಕಾರಣವೇನು ?
ಹಿಂದುಳಿದ ವರ್ಗಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ನ್ಯಾ. ಭಕ್ತವತ್ಸಲ ಆಯೋಗ ಸಮಿತಿ ವರದಿ ಸಲ್ಲಿಸಿತ್ತು. ಆದರೆ, ಹೈಕೋರ್ಟ್ ನಿರ್ದೇಶನಗಳ ಆಧಾರದಲ್ಲಿ ವರದಿಯನ್ನು ಪುನರ್ ಪರಿಶೀಲಿಸಿ ಪರಿಷ್ಕೃತ ವರದಿ ಸಲ್ಲಿಸಲು ನ್ಯಾ. ಭಕ್ತವತ್ಸಲ ಆಯೋಗಕ್ಕೆ ಕೋರಲಾಗಿತ್ತು. ಅದರಂತೆ, ಅ.31ಕ್ಕೆ ಪೂರಕ ವರದಿ ಸಲ್ಲಿಸಿರುವ ಆಯೋಗ, ಈ ಹಿಂದೆ ಸಲ್ಲಿಸಿದ್ದ ವರದಿ ಕಾನೂನು ಬದ್ಧವಾಗಿದೆ. ಯಾವುದೇ ಬದಲಾವಣೆಯ ಅವಶ್ಯಕತೆ ಇಲ್ಲ ಎಂದು ಹೇಳಿದೆ ಎಂದು ಪ್ರಮಾಣ ಪತ್ರದಲ್ಲಿ ವಿವರಿಸಲಾಗಿದೆ.