Asianet Suvarna News Asianet Suvarna News

Hubballi| ಕನ್ನಡಪ್ರಭ ಚಿತ್ರಕಲಾ ಸ್ಪರ್ಧೆಗೆ ಭರ್ಜರಿ ಸ್ಪಂದನೆ

*   ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ 2500 ಮಕ್ಕಳಿಂದ ಪ್ರತಿಭೆ ಅನಾವರಣ
*  ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಚಾಲನೆ
*  ಮಕ್ಕಳನ್ನು ಹುರಿದುಂಬಿಸಿದ ಚಿತ್ರನಟಿ ಮೇಘನಾ ಗಾಂವ್ಕರ್‌
 

Good Response to Kannada Prabha Painting Competition in Hubballi grg
Author
Bengaluru, First Published Nov 14, 2021, 6:39 AM IST

ಹುಬ್ಬಳ್ಳಿ(ನ.14):  ಮಕ್ಕಳ ದಿನಾಚರಣೆ(Children's Day) ಮುನ್ನಾ ದಿನ ಶನಿವಾರ ಹುಬ್ಬಳ್ಳಿಯ(Hubballi) ಇಂದಿರಾ ಗಾಜಿನ ಮನೆಯ(Indira Glass House)ಆವರಣದಲ್ಲಿ ಚಿಣ್ಣರ ಕಲರವ. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮಕ್ಕಳು(Children) ಬಿಳಿಯ ಹಾಳೆಯ ಮೇಲೆ ವೈವಿಧ್ಯಮಯ ಚಿತ್ತಾರಗಳನ್ನು ಮೂಡಿಸುತ್ತಾ, ಆ ಮೂಲಕ ತಮ್ಮ ಚಿತ್ರಕಲೆಯನ್ನು ಅಭಿವ್ಯಕ್ತಿಗೊಳಿಸಿ ಸಂಭ್ರಮಿಸಿದರು.

ಕನ್ನಡಪ್ರಭ(Kannada Prabha) ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌(Aisanet Suvarna News) ಮಕ್ಕಳಿಗಾಗಿ ಒದಗಿಸಿದ ಈ ಚಿತ್ರಕಲಾ ಸ್ಪರ್ಧೆಯ ವೇದಿಕೆಗೆ ಅದ್ಭುತ ಸ್ಪಂದನೆ ದೊರೆಯಿತು. ಹುಬ್ಬಳ್ಳಿ-ಧಾರವಾಡ(Hubballi-Dharwad) ಮಾತ್ರವಲ್ಲದೇ ಇಡೀ ಜಿಲ್ಲೆಯಿಂದ ಎರಡೂವರೆ ಸಾವಿರ ಶಾಲಾ ಮಕ್ಕಳು ಏಕಕಾಲಕ್ಕೆ ತಮ್ಮ ಮನದಲ್ಲಿ ಮೂಡಿದ ರೇಖಾಚಿತ್ರಗಳನ್ನು ಬಿಡಿಸುವ ಮೂಲಕ ಕಲಾ ಪ್ರದರ್ಶನ ಮಾಡಿದರು. ಎರಡು ವರ್ಷಗಳ ಕಾಲ ನಮ್ಮನ್ನೆಲ್ಲ ಕಾಡಿದ ಕೊರೋನಾ ವೈರಸ್‌ನ(Coronavirus) ದುಷ್ಪರಿಣಾಮಗಳ ಬಗ್ಗೆ 8ನೇ ತರಗತಿ ಮಕ್ಕಳು ಚಿತ್ರಗಳನ್ನು ಬಿಡಿಸಿದರೆ, ಮಕ್ಕಳಿಗೆ ಪರಿಸರದ ಜಾಗೃತಿ(Environmental Awareness) ಮೂಡಿಸುವ ಹಿನ್ನೆಲೆಯಲ್ಲಿ ತಾಪಮಾನ ಏರಿಕೆ ಪರಿಣಾಮ ವಿಷಯವನ್ನು 9ನೇ ತರಗತಿ ಮಕ್ಕಳಿಗೆ ನೀಡಲಾಗಿತ್ತು. ಇನ್ನು, ಪ್ಲಾಸ್ಟಿಕ್‌ಮುಕ್ತ ಮಾಡಲು ಪರ್ಯಾಯವಾಗಿ ನಡೆಸಬೇಕಾದ ಹೊಸ ಚಿಂತನೆ ಬಗ್ಗೆ 10ನೇ ತರಗತಿ ಮಕ್ಕಳು ಚಿತ್ರ ಬಿಡಿಸಿದರು.

Bitcoin Scam| ಕಾಂಗ್ರೆಸ್‌ ಬಳಿ ದಾಖಲೆಯಿದ್ದರೆ ಬಿಡುಗಡೆ ಮಾಡಲಿ: ಜಗದೀಶ ಶೆಟ್ಟರ್‌

ಉತ್ಸಾಹ ತೋರಿದ ಮಕ್ಕಳು:

ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣನ್ಯೂಸ್‌ ಮಕ್ಕಳಲ್ಲಿ ಹುದುಗಿರುವ ಚಿತ್ರಕಲಾ(Painting) ಪ್ರತಿಭೆಯನ್ನು ಹೊರ ತರಲು 2018ರಿಂದ ಪ್ರತಿ ವರ್ಷ ಮಾದರಿಯಾಗಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸುತ್ತಿದೆ. ಕಳೆದ ವರ್ಷ ಕೋವಿಡ್‌ ಕಾರಣದಿಂದ ಆಯೋಜನೆ ಮಾಡಲಾಗಿರಲಿಲ್ಲ. ಈ ಕಾರಣದಿಂದ ಕಳೆದ ಬಾರಿಗಿಂತಲೂ ಈ ಬಾರಿ ಮಕ್ಕಳ ಸಂಖ್ಯೆ, ಉತ್ಸಾಹ ತುಸು ಹೆಚ್ಚಾಗಿಯೇ ಇತ್ತು.

ಬೆಳಗಿನ 9ಕ್ಕೆ ಈ ಮೊದಲೇ ನೋಂದಣಿ ಮಾಡಿದ ಶಾಲಾ ಮಕ್ಕಳು ಇಂದಿರಾ ಗಾಜಿನ ಮನೆಗೆ ಆಗಮಿಸಿ ಸ್ಪರ್ಧೆಯ(Competition) ಬಗೆಗಿನ ಉತ್ಸಾಹ ತೋರಿದರು. ಮಕ್ಕಳೊಂದಿಗೆ ಶಿಕ್ಷಕರು ಹಾಗೂ ಪಾಲಕರು ಸಹ ಜತೆಗೂಡಿ ಮಕ್ಕಳಿಗೆ ಪ್ರೋತ್ಸಾಹ ತುಂಬಿದರು. ಚಿತ್ರಕಲಾ ವಿಷಯವನ್ನು ಸ್ಥಳದಲ್ಲಿಯೇ ಘೋಷಣೆ ಮಾಡಿದರೂ ಚಿತ್ರ ಬಿಡಿಸಲು ಎರಡು ಗಂಟೆಗಳ ಕಾಲ ಅವಕಾಶ ನೀಡಲಾಗಿತ್ತು. ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಮಕ್ಕಳು ಅತ್ಯುತ್ಸಾಹದಿಂದ ಚಿತ್ರಗಳನ್ನು ಬಿಡಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಚಿತ್ರ ಬಿಡಿಸಲು ಪೂರಕವಾದ ಬಿಳಿ ಹಾಳೆ, ಸ್ಕೆಚ್‌ ಪೆನ್‌, ಪೆನ್ಸಿಲ್‌, ರಬ್ಬರ್‌ನಂತಹ ವಸ್ತುಗಳನ್ನು ಒದಗಿಸಿದ್ದಲ್ಲದೇ, ನಂದಿನಿ ಉತ್ಪನ್ನಗಳಾದ ಕುಕ್ಕೀಸ್‌ ಮತ್ತು ಲಸ್ಸಿ ವಿತರಿಸಲಾಯಿತು. ಸ್ಪರ್ಧೆಯ ಆನಂತರ ಭಾಗವಹಿಸಿದ ಎಲ್ಲ ಮಕ್ಕಳಿಗೆ, ಶಿಕ್ಷಕರಿಗೆ ಮತ್ತು ಪಾಲಕರಿಗೆ ಉಪಾಹಾರದ ವ್ಯವಸ್ಥೆ ಸಹ ಮಾಡಲಾಗಿತ್ತು.

ಸೈಕಲ್‌ ಬಹುಮಾನ:

ಸ್ಪರ್ಧೆಯಲ್ಲಿ ಅದ್ಭುತವಾಗಿ ಚಿತ್ರ ಬರೆದು ಮೊದಲ ಬಹುಮಾನ ಪಡೆದ ಮೂರೂ ತರಗತಿ ಮಕ್ಕಳಿಗೆ ಸೈಕಲ್‌(Cycle), ನಗದು ಬಹುಮಾನ ಹಾಗೂ ಆಕರ್ಷಕ ಬಹುಮಾನಗಳನ್ನು ನೀಡಲಾಯಿತು. ದ್ವಿತೀಯ ಸ್ಥಾನ ಪಡೆದ ಮೂವರಿಗೆ, ತೃತೀಯ ಸ್ಥಾನ ಪಡೆದ ಮೂವರು ಮಕ್ಕಳಿಗೆ ನಗದು ಹಾಗೂ ಆಕರ್ಷಕ ಬಹುಮಾನಗಳನ್ನು ನೀಡಲಾಯಿತು. ಅದೇ ರೀತಿ ಮೂವರು ಮಕ್ಕಳಿಗೆ ಸಮಾಧಾನಕರ ಬಹುಮಾನ ನೀಡಿ ಮಕ್ಕಳ ಚಿತ್ರಕಲೆಗೆ ನೀರೆರೆದು ಪೋಷಿಸುವ ಕಾರ್ಯ ಮಾಡಲಾಯಿತು. ಇದರೊಂದಿಗೆ ಮಕ್ಕಳೊಂದಿಗೆ ಆಗಮಿಸಿದ ಕೆಲವು ಶಿಕ್ಷಕರು(Teachers) ಹಾಗೂ ಪಾಲಕರಿಗೂ ಆಕರ್ಷಕ ಬಹುಮಾನ ವಿತರಿಸಲಾಯಿತು.

ಹುಬ್ಬಳ್ಳಿಯಲ್ಲಿ ಗಮನ ಸೆಳೆದ ಚಿತ್ರಕಲಾ ಸ್ಪರ್ಧೆ: ಕುಣಿದು ಕುಪ್ಪಳಿಸಿದ ನಟಿ ಹರ್ಷಿಕಾ

ಹುರುಪು ನೀಡಿದ ಮೇಘನಾ:

ಸ್ಪರ್ಧೆಯನ್ನು ಮತ್ತಷ್ಟುಹುರುಪುಗೊಳಿಸಲು ಆಗಮಿಸಿದ್ದ ಚಿತ್ರನಟಿ ಮೇಘನಾ ಗಾಂವಕರ(Meghana Gaonkar) ಮಕ್ಕಳಿಗೆ ಆಲ್‌ ದಿ ಬೆಸ್ಟ್‌ ಹೇಳಿದ್ದಲ್ಲದೆ, ಅವರನ್ನು ಮುತ್ತಿಕ್ಕಿದ ಮಕ್ಕಳಿಗೆ ಆಟೋಗ್ರಾಫ್‌(Autograph) ನೀಡಿದರು. ಮಕ್ಕಳ ಕೈ ಕುಲುಕಿ, ಅವರ ಒತ್ತಾಯಕ್ಕೆ ಮಣಿದು ಸೆಲ್ಫಿ ಸಹ ತೆಗೆಸಿಕೊಂಡು ಅವರ ಖುಷಿಯಲ್ಲಿ ತಾವೂ ಭಾಗಿಯಾದರು. ಇನ್ನು, ಚಿತ್ರಕಲಾ ಸ್ಪರ್ಧೆಗೆ ಸಕ್ಕರೆ, ಜವಳಿ ಹಾಗೂ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಚಿತ್ರ ಬಿಡಿಸುವ ಮೂಲಕ ಚಾಲನೆ ನೀಡಿದರು. ಮಕ್ಕಳ ಪ್ರತಿಭೆ ಹೊರತರುವ ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣನ್ಯೂಸ್‌ ಕಾರ್ಯ ಮತ್ತೊಬ್ಬರಿಗೆ ಮಾದರಿ ಎಂದರು.

ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ಭಾಗವಹಿಸಿ, ಸುದ್ದಿ ಬಿತ್ತರಿಸುವ ಕಾರ್ಯದ ಜತೆಗೆ ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಈ ರೀತಿ ಮಕ್ಕಳ ಕಲೆಗೆ ಪ್ರೋತ್ಸಾಹ ನೀಡುವ ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ(Basavaraj Horatti), ಮಕ್ಕಳ ಕಲೆ ಪ್ರೋತ್ಸಾಹಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಸಮಾರಂಭಕ್ಕೆ ಪ್ರಾಯೋಜನೆ ನೀಡಿದ ಸ್ವರ್ಣಾ ಗ್ರೂಪ್‌ ಆಫ್‌ ಕಂಪನೀಸ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಸಿ.ಎಚ್‌.ವಿ.ಎಸ್‌.ವಿ.ಪ್ರಸಾದ, ಮಜೇಥಿಯಾ ಫೌಂಡೇಶನ್‌ ಅಧ್ಯಕ್ಷರಾದ ನಂದಿನಿ ಕಶ್ಯಪ ಮಜೇಥಿಯಾ, ಧಾರವಾಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಎಂ.ಲೋಹಿತೇಶ್ವರ, ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಸುಧೀಂದ್ರ ದೇಶಪಾಂಡೆ, ಶಿಕ್ಷಣ ತಜ್ಞ ವಿನಾಯಕ ಜೋಶಿ, ಕನ್ನಡಪ್ರಭ ವಿಶೇಷ ಯೋಜನೆ ಸಂಪಾದಕ ಬಿ.ವಿ. ಮಲ್ಲಿಕಾರ್ಜುನಯ್ಯ, ಪುರವಣಿ ಸಂಪಾದಕ ಜೋಗಿ (ಗಿರೀಶ್‌ರಾವ್‌ ಹತ್ವಾರ್‌), ಪ್ರಸರಣ ವಿಭಾಗದ ಮುಖ್ಯಸ್ಥ ಎ.ಎನ್‌. ಅನಂತಮೂರ್ತಿ ಇದ್ದರು. ಹುಬ್ಬಳ್ಳಿ ಆವೃತ್ತಿ ಮುಖ್ಯಸ್ಥ ಮಲ್ಲಿಕಾರ್ಜುನ ಸಿದ್ದಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.
 

Follow Us:
Download App:
  • android
  • ios