ಸೋಮರಡ್ಡಿ ಅಳವಂಡಿ

ಕೊಪ್ಪಳ(ಏ.30): ಕೊರೋನಾ ಮಹಾಮಾರಿಯಿಂದ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ದರ ನೆಲಕಚ್ಚಿದೆ. ಅರ್ಧಕ್ಕೆ ಅರ್ಧ ದರ ಕುಸಿದಿದ್ದರೂ ಕೊಳ್ಳುವವರೇ ಇಲ್ಲ. ಆದರೂ ಹಣ್ಣಿನ ರಾಜಾ ಮಾವಿಗೆ ಮಾತ್ರ ಬರೋಬ್ಬರಿ ದರವಿದೆ. ಅದರಲ್ಲೂ ಸೇಬು ಹಣ್ಣಿನ ದರದಲ್ಲಿ ಮಾವು ಮಾರಾಟವಾಗುತ್ತಿದೆ.

ಸಾಮಾನ್ಯವಾಗಿ 40-50ಗೆ ಕೆಜಿ ಇರುತ್ತಿದ್ದ  ಆಪೂಸು, ಪೈರಿ ಸೇರಿದಂತೆ ವಿವಿಧ ತಳಿಯ ಮಾವೂ ಇಂಥ ಲಾಕ್‌ಡೌನ್‌ ನಡುವೆಯೂ 80-100 ಗೆ ಕೆಜಿ ಮಾರಾಟವಾಗುತ್ತಿದೆ. ಮಾರುಕಟ್ಟೆಯಲ್ಲಿ ಮಾವಿನ ಹಣ್ಣನ್ನು ಕೊಳ್ಳಲು ಜನ ಮುಗಿ ಬೀಳುತ್ತಿದ್ದಾರೆ.

ಲಾಕ್‌ಡೌನ್‌ ಎಫೆಕ್ಟ್‌: ಸಂಕಷ್ಟದಲ್ಲಿರುವ ಅರ್ಚಕರಿಗೆ ಸರ್ಕಾರದಿಂದ ಕಿಟ್‌ ವಿತರಣೆ

ಲಾಕ್‌ಡೌನ್‌ ಇದ್ದರೂ ತೋಟಗಾರಿಕಾ ಇಲಾಖೆಯೇ ಅಲ್ಲಲ್ಲಿ ಮಾವು ಸೇರಿದಂತೆ ತರಕಾರಿಗಳನ್ನು ಮಾರಾಟ ಮಾಡುವುದಕ್ಕೆ ಅವಕಾಶ ನೀಡಿದೆ. ರೈತರು ತಾವೇ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಹೀಗೆ ಮಾರಾಟ ಮಾಡುತ್ತಿರುವ ರೈತರು ಹಾಗೂ ವ್ಯಾಪಾರಸ್ಥರು ಮಾವು ಕೆಜಿಗೆ . 80-100ಗೆ ಮಾರಾಟ ಮಾಡುತ್ತಿದ್ದಾರೆ. ಇಷ್ಟಾದರೂ ಗ್ರಾಹಕರು ಅತ್ಯಂತ ಖುಷಿಯಿಂದಲೇ ಖರೀದಿ ಮಾಡಿಕೊಂಡು ಹೋಗುತ್ತಿದ್ದಾರೆ.

ಇಳುವರಿ ಕುಸಿತ:

ಪ್ರತಿ ಮೂರು ವರ್ಷಕ್ಕೊಮ್ಮೆ ಮಾವು ಗೈರಿ ಸೀಜನ್‌ ಇರುತ್ತದೆ. ಹೀಗಾಗಿ ಉತ್ಪಾದನೆಯಲ್ಲಿಯೂ ಭಾರಿ ಇಳಿಕೆಯಾಗಿದೆ. ಪ್ರತಿ ವರ್ಷ ಬರುವ ಉತ್ಪಾದನೆಯ ಶೇ. 30 ರಷ್ಟು ಮಾತ್ರ ಉತ್ಪಾದನೆ ಬರುತ್ತದೆ. ಹೀಗಾಗಿ, ಈ ಸೀಜನ್‌ನಲ್ಲಿ ಪ್ರತಿ ವರ್ಷವೂ ದರ ಇದ್ದೇ ಇರುತ್ತದೆ. ಆದರೆ, ಈ ವರ್ಷ ಲಾಕ್‌ಡೌನ್‌ ಆಗಿರುವುದರಿಂದ ದರ ಅಷ್ಟಕಷ್ಟೇ ಎನ್ನುವಾಗಲೂ ಮಾವು ಉತ್ತಮ ದರಕ್ಕೆ ಮಾರಾಟವಾಗುತ್ತಿದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ವಿಶ್ಲೇಷಣೆ ಮಾಡುತ್ತಾರೆ.

ಅದರಲ್ಲೂ ಈ ವರ್ಷ ಮಾವು ರಫ್ತು ಇಲ್ಲ. ವಿಮಾನ ಹಾರಾಟ ಇಲ್ಲದಿರುವುದರಿಂದ ವಿದೇಶಕ್ಕೆ ರಫ್ತಾಗುತ್ತಿರುವುದು ಬಂದ್‌ ಆಗಿದೆ. ಇದನ್ನು ಮೀರಿಯೂ ಸ್ಥಳೀಯ ಮಾರುಕಟ್ಟೆಯಲ್ಲಿ ಮಾವು ಅತ್ಯುತ್ತಮ ದರದಲ್ಲಿ ಮಾರಾಟವಾಗುತ್ತಿದೆ.

ಪೂರ್ಣ ಸೀಜನ್‌ ಪ್ರಾರಂಭವಾಗಿಲ್ಲ:

ಮಾವು ಸೀಜನ್‌ ಇನ್ನು ಪೂರ್ಣ ಪ್ರಾರಂಭವಾಗಿಲ್ಲ. ಮಾರುಕಟ್ಟೆಗೆ ಬರಬೇಕಾದಷ್ಟುಮಾವು ಇನ್ನೂ ಬಂದಿಲ್ಲ. ಜಿಲ್ಲೆಯಲ್ಲಿ ಸುಮಾರು 2500 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಇದೆ. ಇನ್ನೇರಡು ವಾರದಲ್ಲಿ ಸಂಪೂರ್ಣ ಸೀಜನ್‌ ಪ್ರಾರಂಭವಾಗುತ್ತದೆ.

ಈಗಂತೂ ಉತ್ತಮ ವ್ಯಾಪಾರವಾಗುತ್ತಿದೆ. ಆದರೆ, ನಮಗೆ ಮಾರಾಟ ಮಾಡುವುದಕ್ಕೆ ದಿನಪೂರ್ತಿ ಅವಕಾಶ ಇಲ್ಲದಂತಾಗಿದೆ. ಮಧ್ಯಾಹ್ನಕ್ಕೆ ಬಂದ್‌ ಮಾಡಬೇಕಾಗಿದೆ. ನೂರು ರುಪಾಯಿಗೆ ಕೆಜಿ ಮಾರಾಟ ಮಾಡುತ್ತಿದ್ದೇವೆ ಎಂದು ಮಾವು ವ್ಯಾಪಾರಿ ಮೈನುಸಾಬ ಹೇಳಿದ್ದಾರೆ.