'ಭೂಮಿ ಸ್ವಯಂ ಪರಿವರ್ತನೆ' ತಂತ್ರಾಂಶವನ್ನು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಮಾಸ್ಟರ್ ಪ್ಲಾನ್ ವ್ಯಾಪ್ತಿಯಲ್ಲಿನ ಲಕ್ಷಾಂತರ 'ಬಿ' ಖಾತಾ ನಿವೇಶನಗಳನ್ನು 'ಎ' ಖಾತಾಗೆ ಸುಲಭವಾಗಿ ಪರಿವರ್ತಿಸಲು ಅವಕಾಶ ಕಲ್ಪಿಸಲಾಗಿದ್ದು, ಇದು ಸಮಯ, ವೆಚ್ಚ ಮತ್ತು ಭ್ರಷ್ಟಾಚಾರವನ್ನು ಕಡಿಮೆ ಮಾಡಲಿದೆ.

ಬೆಂಗಳೂರು: ಮಾಸ್ಟರ್ ಪ್ಲಾನ್(ಸಿಡಿಪಿ) ಪ್ರದೇಶದಲ್ಲಿ ಭೂಮಿಯನ್ನು ಸ್ವಯಂ ಪರಿವರ್ತನೆ ಮಾಡುವ ಅಗತ್ಯವಿಲ್ಲ. ನೇರವಾಗಿ ಯೋಜನೆಗೆ ಅನುಮೋದನೆ ಪಡೆಯಬಹುದು. ಯೋಜನಾ ಅನುಮೋದನೆಯ ಭಾಗವಾಗಿ ಪರಿವರ್ತನೆ ಮಾಡಲಾಗುತ್ತದೆ. ಅಲ್ಲದೆ, ಮಾಸ್ಟರ್ ಪ್ಲಾನ್ ಪ್ರಕಾರ, ಲಕ್ಷಾಂತರ ಜಿಬಿಎ ‘ಬಿ’ ಖಾತಾ ಸೈಟ್ ಮಾಲೀಕರಿಗೆ ಪ್ರಯೋಜನವಾಗುವಂತೆ ‘ಬಿ’ ಖಾತಾದಿಂದ ‘ಎ’ ಖಾತಾಗೆ ಪರಿವರ್ತನೆ ಸಕ್ರಿಯಗೊಳಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಶನಿವಾರ ವಿಕಾಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಬಿಎ ವ್ಯಾಪ್ತಿಯ ‘ಭೂಮಿ ಸ್ವಯಂ ಪರಿವರ್ತನೆ’ ನೂತನ ತಂತ್ರಾಂಶವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಭೂಮಿ ಸ್ವಯಂ ಪರಿವರ್ತನೆ ತಂತ್ರಾಂಶ ಬಿಡುಗಡೆ ಬಳಿಕ ಸಚಿವರ ಮಾಹಿತಿ

ಈವರೆಗೆ, ಮಾಸ್ಟರ್ ಪ್ಲಾನ್ ಒಳಗೆ ಬರುವ ಪ್ರದೇಶಗಳಲ್ಲಿಯೂ ಭೂಮಿಯನ್ನು ಪರಿವರ್ತಿಸಬೇಕಿತ್ತು. ‘ಡೀಮ್ಡ್ ಕನ್ವರ್ಷನ್’ ಹೊರತಾಗಿಯೂ ಈ ಪ್ರಕ್ರಿಯೆಗೆ ಕನಿಷ್ಠ 4 ರಿಂದ 6 ತಿಂಗಳು ತೆಗೆದುಕೊಳ್ಳುತ್ತಿತ್ತು. ಮಧ್ಯವರ್ತಿಗಳು ಡೆವಲಪರ್‌ಗಳನ್ನು ಶೋಷಿಸಲು ಅವಕಾಶವಿತ್ತು. ವಿಳಂಬ, ಕಿರುಕುಳ, ಭ್ರಷ್ಟಾಚಾರ ಮತ್ತು ವೆಚ್ಚ ಹೆಚ್ಚಳವು ಅಂತಿಮವಾಗಿ ಸೈಟ್‌ ಖರೀದಿದಾರರಿಗೆ ಹೊರೆಯಾಗುತ್ತಿತ್ತು. ಇದು ಸರ್ಕಾರ ಮತ್ತು ಕಂದಾಯ ಇಲಾಖೆಯ ಅಪಖ್ಯಾತಿಗೆ ಕಾರಣವಾಗಿತ್ತು ಎಂದು ವಿಷಾದಿಸಿದರು.

ನಿವೇಶನ ಖರೀದಿಗೆ ಸಹಕಾರಿ

ಪ್ರಸ್ತುತ ಜಿಬಿಎ ವ್ಯಾಪ್ತಿಯಲ್ಲಿ ಸ್ವಯಂ ಪರಿವರ್ತನೆಯನ್ನು ಜಾರಿಗೆ ತರುವುದರೊಂದಿಗೆ ಕಂದಾಯ ಇಲಾಖೆಯು ಮಹತ್ವದ ಹೆಜ್ಜೆ ಇಟ್ಟಿದೆ. ಸಾಮಾನ್ಯ ಜನರಿಗೆ ಕೈಗೆಟಕುವ ದರದಲ್ಲಿ ನಿವೇಶನಗಳನ್ನು ಖರೀದಿಸಲು ಇದು ಸಹಾಯ ಮಾಡುತ್ತದೆ. ಇದರಿಂದಾಗಿ ಭೂ ಅಭಿವೃದ್ಧಿಯ ವೆಚ್ಚ, ಸಮಯ ಕಡಿಮೆಯಾಗುತ್ತದೆ. ಈ ಸುಧಾರಣೆಗಳು ವಸತಿ ಅಭಿವೃದ್ಧಿಗೆ ಮಾತ್ರವಲ್ಲದೆ ಮಾಸ್ಟರ್ ಪ್ಲಾನ್‌ನಲ್ಲಿ ಅನುಮತಿಸಲಾದ ಕೈಗಾರಿಕಾ ಮತ್ತು ಇತರ ಬಳಕೆಗಳಿಗೂ ಲಭ್ಯವಿರಲಿವೆ ಎಂದು ವಿವರಿಸಿದರು.

ಇದನ್ನೂ ಓದಿ: Bengaluru ಬೀದಿ ಸ್ವಚ್ಛತೆಗೆ ಬಂತು ಯಾಂತ್ರಿಕ ಸ್ಪರ್ಶ; ₹10 ಲಕ್ಷ ವೆಚ್ಚದಲ್ಲಿ ವಿವಿಧ ವಸ್ತುಗಳ ಖರೀದಿ

ಆಸ್ತಿ ಮಾಲೀಕತ್ವಕ್ಕೆ ಮತ್ತಷ್ಟು ಬಲ

ಸ್ವಯಂ ಪರಿವರ್ತನೆಯಿಂದ ಹಾಲಿ ಬಿ-ಖಾತಾ ನಿವೇಶನಗಳೂ ಅನುಕೂಲ ಪಡೆಯಲಿವೆ. ಬಿ ಖಾತಾ ಆಸ್ತಿಗಳನ್ನು ಎ ಖಾತಾ ಆಗಿ ಪರಿವರ್ತಿಸಲು ಜಿಬಿಎಯಿಂದ ಈಗ ಕಾನೂನು ಚೌಕಟ್ಟನ್ನು ಸರಳೀಕರಿಸಲಾಗಿದೆ. ಈ ಹಿಂದೆ ಅನಧಿಕೃತ ಸೈಟ್‌ಗಳನ್ನು ಖರೀದಿಸಿದ ಲಕ್ಷಾಂತರ ಆಸ್ತಿ ಮಾಲೀಕರಿಗೆ ಇದು ಸಹಾಯಕವಾಗಲಿದೆ. ಎ-ಖಾತಾ ಪಡೆಯುವುದು ಇಂತಹ ಸೈಟ್‌ಗಳಿಗೆ ಕಾನೂನು ಬಲ ನೀಡುತ್ತದೆ. ಇ ಖಾತಾ ಜೊತೆಗೆ ಎಲ್ಲ ದಾಖಲೆಗಳನ್ನೂ ಇಂಟಿಗ್ರೇಷನ್ ಮಾಡುವ ಮೂಲಕ ಜನರ ಆಸ್ತಿ ಮಾಲೀಕತ್ವಕ್ಕೆ ಮತ್ತಷ್ಟು ಬಲ ತುಂಬಲಾಗಿದೆ. ಸಾಲ ಪಡೆಯಬಹುದು, ಆಸ್ತಿಯ ಮೌಲ್ಯ ಹೆಚ್ಚಾಗುತ್ತದೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ನಗರಾಭಿವೃದ್ದಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ವಿಪತ್ತು ನಿರ್ವಹಣೆ ವಿಭಾಗದ ಪ್ರಧಾನ ಕಾರ್ಯದರ್ಶಿ ಮೌನೀಶ್ ಮುದ್ಗಿಲ್, ಕಂದಾಯ ಇಲಾಖೆ ಆಯುಕ್ತರಾದ ಮೀನಾ ನಾಗರಾಜ್ ಉಪಸ್ಥಿತರಿದ್ದರು.

ಇದನ್ನೂ ಓದಿ: Bengaluru: ಬಯಸಿದಂತೆ ಬಯಲು: ಬೆಂಗಳೂರಿನ ಬರೋಬ್ಬರಿ 194 ಸ್ಥಳಗಳ ಅಭಿವೃದ್ಧಿಗೆ ಮುಂದಾದ GBA