ಬಗರ್ ಹುಕುಂ ಸಾಗುವಳಿದಾರರಿಗೆ ಗುಡ್ ನ್ಯೂಸ್
ಚಾಮುಂಡೇಶ್ವರಿ ಕ್ಷೇತ್ರದ ಇಲವಾಲ ಹೋಬಳಿ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದ 105 ಮಂದಿ ಫಲಾನುಭವಿಗಳಿಗೆ ಬಗರ್ ಹುಕುಂ ಸಾಗುವಳಿ ಪತ್ರವನ್ನು ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ವಿತರಿಸಿದರು.
ಮೈಸೂರು : ಚಾಮುಂಡೇಶ್ವರಿ ಕ್ಷೇತ್ರದ ಇಲವಾಲ ಹೋಬಳಿ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದ 105 ಮಂದಿ ಫಲಾನುಭವಿಗಳಿಗೆ ಬಗರ್ ಹುಕುಂ ಸಾಗುವಳಿ ಪತ್ರವನ್ನು ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ವಿತರಿಸಿದರು.
ಮಿನಿ ವಿಧಾನಸೌಧದ ಎದುರು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಸಾಗುವಳಿ ಪತ್ರ ವಿತರಿಸಿದರು.
ಕಳೆದ ಮೂರು ದಶಕಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದರೂ ಬಗರ್ ಹುಕುಂ ಸಾಗುವಳಿ ಪತ್ರ ನೀಡಿರಲಿಲ್ಲ. ಹೀಗಾಗಿ, ಶಾಸಕ ಜಿ.ಟಿ. ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರತಿಯೊಬ್ಬರ ದಾಖಲೆಯನ್ನು ಪರಿಶೀಲಿಸಿ ಕಳೆದ ನವೆಂಬರ್ ತಿಂಗಳಲ್ಲಿ ಪಟ್ಟಿ ಅಂತಿಮಗೊಳಿಸಲಾಗಿತ್ತು. ಅದರಂತೆ, ಗುರುವಾರ 105 ಮಂದಿ ಫಲಾನುಭವಿಗಳಿಗೆ 160 ಎಕರೆ ಪ್ರದೇಶವನ್ನು ಮಂಜೂರು ಮಾಡಿ ಸಾಗುವಳಿ ಪತ್ರ ನೀಡಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, 1970ರಲ್ಲಿ ಇಂದಿರಾಗಾಂಧಿ ಅವರು ದರಖಾಸ್ತು ಭೂಮಿ ಮಂಜೂರು ಕಾಯ್ದೆಯನ್ನು ಜಾರಿಗೆ ತಂದಿದ್ದರು. ಆದರೆ, ಕರ್ನಾಟಕದಲ್ಲಿ ಡಿ. ದೇವರಾಜ ಅರಸು ಅವರು ಉಳುವವನೇ ಭೂಮಿ ಒಡೆಯ ಎನ್ನುವ ಕಾನೂನು ತಂದಿದ್ದರಿಂದಾಗಿ ಲಕ್ಷಾಂತರ ಜನರು ಭೂ ಒಡೆಯರಾದರು. ಭೂಮಿ ನಂಬಿದ್ದ ದಲಿತರು, ಬಡವರು, ಹಿಂದುಳಿದ ವರ್ಗಗಳ ಜನರಿಗೆ ಅನುಕೂಲವಾಯಿತು ಎಂದರು.
ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸರ್ವೆ ನಡೆಸಲಾಗುತ್ತಿದೆ. ಅರಣ್ಯ ಭೂಮಿ ಒತ್ತುವರಿ ಮಾಡಿ ಅದಕ್ಕೆ ಕಂದಾಯ ಭೂಮಿಯನ್ನು ಬಿಟ್ಟುಕೊಡಬೇಕು. ಕಂದಾಯ ಭೂಮಿಯಲ್ಲಿ ಪ.ಜಾತಿ, ಪ. ಪಂಗಡಕ್ಕೆ ಶೇ. 50ರಷ್ಟು ಮತ್ತು ಇತರೆ ಜನರಿಗೆ ಶೇ. 50ರಷ್ಟು ಭೂಮಿಯನ್ನುಮಂಜೂರು ಮಾಡಬೇಕು. ಸಾರ್ವಜನಿಕ ಉದ್ದೇಶಕ್ಕೆ ಮೀಸಲಾಗಿರುವ ಖರಾಬು-ಬಿ ಭೂಮಿಯನ್ನು ಹೊರತುಪಡಿಸಿ ಉಳಿದ ದರಖಾಸ್ತು ಭೂಮಿ ಕೊಡಲಾಗುವುದು ಎಂದು ಹೇಳಿದರು.
ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಭೂಮಿ ಉಳುಮೆ ಮಾಡಿಕೊಂಡು ಬಂದಿದ್ದರೂ ಸಾಗುವಳಿ ಪತ್ರ ಸಿಕ್ಕಿರಲಿಲ್ಲ. ಅರ್ಹರಿಗೆ ಸಿಗುವಂತೆ ಮಾಡಲು ಗ್ರಾಮ ಲೆಕ್ಕಾಧಿಕಾರಿ, ರಾಜಸ್ವ ನಿರೀಕ್ಷಕರು ಮತ್ತು ತಹಸೀಲ್ದಾರ್ ಅವರಿಂದ ಸರ್ವೆ ನಡೆಸಿ ಗುರುತುಪಡಿಸಲಾಗಿತ್ತು. ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಪ್ರಯತ್ನ ನಡೆಸಿದ್ದರಿಂದ 105 ಮಂದಿ ಫಲಾನುಭವಿಗಳನ್ನು ಅಂತಿಮಗೊಳಿಸಲಾಗಿದೆ ಎಂದರು. ತಹಸೀಲ್ದಾರ್ ಗಿರೀಶ್, ಎಡಿಎಲ್ಆರ್ ಚಿಕ್ಕಣ್ಣ ಇದ್ದರು.