ಬೆಳಗಾವಿ(ಡಿ.11): ಗೋಕಾಕ್‌ನಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಆರೋಪಿಸಿರುವ ಶಾಸಕ ಸತೀಶ ಜಾರಕಿಹೊಳಿ ಅವರ ಮಾತಿನಲ್ಲಿ ಸತ್ಯವಿಲ್ಲ. ಮುಂಬರುವ ದಿನದಲ್ಲಿ ಶೀಘ್ರದಲ್ಲೇ ಬೆಳಗಾವಿ ಜಿಪಂ ಮೇಲೆ ಬಿಜೆಪಿ ಬಾವುಟ ಹಾರಿಸಲಾಗುವುದು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಬಗ್ಗೆ ನಮಗಿಂತ ಹೆಚ್ಚು ಸಿಎಂ ಯಡಿಯೂರಪ್ಪ ವಿಚಾರ ಮಾಡುತ್ತಿದ್ದಾರೆ. ಅವರೇ ಪದೇ ಪದೆ ಮಾಧ್ಯಮದಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಯಾವುದೇ ಆತಂಕ ನಮ್ಮಲ್ಲಿಲ್ಲ. ಸಚಿವ ಸಂಪುಟ ವಿಸ್ತರಣೆ ಹೈಕಮಾಂಡ್‌ ಹಾಗೂ ಸಿಎಂ ಯಡಿಯೂರಪ್ಪ ಅವರ ತೀರ್ಮಾನಕ್ಕೆ ಬಿಟ್ಟದ್ದು. ನಮಗೆ ಸಚಿವರಾಗಿ ಮಾಡುತ್ತಾರೋ ಇಲ್ಲವೋ ಎಂಬುದು ಗೊತ್ತಿಲ್ಲ ಅದು ಹೈಕಮಾಂಡ್‌ ನಿರ್ಣಯ ಮುಂದೆ ವಿಚಾರ ಮಾಡೋಣ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಲಸಂಪನ್ಮೂಲ ಖಾತೆ ಸಮರ್ಥವಾಗಿ ನಿಭಾಯಿಸುತ್ತೇನೆ. ಜಲಸಂಪನ್ಮೂಲ ಖಾತೆ ಸಿಕ್ಕರೆ ನನ್ನ ನಸೀಬು. ನೀರಾವರಿ ಪಕ್ಷಾತೀತ. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಲಿತ, ಹಿಂದುಳಿದ ಹಾಗೂ ಮುಸ್ಲಿಂ ಮತದಾರರನ್ನು ಬಿಜೆಪಿಗೆ ಸೆಳೆಯಲು ಯತ್ನವನ್ನು ಗೋಕಾಕ್‌ನಲ್ಲಿ ನನ್ನ ವಿರುದ್ಧ ಎತ್ತಿ ಕಟ್ಟಿದ್ದರು. ಗೋಕಾಕ್‌ನಲ್ಲಿ ಮೂರು ಸಮುದಾಯದವರಿಗೆ ಮನವೊಲಿಸಿ ಗೋಕಾಕ್‌ನಲ್ಲಿ ಬಿಜೆಪಿ ಬೆಂಬಲಿಸುವಂತೆ ವಿನಂತಿಸಲಾಗುವುದು ಎಂದರು.

ಸತೀಶ, ಲಖನ್‌ ಗೋಕಾಕ್‌ ನಗರಸಭೆ ಭ್ರಷ್ಟಾಚಾರ ಆರೋಪಕ್ಕೆ ತನಿಖೆಗೆ ಮೊದಲ ಸಭೆಯಲ್ಲಿ ನಿರ್ಣಯಿಸಲಾಗುವುದು. ಶೀಘ್ರವಾಗಿ ಬೆಳಗಾವಿ ಜಿಪಂ ಬಿಜೆಪಿ ತೆಕ್ಕೆಗೆ ಸೇರಲಿದೆ ಎಂದು ಭವಿಷ್ಯ ನುಡಿದರು.
ಎಂಟಿಬಿ ಹಾಗೂ ವಿಶ್ವನಾಥ ಅವರು ತ್ಯಾಗ ಮಾಡಿದ್ದಾರೆ. ಅವರು ಸೋತ ಕಾರಣ ಅವರನ್ನು ಕೈ ಬಿಡಲು ಸಾಧ್ಯವಿಲ್ಲ. ಹೈಕಮಾಂಡ್‌ಗೆ ಮನವರಿಕೆ ಮಾಡಿ, ಅವರಿಗೂ ಸೂಕ್ತ ಸ್ಥಾನ ನೀಡುವಂತೆ ವಿನಂತಿಸಲಾಗುವುದು ಎಂದರು.
ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಿರುವುದರಲ್ಲಿ ಏನೂ ವಿಶೇಷ ಇಲ್ಲ. ಕಳೆದ ತಿಂಗಳಿನಿಂದ ಎಲ್ಲ ಶಾಸಕರು ಕೂಡಿ ಇದ್ವಿ. ಕಳೆದ ಒಂದು ತಿಂಗಳಿನಿಂದ ನಾವು ಒಂದೇ ಕಡೆ ಊಟ ಮಾಡಿದ್ದೆವು. ಅದರಲ್ಲಿ ವಿಶೇಷತೆ ಏನೂ ಇಲ್ಲ. ನಾವು 17 ಶಾಸಕರು ಸೇರಿ ಊಟ ಮಾಡಲು ಬೆಂಗಳೂರಿನಲ್ಲಿ ಸೇರುತ್ತಿದ್ದೇವೆ ಎಂದರು.