ಗೋಕಾಕ್(ಡಿ.01): ನಾವು ಕೂಡಾ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಅವರ ಅಳಿಯಂದಿರು ಭ್ರಷ್ಟಾಚಾರ, ಗೂಂಡಾಗಿರಿಗೆ ನಾವು ಬೇಸತ್ತು ಹೊರ ಬಂದಿದ್ದೇವೆ. ಜನರಿಗೆ ಮೋಸ ಮಾಡಿ ಗೂಂಡಾಗಿರಿ ಮಾಡಿದ್ದಾರೆ. ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಾಡಿ ಭಯಭೀತಿ ವಾತಾವರಣ ಸೃಷ್ಠಿ ಮಾಡಿದ್ದಾರೆ. ಅದಕ್ಕೆ ನಮಗೆ ಜನರು  ಮತ ಹಾಕಲಿ, ನಾವು ಕ್ಷೇತ್ರವನ್ನು ಭಯಮುಕ್ತ, ಭ್ರಷ್ಟಾಚಾರ ಮುಕ್ತ ವಾತಾವರಣ ಮಾಡ್ತೀವಿ ಅಂತ ಮನವಿ ಮಾಡುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರು ಹೇಳಿದ್ದಾರೆ. 

ಮಾಜಿ ಸಿಎಂ ಕುಮಾರಸ್ವಾಮಿ ಗೋಕಾಕ್ ನಲ್ಲಿರುವ ಗೂಂಡಾಗಳಿಗೆ ಮಣೆ ಹಾಕಬೇಡಿ ಎಂಬ ಹೇಳಿಕೆ ವಿಚಾರ‌ದ ಬಗ್ಗೆ ಭಾನುವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಲಖನ್ ಜಾರಕಿಹೊಳಿ ಅವರು, ಫೋನ್ ನಲ್ಲೇ  ಜನರಿಗೆ ಧಮ್ಕಿ ಕೊಡೋದು, ಜನರನ್ನು ಹೆದರಿಸೋದನ್ನ ನೋಡಿ ಹೊರ ಬಂದಿದ್ದೇವೆ. ಜನರು ನನ್ನ ಗೆಲ್ಲಿಸಿ ಕೊಟ್ಟರೆ ಗೂಂಡಾ ರಾಜ್ಯವನ್ನ ನಾವು ಖತಂ ಮಾಡ್ತೀವಿ ಅಂತ ಭರವಸೆ ಕೊಡ್ತೀನಿ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಿನ್ನೆ ಬಿಜೆಪಿ ಬೆಂಬಲಿಸಲು ಕರೆದ ಲಿಂಗಾಯತ ಸಭೆಯಲ್ಲಿ ನಡೆದ ಗಲಾಟೆ ವಿಚಾರದ ಬಗ್ಗೆ ಮಾತನಾಡಿದ ಅವರು, ಎಲ್ಲ ಸಮುದಾಯದಲ್ಲೂ ಎಲ್ಲಾ ಪಕ್ಷದ ಜನರು ಇರ್ತಾರೆ. ಯಾರು ಯಾರಿಗೆ ಬೇಕಾದ್ರೂ ಮತ ಹಾಕ್ತಾರೆ. ಆದ್ರೆ ಇದಕ್ಕೆ ಮತ ಹಾಕಿ ಅಂತ ಹೇಳೋದು ಸರಿಯಲ್ಲ. ವೀರಶೈವ ಲಿಂಗಾಯತರೆಲ್ಲಾ ಜಾಣರಿದ್ದಾರೆ, ಯಾರಿಗೆ ಮತ ಹಾಕಿದ್ರೆ ಒಳ್ಳೆಯದಾಗುತ್ತೋ ಅವರಿಗೆ ಮತ ಹಾಕ್ತಾರೆ. ನಮಗೆ ಮೊದಲಿನಿಂದಲೂ ಲಿಂಗಾಯತರ ಸಪೋರ್ಟ್ ಇದೆ, ಈಗಲೂ ಮಾಡ್ತಾರೆ ಎಂದು ತಿಳಿಸಿದ್ದಾರೆ. 

ಸಿಎಂ ಯಡಿಯೂರಪ್ಪ ಕೊನೆಯ ಮೂರು ದಿನ ಬೆಳಗಾವಿಯಲ್ಲೆ ಇರಲು ನಿರ್ಧರಿಸಿರುವ ವಿಚಾರದ ಬಗ್ಗೆ ಮಾತನಾಡಿದ ಅವರು, ಗೋಕಾಕ್ ನಲ್ಲಿ ಮಾವ ಅಳಿಯಂದಿರ ದರ್ಬಾರ್ ಹೇಗಿದೆ ನೀವೆ ನೋಡಿ, ಇವರಿಂದ ಮತ್ತೇ ರಾಜ್ಯದ ಮುಖ್ಯಮಂತ್ರಿ ಬಂದು ಪ್ರಚಾರ ಮಾಡೋ ಪರಿಸ್ಥಿತಿ ಬಂದಿದೆ. ಅವರಿಗೆ ಸೋಲಿನ ಭೀತಿ ಕಾಡ್ತಿದೆ, ಆಫೀಸ್ ಸಹ ಬೇರೆ ಮಾಡಿದ್ದಾರೆ. ಹೀಗಾಗಿ ಅಪ್ರಚಾರ ಮಾಡ್ತಾ ಓಡಾಡ್ತಿದ್ದಾರೆ. ಮಾವ ಅಳಿಯಂದಿರಿಗೆ ಸೋಲು ಕಟ್ಟಿಟ್ಟ ಬುತ್ತಿ ಅಂತ ಆದ್ರೆ ಕಾಂಗ್ರೆಸ್ ಮೂಲಕ ನನ್ನ ಗೆಲುವು ನಿಶ್ಚಿತ ಎಂದು ಹೇಳಿದ್ದಾರೆ. 

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಜೆಡಿಎಸ್ ಸರ್ಕಾರ ರಚನೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ನಮ್ಮ ಹೈಕಮಾಂಡ್ ಮತ್ತು ರಾಜ್ಯ ನಾಯಕರಾದ ಸಿದ್ದರಾಮಯ್ಯಗೆ ಬಿಟ್ಟ ವಿಚಾರವಾಗಿದೆ. ಇಲ್ಲಿ ಮಾತ್ರ ಕಾಂಗ್ರೆಸ್ ಜೆಡಿಎಸ್ ಅನ್ನುವುದಿಲ್ಲ ಕಾಂಗ್ರೆಸ್ ಅಭ್ಯರ್ಥಿಯದ್ದೇ ಗೆಲುವು ಆಗಲಿದೆ. ಗೋಕಾಕ್ ನಲ್ಲಿ ವಾತಾವರಣ ಕಾಂಗ್ರೆಸ್ ಪರ ಇದೆ. ಹೀಗಾಗಿಯೇ ಸಿಎಂ ಮತ್ತೆ ಗೋಕಾಕ್ ಪ್ರಚಾರಕ್ಕೆ ಬಂದಿದ್ದಾರೆ‌. ಅಷ್ಟು ಇಷ್ಟು ಬೆಂಬಲ ಇದೆ ಅನ್ನೋರು ಆತಂಕದಿಂದ ಮತ್ತೇ ಸಿಎಂರನ್ನ ಕರೆಸ್ತಿದ್ದಾರೆ‌. ಇದ್ರಿಂದ ಎಷ್ಟು ಸೋಲಿನ ಭೀತಿ ಕಾಡುತ್ತೇ ಅನ್ನೋದನ್ನ ನೀವೆ ನೋಡಿ ಎಂದು ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.