Asianet Suvarna News Asianet Suvarna News

ಅ.17ರಿಂದ 29ರ ತನಕ ತಾಯಿ ಹಾಸನಾಂಬ ದರ್ಶನ

ಅ.17ರಿಂದ 29ರ ತನಕ ಹಾಸನಾಂಬ ದರ್ಶನೋತ್ಸವ| ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬ ದೇವಿ| ಈ ವರ್ಷ 13 ದಿನ ದರ್ಶನ| ಕಳೆದ ವರ್ಷ 9 ದಿನ ಇತ್ತು| ಶುದ್ಧ ಕುಡಿಯುವ ನೀರಿನ ವ್ಯವಸ್ಥೆ| ವಾಹನ ನಿಲುಗಡೆಗೆ ಪಾರ್ಕಿಂಗ್‌ ವ್ಯವಸ್ಥೆ| ದೇವಸ್ಥಾನದ ಆಯಕಟ್ಟಿನ ಜಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ| 

Goddess Shri Hasanambe Temple door will open Oct 17th to Oct 29th
Author
Bengaluru, First Published Sep 19, 2019, 12:02 PM IST

ಹಾಸನ: (ಸೆ.19) ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನದ ಶ್ರೀಹಾಸನಾಂಬ ದೇವಿಯ ದರ್ಶನೋತ್ಸವ ಅಕ್ಟೋಬರ್‌ 17 ರಿಂದ 29 ರವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರು ಹೇಳಿದರು. 


ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಈ ವರ್ಷ 13 ದಿನಗಳವರೆಗೆ ತಾಯಿಯ ದರ್ಶನ ಇದ್ದು, ಕಳೆದ ವರ್ಷ 9 ದಿನಗಳವರೆಗೆ ಇತ್ತು. ದೇವಾಲಯದ ಬಾಗಿಲು ತೆರೆಯುವ ಮತ್ತು ಮುಚ್ಚುವ ದಿನಗಳಂದು ದೇವಿ ದರ್ಶನ ಇರುವುದಿಲ್ಲ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 


ಹಾಸನಾಂಬ ದೇವಿ ದೇವಾಲಯ ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಈ ದೇವಾಲಯವು ವರ್ಷಕ್ಕೊಂದು ಬಾರಿ ಮಾತ್ರ ಅಶ್ವಯುಜ ಮಾಸದ ಹುಣ್ಣಿಮೆಯ ನಂತರದಲ್ಲಿ ಬರುವ ಮೊದಲ ಗುರುವಾರದಂದು ಬಾಗಿಲು ತೆರೆದು ಬಲಿಪಾಡ್ಯಮಿ ಹಬ್ಬದ ಮಾರನೇ ದಿನ ದೇವಾಲಯದ ಬಾಗಿಲು ಮುಚ್ಚಲಾಗುವುದು.

ಈ ಬಾರಿಯೂ ವಿಶೇಷ ದರ್ಶನಕ್ಕೆ ಅಂದರೆ, ಪ್ರತ್ಯೇಕ ಸಾಲಿನಲ್ಲಿ (ಸಾರ್ವಜನಿಕರ ಸಾಲಿನ ಬದಲು ಸಾಲು) ನಿಂತು ದರ್ಶನ ಪಡೆಯುವವರಿಗೆ 300 ರೂ. ಟಿಕೆಟ್‌ ನಿಗದಿ ಮಾಡಿದ್ದರೆ, ನೇರ ದರ್ಶನ ಪಡೆಯಲು 1 ಸಾವಿರ ರೂ. ಟಿಕೆಟ್‌ ನಿಗದಿ ಮಾಡಿದೆ ಎಂದು ವಿವರ ನೀಡಿದರು.

ಸುದ್ದಿಗೋಷ್ಠಿಯಲ್ಲಿ ದೇವಾಸ್ಥಾನದ ಆಡಳಿತಾಧಿಕಾರಿ ಹಾಗೂ ಪ್ರಭಾರಿ ಅಪರ ಜಿಲ್ಲಾಧಿಕಾರಿ ಡಾ. ಎಚ್‌.ಎಲ್‌. ನಾಗರಾಜ್‌, ಮುಜಾರಾಯಿ ತಹಸೀಲ್ದಾರ್‌ ಶಾರದಾಂಭ ಉಪಸ್ಥಿತರಿದ್ದರು. 

ಪೂಜೆ ವೇಳೆ ದರ್ಶನ ಇಲ್ಲ

ಅ.17ರಂದು ಮಧ್ಯಾಹ್ನ 12.30ಕ್ಕೆ ಬಾಗಿಲು ತೆರೆಯಲಿದ್ದು, ಅ.29 ರಂದು ಮಧ್ಯಾಹ್ನ 12ರ ನಂತರ ಬಾಗಿಲು ಮುಚ್ಚಲಾಗುವುದು. ಅ.17 ಮತ್ತು 29 ರಂದು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಇಲ್ಲ. ಅ.18 ರಿಂದ ಪ್ರತಿದಿನ ದೇವಿಗೆ ನೈವೇದ್ಯ ಪೂಜಾ ಸಮಯ ಅಪರಾಹ್ನ 1 ರಿಂದ 3 ಗಂಟೆಯವರೆಗೆ ಭಕ್ತಾದಿಗಳಗೆ ದರ್ಶನ ಇರುವುದಿಲ್ಲ. ಉಳಿದ ಅವಧಿಯಲ್ಲಿ ರಾತ್ರಿ 11 ರವರೆಗೆ ದರ್ಶನ ಇರುತ್ತದೆ. ಅ.23, 25 ಮತ್ತು ಅ.27ರ ದಿನಾಂಕಗಳಂದು ರಾತ್ರಿ 11 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ದೇವಿಗೆ ವಿಶೇಷ ನೈವೇದ್ಯ ಮತ್ತು ಪೂಜೆ ನಡೆಯುತ್ತದೆ.

ಅಮ್ಮನ ದರ್ಶನಕ್ಕೆ ಸಕಲ ಸಿದ್ಧತೆ

ಈಗಾಗಲೇ ಹಾಸನಾಂಬ ದೇವಿ ದರ್ಶನ ಆರಂಭವಾಗುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಸಿ, ದೇವಾಲಯದ ಸಂಪರ್ಕ ರಸ್ತೆ ರಿಪೇರಿ, ಪೊಲೀಸ್‌ ಬಂದೋಬಸ್ತ್, ಬ್ಯಾರಿಕೇಡಿಂಗ್‌ ಅಳವಡಿಕೆ, ಆರೋಗ್ಯ ಸ್ವಚ್ಛತೆ ನೈರ್ಮಲ್ಯ ಶೌಚಾಲಯ ಇತರೆ ವ್ಯವಸ್ಥೆಗಳ ಬಗ್ಗೆ ತಯಾರಿ ಮಾಡಿಕೊಳ್ಳಲಾಗಿದೆ. ಮಾಜಿ ಪ್ರಧಾನಮಂತ್ರಿಗಳು, ಮುಖ್ಯಮಂತ್ರಿಗಳು, ಎಲ್ಲ ಸಚಿವರಿಗೆ, ಸಂಸದರು ಶಾಸಕರಿಗೆ ಆಹ್ವಾನ ಮಾಡಲಾಗುವುದು.

ಶುದ್ಧ ಕುಡಿಯುವ ನೀರಿನ ವ್ಯವಸ್ಥೆ

ದೇವಿಯ ದರ್ಶನ ಪಡೆಯಲು ಸರದಿ ಸಾಲಿನಲ್ಲಿ ಬರುವ ಸಹಸ್ರಾರು ಭಕ್ತಾದಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆಗಾಗಿ ದೇವಸ್ಥಾನದ ಮುಂಬಾಗಿಲು ಪ್ರವೇಶದ್ವಾರದ ಹತ್ತಿರ, ದೇವಸ್ಥಾನದ ಹಿಂಭಾಗ ವಿಶೇಷ ದರ್ಶನದ ಕ್ಯೂ ಹತ್ತಿರ ಹಾಗೂ ಟಿಕೆಟ್‌ ಕೌಂಟರ್‌ ಹತ್ತಿರ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೇ, ಸಾಲಿನಲ್ಲಿರುವ ಭಕ್ತಾದಿಗಳಿಗೆ ನೀರು ಸರಬರಾಜು ವ್ಯವಸ್ಥೆ ಇರುತ್ತದೆ.

300, .1000 ರೂ.ಸಾವಿರ ವಿಶೇಷ ಟಿಕೆಟ್‌

ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುವುದರಿಂದ ಶೀಘ್ರ ಹಾಗೂ ಸುಗಮ ದರ್ಶನಕ್ಕಾಗಿ .300 ನೀಡಿ ವಿಶೇಷ ದರ್ಶನ ಟಿಕೆಟ್‌ ಪಡೆದವರಿಗೆ 2 ಲಾಡು ಮತ್ತು ಸಾವಿರ ರೂ. ಟಿಕೆಟ್‌ ಪಡೆದವರಿಗೆ ನೇರ ದರ್ಶನ ಮತ್ತು 4 ಲಾಡು ಪ್ರಸಾದವನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ.

ದೇವಸ್ಥಾನ ಮತ್ತು ಮುಜರಾಯಿ ಇಲಾಖೆಯಿಂದ ಭಕ್ತಾದಿಗಳಿಗೆ ದರ್ಶನದ ನಂತರ ಪ್ರಸಾದ ವಿತರಣಾ ವ್ಯವಸ್ಥೆಯನ್ನು ಚನ್ನಕೇಶವ ದೇವಾಲಯದ ಸಮುದಾಯ ಭವನದಲ್ಲಿ ಮಾಡಲಾಗುತ್ತಿದ್ದು, ಹಾಸನಾಂಬ ದೇವಿ ದರ್ಶನ ಮಹೋತ್ಸವದ ಸಂದರ್ಭದಲ್ಲಿ ಭಕ್ತಾದಿಗಳ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಎಲ್‌ಇಡಿ ಸ್ಕ್ರೀನ್ ಟಿವಿ ವ್ಯವಸ್ಥೆ ದೇವಸ್ಥಾನದ ಆಯಕಟ್ಟಿನ ಜಾಗದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ.

ವಾಹನ ನಿಲುಗಡೆಗೆ ಪಾರ್ಕಿಂಗ್‌ ವ್ಯವಸ್ಥೆ

ಭಕ್ತಾದಿಗಳ ವಾಹನ ನಿಲುಗಡೆಗಾಗಿ ಪಾರ್ಕಿಂಗ್‌ ವ್ಯವಸ್ಥೆಯನ್ನು ಹಾಸನ ನಗರಸಭೆ ಆವರಣ ಹಿಂಭಾಗದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ದೇವಾಲಯದ ಬಾಗಿಲು ತೆರೆಯುವ ಅ. 17 ರಂದು ಜಿಲ್ಲೆಯ ವಿವಿಧ ಪ್ರಕಾರಗಳ ಕಲಾ ತಂಡಗಳನ್ನು ಕರೆಸಿ ಸಾಂಪ್ರಾದಾಯಿಕ ಮೆರವಣಿಗೆ ಉತ್ಸವ ನಡೆಸಲಾಗುವುದು. ದೇವಾಲಯದ ಮುಚ್ಚುವ ಅ.29 ರಂದು ಮಧ್ಯಾಹ್ನ 2 ರಿಂದ ರಾತ್ರಿಯವರೆಗೆ ವಿವಿಧ ಪ್ರಕಾರದ ಕಲಾವಿದರಿಂದ ಹಾಸನಾಂಬ ಕಲಾಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ ಶ್ರೀಹಾಸನಾಂಬ ದೇವಿ ದರ್ಶನದ ಅವಧಿಯಲ್ಲಿ ಎಲ್ಲಾ ಇಲಾಖಾಧಿಕಾರಿಗಳು ಮತ್ತು ಭಕ್ತಾದಿಗಳ ಸಹಕಾರದೊಂದಿಗೆ ಯಶಸ್ವಿಗೊಳಿಸಲು ವ್ಯವಸ್ಥೆ ಮಾಡಲಾಗಿದೆ.
 

Follow Us:
Download App:
  • android
  • ios