ಬೆಂಗಳೂರು [ಮಾ.09]:  ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಭಾನುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸರ ಸಂಘ ಸಂಚಾಲಕ ಡಾ.ಮೋಹನ್‌ ಭಾಗವತ್‌ ಅವರು ಪಾಲ್ಗೊಂಡಿದ್ದ ಹಿಂದೂ ಸಮಾವೇಶದ ವೇಳೆ ವಿಧ್ವಂಸಕ ಕೃತ್ಯಕ್ಕೆ ಉಗ್ರರು ಸಂಚು ರೂಪಿಸಿದ್ದ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

ಈ ಮಾಹಿತಿ ಹಿನ್ನೆಲೆಯಲ್ಲಿ ಎಚ್ಚೆತ್ತ ರಾಜ್ಯ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಅಧಿಕಾರಿಗಳು, ಮುಂಜಾಗ್ರತಾ ಕ್ರಮವಾಗಿ ಮೋಹನ್‌ ಭಾಗವತ್‌ ಅವರ ಕಾರ್ಯಕ್ರಮಕ್ಕೆ ಸೂಕ್ತ ಬಂದೋಬಸ್ತ್  ವ್ಯವಸ್ಥೆ ಕಲ್ಪಿಸಿದ್ದರು. ಈ ಕುರಿತು ಐಎಸ್‌ಡಿ ಎಸ್ಪಿ ಜಿನೇಂದ್ರ ಕಣಗಾವಿ ಅವರು ತಮ್ಮ ಅಧಿಕಾರಿಗಳಿಗೆ ಶನಿವಾರ ಬರೆದಿದ್ದ ‘ಜ್ಞಾಪನಾ ಪತ್ರ’ ಬಹಿರಂಗವಾಗಿದೆ. ಇದರಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥರ ಕಾರ್ಯಕ್ರಮದ ಮೇಲೆ ಉಗ್ರರ ಕರಿನೆರಳು ಬಿದ್ದಿದೆ ಎಂಬ ಆಘಾತಕಾರಿ ವಿಚಾರವಿದೆ.

ಆನ್‌ಲೈನಲ್ಲಿ ಮಾಹಿತಿ ವಿನಿಮಯ:

ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಸಂಜೆ 4 ಗಂಟೆಗೆ ಹಿಂದೂ ಸಮಾಜೋತ್ಸವದಲ್ಲಿ ಆರ್‌ಎಸ್‌ಎಸ್‌ ಸರ ಸಂಘ ಸಂಚಾಲಕ ಡಾ.ಮೋಹನ್‌ ಭಾಗವತ್‌ ಭಾಗವಹಿಸಲಿದ್ದರು. ಈ ವೇಳೆ ದಾಳಿ ನಡೆಸಲು ಇಂಟರ್ನೆಟ್‌ನಲ್ಲಿ ‘ಗ್ಲೋಬಲ್‌ ಟೆರರಿಸ್ಟ್‌ ಗ್ರೂಪ್‌’ ಮಾಹಿತಿ ವಿನಿಯ ಮಾಡಿಕೊಂಡಿತ್ತು. ಈ ವಿಷಯ ತಿಳಿದ ತಕ್ಷಣವೇ ಕೇಂದ್ರ ಗುಪ್ತದಳದ (ಐಬಿ) ಅಧಿಕಾರಿಗಳು ರಾಜ್ಯ ಆಂತರಿಕ ಭದ್ರತಾ ಪಡೆಗೆ (ಐಎಸ್‌ಡಿ) ಎಚ್ಚರಿಕೆ ವಹಿಸುವಂತೆ ಮಾಹಿತಿ ರವಾನಿಸಿದರು.

Fact Check: ದೆಹಲಿ ಸಿಎಂ ಕೇಜ್ರಿ​ವಾ​ಲ್‌ಗೆ ಆರ್‌​ಎ​ಸ್‌​ಎಸ್‌ ಹಿನ್ನೆ​ಲೆ!..

ಈ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿದ ಐಎಸ್‌ಡಿ ಅಧಿಕಾರಿಗಳು, ಆರ್‌ಎಸ್‌ಎಸ್‌ ಮುಖ್ಯಸ್ಥರು ಭಾಗವಹಿಸುವ ಕಾರ್ಯಕ್ರಮಗಳ ಮೇಲೆ ಹೆಚ್ಚಿನ ನಿಗಾವಹಿಸಿದರು. ಅಲ್ಲದೆ, ಮಾಗಡಿ ರಸ್ತೆಯ ಚನ್ನೇನಹಳ್ಳಿಯ ಜನಸೇವಾ ಸಂಘ, ನ್ಯಾಷನಲ್‌ ಕಾಲೇಜು ಮೈದಾನ, ದೇವರಜೀವನಹಳ್ಳಿ, ಕೆ.ಜಿ.ಹಳ್ಳಿ, ಶಿವಾಜಿನಗರ, ಫ್ರೇಜರ್‌ ಟೌನ್‌, ಜೆ.ಜೆ.ನಗರ, ಚಾಮರಾಜಪೇಟೆ, ಗುರಪ್ಪನಪಾಳ್ಯ, ಇಲಿಯಾಸ್‌ ನಗರ, ಸಿದ್ದಾಪುರ ಹಾಗೂ ಬನಶಂಕರಿಯ ಯಾರಬ್‌ನಗರದಲ್ಲಿ ಪ್ರತ್ಯೇಕ ಸಿಬ್ಬಂದಿಯನ್ನು ಐಎಸ್‌ಡಿ ನಿಯೋಜಿಸಿತ್ತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಆರ್‌ಎಸ್‌ಎಸ್‌ ಮುಖಂಡರ ಮಾಹಿತಿ ಸಂಗ್ರಹಿಸಿದ ಪೊಲೀಸರು, ಮೋಹನ್‌ ಭಾಗವತ್‌ ಭೇಟಿ ನೀಡುವ ಸ್ಥಳದಲ್ಲಿ ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆ ಸದಸ್ಯರ ಸಂಚಾರದ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ಮಫ್ತಿ ಸಿಬ್ಬಂದಿಯನ್ನು ನಿಯೋಜಿಸಿದ್ದರು.