ಯಾದಗಿರಿ[ಸೆ.18]: ಮೊಹರಂ ಸಂದರ್ಭದಲ್ಲಿ ಯಾದಗಿರಿ ತಾಲೂಕಿನ ಹೊನಗೇರಾ ಗ್ರಾಮದಲ್ಲಿ ಸವರ್ಣೀಯರು ಹಾಗೂ ದಲಿತರ ನಡುವೆ ಉಂಟಾಗಿದ್ದ ಜಗಳ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ದಲಿತರಿಗೆ ನೀರು ಕೊಟ್ಟರೆ 10 ಸಾವಿರ ರು. ದಂಡ ವಿಧಿಸಿ, ಬಹಿಷ್ಕಾರ ಹಾಕುತ್ತೇವೆಂದು ಸವರ್ಣೀಯರು ಎಚ್ಚರಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಮಾದಿಗ ಸಮುದಾಯ ಮುಖಂಡರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ.

ಸೆ.10ರಂದು ಗ್ರಾಮದಲ್ಲಿ ಮೊಹರಂ ಉತ್ಸವ ನಡೆಯುವ ವೇಳೆ ದಲಿತ ಯುವಕರು ಕಾಲು ತುಳಿದರೆಂದು ಸವರ್ಣೀಯರು ಹಾಗೂ ದಲಿತರ ನಡುವೆ ಜಗಳ ಆರಂಭವಾಗಿ ಪರಿಸ್ಥಿತಿ ಉದ್ವಿಗ್ನಗೊಂಡು, ಪ್ರಕರಣ ಠಾಣೆಯ ಮೆಟ್ಟಿಲೇರಿತ್ತು. 2-3 ದಿನಗಳ ಬಳಿಕ ಮಾತುಕತೆ ಮೂಲಕ ಜಗಳವನ್ನು ಬಗೆಹರಿಸಲಾಗಿತ್ತು. ಆದರೆ, ಅಂದು ನಡೆದ ಗಲಾಟೆಯನ್ನೇ ಮನಸ್ಸಿನಲ್ಲಿರಿಸಿಕೊಂಡು ಸವರ್ಣೀಯರು ನಮಗೆ ಬಹಿಷ್ಕಾರ ಹಾಕಿದ್ದಾರೆ. ನಮಗೆ ನೀರು ನೀಡಿದರೆ, ಅಂಗಡಿಗಳಲ್ಲಿ ಕಿರಾಣಿ ನೀಡಿದರೆ, ಆಟೋಗಳಲ್ಲಿ ಕೂಡಿಸಿಕೊಂಡರೆ 10 ಸಾವಿರ ರು. ದಂಡ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಕುಡಿವ ನೀರಿಗೂ ಹಾಹಾಕಾರ ಉಂಟಾಗಿದೆ ಎಂದು ದಲಿತ ಮುಖಂಡರು ಆರೋಪಿಸಿ, ಪ್ರತಿಭಟಿಸಿದರು.

ಸಿಪಿಐ ಎದುರೇ ನೀರು ನಿರಾಕರಣೆ?:

ದೂರು ದಾಖಲಾದ ಹಿನ್ನೆಲೆಯಲ್ಲಿ, ಮಂಗಳವಾರ ಸಂಜೆ ಯಾದಗಿರಿ ಸರ್ಕಲ್‌ ಇನ್ಸ್‌ಪೆಕ್ಟರ್‌ ಶರಣಗೌಡ ಗ್ರಾಮಕ್ಕೆ ತೆರಳಿ ಶಾಂತಿಸಭೆ ನಡೆಸಿ, ಸವರ್ಣೀಯರ ಮನವೊಲಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಸಿಪಿಐ ಮುಂದೆಯೇ ಸವರ್ಣೀಯರು ದಲಿತರಿಗೆ ನೀರು ಕೊಡಲು ನಿರಾಕರಿಸಿದರು ಎಂಬ ಆರೋಪ ಕೇಳಿಬಂದಿದೆ.

ಬುಧವಾರ ಗ್ರಾಮದಲ್ಲಿ ಮತ್ತೊಮ್ಮೆ ಸಭೆ ನಡೆಸಿ, ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಲಾಗುವುದು. ಒಂದೊಮ್ಮೆ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದರೆ ಬಹಿಷ್ಕಾರ ಹೇರುತ್ತಿರುವವರ ವಿರುದ್ಧ ಮುಲಾಜಿಲ್ಲದೇ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.