ಪರಿಹಾರ ಬದಲು ಸಂತ್ರಸ್ತರಿಗೆ ವಿಷ ಕೊಡಿ ; ಗೋಪಾಲಕೃಷ್ಣ ಬೇಳೂರು ಆಕ್ರೋಶ
- ಪರಿಹಾರ ಬದಲು ಸಂತ್ರಸ್ತರಿಗೆ ವಿಷಯ ಬಾಟಲಿ ಕೊಡಿ
- ಮಾನವೀಯತೆ ತೋರದ ಬಿಜೆಪಿ ಸರ್ಕಾರಗಳು: ಗೋಪಾಲಕೃಷ್ಣ ಬೇಳೂರು ಆಕ್ರೋಶ
- - -
ಶಿವಮೊಗ್ಗ (ಅ.20) : ಶರಾವತಿ ಮುಳುಗಡೆ ಸಂತ್ರಸ್ತರಿಗೆ ವಿಷದ ಬಾಟಲಿ ಕೊಟ್ಟುಬಿಡಿ. ಆಗ ಸಮಸ್ಯೆಯೇ ಇರಲ್ಲ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಗೋಪಾಲಕೃಷ್ಣ ಬೇಳೂರು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮುಳುಗಡೆ ಸಂತ್ರಸ್ತರ ವಿಚಾರದಲ್ಲಿ ಮಾನವೀಯತೆ ತೋರದ ಸರ್ಕಾರಗಳ ಧೋರಣೆಗಳಿಂದ ಇಂದು ಶರಾವತಿ ಮುಳುಗಡೆ ಸಂತ್ರಸ್ತರು ಹೀನಬದುಕು ಕಳೆಯುವಂತಾಗಿದೆ. ಶಾಶ್ವತ ಪರಿಹಾತ ಮರೀಚಿಕೆಯಾಗಿದೆ. ಮುಳುಗಡೆಯ ನಾಯಕ ಎಂದು ಕರೆಸಿಕೊಂಡಿದ್ದ ಹರತಾಳು ಹಾಲಪ್ಪ ಈಗ ಎಲ್ಲಿದ್ದಾರೋ ಗೊತ್ತಿಲ್ಲ. ಸಂತ್ರಸ್ತರ ಬದುಕನ್ನು ಮೂರಾಬಟ್ಟೆಮಾಡಿದ ಹಾಲಪ್ಪ ಅವರಿಗೆ ಕ್ಷೇತ್ರದ ಜನ ಪೊರಕೆ ತೆಗೆದುಕೊಂಡು ಹೊಡೆಯುವುದು ಬಾಕಿ ಇದೆ ಎಂದರು.
Shivamogga: ಬಿಜೆಪಿ ನಾಯಕರ ವಿರುದ್ಧ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ
ಬಿಜೆಪಿ ಕೊಲೆಗಡುಕ ಸರ್ಕಾರವಾಗಿದೆ. ಮಂಡ್ಯ, ಮೈಸೂರು, ಶಿವಮೊಗ್ಗ ಸೇರಿದಂತೆ ಕೊಲೆಗಳು ನಡೆಯುತ್ತಲೇ ಇವೆ. ಅತ್ಯಾಚಾರಿಗಳು ಹೆಚ್ಚಾಗುತ್ತಲೆ ಇದ್ದಾರೆ. ಘಟನೆಗಳು ನಡೆದಾಗ 5, 10, 25 ಲಕ್ಷ ಹಣ ಕೊಟ್ಟು ಮುಚ್ಚಿಹಾಕುತ್ತಾರೆ. ಪರಿಹಾರ ನೀಡುವಲ್ಲಿಯೂ ತಾರತಮ್ಯ ಮಾಡುತ್ತಾರೆ. ಮಂಡ್ಯ ಕೊಲೆಗೆ ಸಂಬಂಧಿಸಿದಂತೆ ನಮ್ಮ ಶೋಭಾ ಮೇಡಂ ಸುಮ್ಮನಿರುತ್ತಾರೆ. ಬಹುಶಃ ಅವರಿಗೆ 2 ನಾಲಿಗೆ ಇರಬೇಕು. ಬಿಜೆಪಿ ಈಗ ನೀಚ ಸರ್ಕಾರವಾಗಿದೆ. ಬಿಜೆಪಿಯವರು ಸಂಕಲ್ಪ ಯಾತ್ರೆ ಮಾಡುವ ಬದಲು ಹೆಣಗಳ ಮೆರವಣಿಗೆಯ ಯಾತ್ರೆ ಮಾಡಲಿ ಎಂದು ಟೀಕಿಸಿದರು.
ವಿಧಾನಸಭೆಗೆ ಬರಲು ಈಶ್ವರಪ್ಪರಿಗೆ ಕಾಲುನೋವು:
ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ಮುಖಂಡರ ಬಗ್ಗೆ ಮಾತನಾಡುತ್ತಾರೆ. ಅತ್ತ ಯಡಿಯೂರಪ್ಪ ಸಂಕಲ್ಪ ಯಾತ್ರೆ ಮಾಡುತ್ತಿದ್ದರೆ, ಇತ್ತ ಈಶ್ವರಪ್ಪ ಮಂಡಿನೋವು ಎಂದು ಗೈರಾಗಿದ್ದಾರೆ. ಅವರಿಗೆ ದೇವಸ್ಥಾನಕ್ಕೆ ಹೋಗಲು ಕಾಲುನೋವಿಲ್ಲ, ವಿಧಾನಸಭೆಗೆ ಹೋಗಲು ಕಾಲುನೋವು ಬಂದುಬಿಡತ್ತೆ ಎಂದು ವ್ಯಂಗ್ಯವಾಡಿದರು.
ಯತ್ನಾಳ್ ಬಳಿ ಸಿಡಿ ಇದೆ:
ಬಿಜೆಪಿಯನ್ನು ಸದಾ ಟೀಕಿಸುತ್ತಲೇ ಬಂದಿರುವ ಅವರದೇ ಪಕ್ಷದ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಈಗ ನೋಟಿಸ್ ಕೊಡುತ್ತಿದೆಯಂತೆ. ಆದರೆ, ಅವರನ್ನು ಪಕ್ಷದಿಂದ ತೆಗೆದುಹಾಕಲು ಸಾಧ್ಯವೇ ಇಲ್ಲ. ತಾಕತ್ತಿದ್ದರೆ ಬಿಜೆಪಿ ಮುಖಂಡರು ಯತ್ನಾಳ್ ಅವರನ್ನು ಹೊರಹಾಕಲಿ. ಆದರೆ, ಅದು ಆಗುವುದಿಲ್ಲ. ಏಕೆಂದರೆ ಯತ್ನಾಳ್ ಹತ್ತಿರ ಬಿಜೆಪಿಯ ಕೆಲವು ಮಂತ್ರಿ ಹಾಗೂ ಶಾಸಕರ ಸಿಡಿ ಇದೆ ಎಂಬ ಗುಮಾನಿ ಇದೆ. ಇದಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಕೆಲವರು ಈಗಾಗಲೇ ಸಿಡಿ ಬಇಡುಗಡೆಗೆ ನ್ಯಾಯಾಲಯದಿಂದ ತಡೆಯಾಜ್ಞೆ ಕೂಡ ತಂದಿದ್ದಾರೆ. ಇದರಿಂದಲೇ ಗೊತ್ತಾಗುತ್ತದೆ ಬಿಜೆಪಿ ನಾಯಕರು ಯತ್ನಾಳ್ ಕಂಡರೆ ಭಯಪಡುತ್ತಾರೆ ಎಂದು ಹೇಳಿದರು.
ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಎಲೆಚುಕ್ಕಿ ರೋಗಕ್ಕೆ ಅಡಿಕೆ ಇರಲಿ ಅಡಿಕೆ ಮರಗಳೇ ನಾಶವಾಗುತ್ತಿವೆ. ಈ ಸರ್ಕಾರ ಬೆಳೆಗಾರರ ಬದುಕನ್ನು ಕಸಿದುಕೊಂಡಿದೆ. ತಕ್ಷಣವೇ ರೈತನಿಗಮ ಮಾಡಿ ಕನಿಷ್ಠ 500 ಕೋಟಿ ರು.ಗಳನ್ನು ಮೀಸಲಾಗಿರಿಸಬೇಕು ಎಂದು ಆಗ್ರಹಿಸಿದರು.
Shivamogga: ಮರಳು ಮಾಲಿಕರಿಂದ ಕಮಿಷನ್ ಆರೋಪ, ಧರ್ಮಸ್ಥಳದಲ್ಲಿ ಹಾಲಪ್ಪ ಆಣೆ-ಪ್ರಮಾಣ
ಜನರು ಯಾವ ಆಹಾರವನ್ನು ತಿನ್ನಬೇಕು ಎಂದು ಅವರಿಗೆ ಗೊತ್ತಿದೆ. ಆದರೆ ಈ ಬಿಜೆಪಿ ಸರ್ಕಾರ ಅದನ್ನು ವಿವಾದಗೊಳಿಸುತ್ತಿದೆ. ಈಶ್ವರಪ್ಪ ‘ಸಾವರ್ಕರ್ ಸಾಮ್ರಾಜ್ಯ’ ಮಾಡಲು ಹೊರಟಿದ್ದಾರೆ. ಮೊದಲು ಅವರು ತಮ್ಮ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದರು. ಪತ್ರಿಕಾಗೊಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ರಮೇಶ್ ಶಂಕರಘಟ್ಟ, ಕೆ.ಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್, ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಮುಖಂಡ ಡಾ.ಶ್ರೀನಿವಾಸ ಕರಿಯಣ್ಣ, ಜಿ.ಡಿ. ಮಂಜುನಾಥ್, ರವಿಕುಮಾರ್ ಮತ್ತಿತರರಿದ್ದರು.