Asianet Suvarna News Asianet Suvarna News

ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ನೀಡಿ, ಮಾತು ಉಳಿಸಿಕೊಳ್ಳಿ

  • ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ನೀಡಿ, ಮಾತು ಉಳಿಸಿಕೊಳ್ಳಿ...
  • ಮಾತು ತಪ್ಪಿದರೆ ಬಿಜೆಪಿ ಸರ್ಕಾರ ಪಂಚಮಸಾಲಿ ಸಮುದಾಯದ ಆಶೀರ್ವಾದ ಕಳೆದುಕೊಳ್ಳಲಿದೆ: ಸ್ವಾಮೀಜಿ ಎಚ್ಚರಿಕೆ
Give reservation to Manchamasali Lingayat community and keep your word swamiji warn
Author
Bengaluru, First Published Aug 26, 2022, 9:25 AM IST

ಶಿವಮೊಗ್ಗ, (ಆ.26): ಪ್ರತಿಬಾರಿ ಬಿ.ಎಸ್‌.ಯಡಿಯೂರಪ್ಪ ಚುನಾವಣಾ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಪಂಚಮಸಾಲಿ ಲಿಂಗಾಯತ, ಮಲೆಗೌಡ ಸಮಾಜವನ್ನು 2ಎ ಮೀಸಲಾತಿಗೆ ಸೇರಿಸಲಾಗುವುದು ಎಂದು ಭರವಸೆ ನೀಡಿದ್ದರೂ ಭರವಸೆ ಮರೆತಿದ್ದಾರೆ. ಕೊಟ್ಟಮಾತಿನಂತೆ ಮೀಸಲಾತಿ ನೀಡದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಪಂಚಮಸಾಲಿ ಸಮಾಜದ ಆಶೀರ್ವಾದ ಕಳೆದುಕೊಳ್ಳಲಿದೆ ಎಂದು ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಗೌರವಾಧ್ಯಕ್ಷ ಶ್ರೀ ಬಸವಮೃತ್ಯುಂಜನ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪ್ರಾರಂಭದಲ್ಲೇ ಐದು ಪೀಠಗಳ ಮಾಡುವ ಚಿಂತನೆ: ಬಿ.ಸಿ.ಉಮಾಪತಿ

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್‌ ಪಂಚಮಸಾಲಿ ಮಹಾಸಭಾ ಧರ್ಮಕ್ಷೇತ್ರ ಕೂಡಲಸಂಗಮ ಶಿವಮೊಗ್ಗ ಜಿಲ್ಲಾ ಘಟಕ ವತಿಯಿಂದ ಗುರುವಾರ ‘ಲಿಂಗಾಯತ ಪಂಚಮಸಾಲಿ, ಲಿಂಗಾಯತ ಮಲೆಗೌಡ ಸಮುದಾಯವನ್ನು ಪ್ರವರ್ಗ 2ಎ’ ಮೀಸಲಾತಿಗೆ ಸೇರಿಸಬೇಕು ಎಂದು ಆಗ್ರಹಿಸಿ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಗೌರವಾಧ್ಯಕ್ಷ ಶ್ರೀ ಬಸವಮೃತ್ಯುಂಜಯ ಸ್ವಾಮೀಜಿ ಈ ಆಗ್ರಹ ಮುಂದಿಟ್ಟಿದ್ದಾರೆ. ಅವರು ಸಂಸದ ಬಿ.ವೈ. ರಾಘವೇಂದ್ರ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಜ್ಞಾಪನಾ ಪತ್ರ ನೀಡಿದರು.

ಇಲ್ಲಿನ ಶಿವಪ್ಪನಾಯಕ ವೃತ್ತದಲ್ಲಿ ಶಿವಪ್ಪನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಮೆರವಣಿಗೆ ಮೂಲಕ ಪಂಚಮಸಾಲಿ ಸಮಾಜದ ಬಾಂಧವರೊಂದಿಗೆ ಗೋಪಿವೃತ್ತದ ವರೆಗೆ ಪಾದಯಾತ್ರೆ ನಡೆಸಿ, ನಂತರ ಬಹಿರಂಗ ಸಭೆ ನಡೆಸಲಾಯಿತು.

ಈ ಸಂದರ್ಭ ಮಾತನಾಡಿದ ಸ್ವಾಮೀಜಿ, ಎರಡು ವರ್ಷಗಳಿಂದ ಕೂಡಲ ಸಂಗಮ ಪಂಚಮಸಾಲಿ ಪೀಠದಿಂದ ರಾಜ್ಯಾದ್ಯಂತ ನಿರಂತರವಾಗಿ ಹೋರಾಟ ನಡೆಸಲಾಗಿದೆ. ಲಿಂಗಾಯಿತ ಪಂಚಮ ಸಾಲಿ, ಮಲೆಗೌಡ ಲಿಂಗಾಯತ ಸಮುದಾಯವನ್ನು ರಾಜ್ಯ ಸರ್ಕಾರದ 2 ಎ ಮೀಸಲಾತಿಗೆ ಒಳಪಡಿಸಬೇಕು ಹಾಗೂ ಎಲ್ಲಾ ಲಿಂಗಾಯತ ಸಮಾಜವನ್ನು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕೆಂದು ಹಕ್ಕೊತ್ತಾಯದಿಂದ ಮೀಸಲಾತಿ ಚಳವಳಿ ನಡೆಸಲಾಗುತ್ತಿದೆ. ಈಗಾಗಲೇ 10 ಲಕ್ಷ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡಿ ನಿರಂತರ ಪಾದಯಾತ್ರೆ ಮೂಲಕ ಹಕ್ಕೊತ್ತಾಯ ಮಾಡುವುದು ಎಂದು ತಿಳಿಸಿದರು.

ವಿಫಲವಾದ ಭರವಸೆ: ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮೀಸಲಾತಿ ಭರವಸೆ ನೀಡಿದ್ದರು. ಅವರು ಅಧಿಕಾರ ತ್ಯಾಗ ಮಾಡಿದ ಮೇಲೆ ಬಸವರಾಜ ಬೊಮ್ಮಾಯಿ ಸರ್ಕಾರ ಕೂಡ ಮೂರು ಬಾರಿ ಭರವಸೆ ನೀಡಿ ವಿಫಲವಾಗಿದೆ. ಕೊನೆಗೆ ಅನಿವಾರ್ಯವಾಗಿ ಮುಖ್ಯಮಂತ್ರಿ ಮನೆ ಮುಂಭಾಗ ಧರಣಿ ಕೂರುವ ತೀರ್ಮಾನ ಮಾಡಿದಾಗ ಸಂಧಾನ ಸಭೆ ನಡೆಸಿ ಎರಡು ತಿಂಗಳ ಕಾಲಾ ವಕಾಶ ಕೇಳಿದ್ದಲ್ಲದೆ, ಆಯೋಗ ರಚಿಸಿ ಸಮೀಕ್ಷೆಗೆ ತೀರ್ಮಾನ ಮಾಡಲಾಗಿತ್ತು. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಯುತ್ತಿದೆ ಎಂದು ಹೇಳಿದರು.

ಸಮೀಕ್ಷೆ ವರದಿ ಬರುವ ಮುನ್ನ ಸರ್ಕಾರಕ್ಕೆ ಎಚ್ಚರಿಸುವ ನಿಟ್ಟಿನಲ್ಲಿ ವಿವಿಧ ಜಿಲ್ಲೆಗಳಲ್ಲಿ ಪ್ರತಿಜ್ಞಾ ಪಂಚಾಯತ್‌ ಅಭಿಯಾನ ಹಾಗೂ ಜಾಗೃತಿ ಸಭೆಗಳ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಕಾರ್ಯ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಹರಿದು ಹಂಚಿ ಹೋಗಿರುವ ಪಂಚಮಸಾಲಿ ಸಮುದಾಯವನ್ನು ಒಗ್ಗೂಡಿಸುವುದು, ಇದರೆ ಲ್ಲದರ ನಡುವೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿಗೆ ಹೋರಾಟ ನಡೆಸಲಾಗುತ್ತಿದೆ. ಆದರೆ, ಸರ್ಕಾರ ನೀಡಿದ್ದ ಗಡುವು ಮುಗಿದಿದೆ ಎಂದರು.

ಇದು 5ನೇ ಹಂತದ ಹೋರಾಟ: ಮಾಜಿ ಶಾಸಕ, ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್‌ ಮಾತನಾಡಿ, ಇದು 5ನೇ ಹಂತದ ಅಂತಿಮ ಹೋರಾಟ, ಈಗಾಗಲೇ ಎಲ್ಲಾ ಪಕ್ಷದ ಎಲ್ಲಾ ನಾಯಕರಿಗೆ ಸಮಾಜದ ಬಗ್ಗೆ ತಿಳಿಸಲಾಗಿದೆ.ಇನ್ನು ಕಾಯಲು ನಾವು ಸಿದ್ಧರಿಲ್ಲ. ತಕ್ಷಣ ಸ್ಪಂದಿಸದಿದ್ದರೆ ಪರಿಣಾಮ ಮುಂದಿನ ದಿನಗಳಲ್ಲಿ ಬೊಮ್ಮಾಯಿ ಸರ್ಕಾರ ಅನುಭವಿಸಲಿದೆ ಎಂದು ಎಚ್ಚರಿಸಿದರು.

ಜ್ಞಾಪನ ಪತ್ರ ಸ್ವೀಕರಿಸಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಸರ್ಕಾರ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಗಮನಕ್ಕೆ ತಂದು ಬೇಡಿಕೆ ಈಡೇರಿಸಲು ಸರ್ವ ಪ್ರಯತ್ನ ಮಾಡಲಾಗುವುದು ಎಂದರು.

ಪಂಚಮಸಾಲಿ 2ಎ ಮೀಸಲಿಗೆ 2 ತಿಂಗಳ ಡೆಡ್‌ಲೈನ್‌: ಬಸವಜಯ ಮೃತ್ಯುಂಜಯ ಶ್ರೀ

ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಮಾಜದ ಪ್ರಮುಖರಾದ ಮಲ್ಲಿಕಾರ್ಜುನ ಹಕ್ರೆ, ಪ್ರೆ.ವಿಜಯಕುಮಾರ್‌, ರುದ್ರೇಗೌಡ ಕಡೆಮನೆ, ಎಂ.ಎಸ್‌.ಕುಮಾರ್‌, ಎಂ.ಪಿ.ವಿಜಯಕುಮಾರ್‌, ನವೀನ್‌, ಲಿಂಗಪ್ಪಣ್ಣ ಕೆಳಗೇರಿ ಮತ್ತಿತರರು ಇದ್ದರು.

ಅಕ್ಟೋಬರ್‌ನಲ್ಲಿ ಬೃಹತ್‌ ಹೋರಾಟದ ಎಚ್ಚರಿಕೆ

ಈಗಾಗಲೇ ಶಿವಮೊಗ್ಗ ಜಿಲ್ಲೆಯ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಬಹಿರಂಗ ಸಭೆ ನಡೆಸಲಾಗಿದೆ. ಇಂದು ಸಂಸದರ ಮೂಲಕ ಜ್ಞಾಪನಾ ಪತ್ರ ಕೂಡ ನೀಡಲಾಗಿದೆ. ಸರ್ಕಾರ ಕೂಡಲೇ ಅಧಿವೇಶನದಲ್ಲಿ ನೀಡಿದ ಭರವಸೆಯಂತೆ ಮೀಸಲಾತಿ ನೀಡಬೇಕು. ಕೊಟ್ಟಮಾತಿನಂತೆ ಮೀಸಲಾತಿ ನೀಡದಿದ್ದರೆ ಸೆ.26ರಂದು ಶಿಗ್ಗಾಂವಿಯ ಸಿಎಂ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಸ್ವಾಮೀಜಿ ಎಚ್ಚರಿಸಿದರು.

ಆಗ ಕೂಡ ಸರ್ಕಾರ ಮೀಸಲಾತಿ ನೀಡದಿದ್ದರೆ ಅ.23ರಂದು ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ 25 ಲಕ್ಷ ಪಂಚಮಸಾಲಿ ಬಾಂಧವರೊಂದಿಗೆ ‘ಮಾಡು ಇಲ್ಲವೇ ಮೀಸಲಾತಿ ಪಡೆದು ಮಡಿ’ ಎಂಬ ಘೋಷಣೆಯೊಂದಿಗೆ ಬೃಹತ್‌ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಶ್ರೀ ಬಸವಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

Follow Us:
Download App:
  • android
  • ios