ಬೆಂಗಳೂರು [ನ.17]:  ಬಿಬಿಎಂಪಿ ವ್ಯಾಪ್ತಿಯಲ್ಲಿನ ಎಲ್ಲ ರೀತಿಯ ವಾಣಿಜ್ಯ ಕೇಂದ್ರಗಳ ನಾಮಫಲಕದಲ್ಲಿ ಶೇಕಡ 60ರಷ್ಟುಕನ್ನಡ ಬಳಸದ 13 ಸಾವಿರ ಉದ್ದಿಮೆದಾರರಿಗೆ ಪಾಲಿಕೆ ನೋಟಿಸ್‌ ಜಾರಿ ಮಾಡಿದ್ದು, 15 ದಿನದೊಳಗೆ ನಿಗದಿಪಡಿಸಿದ ರೀತಿಯಲ್ಲಿ ನಾಮ ಫಲಕ ಅಳವಡಿಸದೇ ಇದ್ದಲ್ಲಿ ಉದ್ದಿಮೆ ಪರವಾನಗಿ ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಯ ಮಾಲ್‌, ಹೋಟೆಲ್‌, ಮಳಿಗೆಗಳು ಸೇರಿದಂತೆ ಎಲ್ಲ ರೀತಿಯ ವಾಣಿಜ್ಯ ಕೇಂದ್ರಗಳಲ್ಲಿ ನವೆಂಬರ್‌ 1ರ ಕನ್ನಡ ರಾಜ್ಯೋತ್ಸವದೊಳಗಾಗಿ ಶೇ.60ರಷ್ಟುಕನ್ನಡ ಭಾಷೆಯ ನಾಮಫಲಕ ಪ್ರದರ್ಶನ ಕಡ್ಡಾಯಗೊಳಿಸಿ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಕಳೆದ ಅಕ್ಟೋಬರ್‌ 19ರಂದು ಆದೇಶಿಸಿದ್ದಾರೆ.

ಕೆಲವು ವ್ಯಾಪಾರಿಗಳು ಕಾಲಾವಕಾಶ ನೀಡುವಂತೆ ಮೇಯರ್‌ ಹಾಗೂ ಆಯುಕ್ತರ ಬಳಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಾಮಫಲಕ ಬದಲಾವಣೆಗೆ ಬಿಬಿಎಂಪಿ ಅವಕಾಶವನ್ನೂ ನೀಡಿತ್ತು. ಇದೀಗ ನೀಡಿದ್ದ ಕಾಲಾವಕಾಶ ಮುಗಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಸಾರ್ವಜನಿಕ ಆರೋಗ್ಯ ವಿಭಾಗದ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದು, ನಾಮಫಲಕದಲ್ಲಿ ಕನ್ನಡ ಬಳಕೆ ಮಾಡದ 13,575 ಉದ್ದಿಮೆದಾರರಿಗೆ ನೋಟಿಸ್‌ ಜಾರಿ ಮಾಡಿದೆ. ನಾಮಫಲಕದಲ್ಲಿ ಶೇ.60ರಷ್ಟುಕನ್ನಡ ಬಳಕೆ ಮಾಡದಿದ್ದರೆ ಬಿಬಿಎಂಪಿಯಿಂದ ನೀಡಲಾಗಿರುವ ಉದ್ದಿಮೆ ಪರವಾನಿಗೆ ರದ್ದು ಪಡಿಸುವುದಾಗಿ ನೊಟೀಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.

7,734 ನಾಮಫಲಕದಲ್ಲಿ ಅಳವಡಿಕೆ:

ಪಾಲಿಕೆ ವ್ಯಾಪ್ತಿಯಲ್ಲಿ ಈವರೆಗೆ ಒಟ್ಟು 47,406 ಉದ್ದಿಮೆದಾರರು ಪರವಾನಿಗೆ ಪಡೆದಿದ್ದು, ಅದರಲ್ಲಿ 20,689 ಉದ್ದಿಮೆಗಳ ನಾಮಫಲಕಗಳನ್ನು ಇಲ್ಲಿಯವರೆಗೆ ಬಿಬಿಎಂಪಿಯ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. 7,734 ಉದ್ದಿಮೆಗಳ ಮಾಲಿಕರು ನಾಮಫಲಕದಲ್ಲಿ ಶೇ 60ರಷ್ಟುಕನ್ನಡ ಬಳಕೆ ಮಾಡಿಕೊಂಡಿದ್ದಾರೆ. 13,575 ಉದ್ದಿಮೆದಾರರು ಪಾಲಿಕೆ ಆದೇಶದಂತೆ ಕನ್ನಡ ಬಳಕೆ ಮಾಡಿಲ್ಲ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಪಾಲಿಕೆ ಆದೇಶದಂತೆ ಎಲ್ಲ ಉದ್ದಿಮೆದಾರರು ಶೇ.60ರಷ್ಟುಕನ್ನಡ ಬಳಕೆ ಮಾಡಿದ ನಾಮಫಲಕ ಅಳವಡಿಸಬೇಕು. ತಪ್ಪಿದ್ದಲ್ಲಿ ಬಿಬಿಎಂಪಿ ನೋಟಿಸ್‌ ನೀಡಿ ಸೂಕ್ತ ಕ್ರಮ ಕೈಗೊಳ್ಳಲಿದೆ. ಈಗಾಗಲೇ 13 ಸಾವಿರ ವ್ಯಾಪಾರಿಗಳಿಗೆ ನೋಟಿಸ್‌ ನೀಡಲಾಗಿದೆ. ತಪಾಸಣೆ ಕಾರ್ಯವನ್ನು ಪಾಲಿಕೆ ಅಧಿಕಾರಿಗಳು ಮುಂದುವರಿಸಲಿದ್ದಾರೆ.

-ಬಿ.ಎಚ್‌.ಅನಿಲ್‌ಕುಮಾರ್‌, ಬಿಬಿಎಂಪಿ ಆಯುಕ್ತ.