Karnataka Politics: ಜೆಡಿಎಸ್‌ಗೆ ಸ್ವತಂತ್ರ ಅಧಿಕಾರ ನೀಡಿ : ಎಚ್ಡಿಕೆ
ತುಮಕೂರು ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಪಂಚರತ್ನ ಯಾತ್ರೆಗೆ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.
ತುಮಕೂರು (ಡಿ. 30 ) : ತುಮಕೂರು ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಪಂಚರತ್ನ ಯಾತ್ರೆಗೆ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.
ಗ್ರಾಮಾಂತರ ಕ್ಷೇತ್ರದ ಹೆಬ್ಬೂರಿನಲ್ಲಿ 1 ಗಂಟೆಗೆ ಪಂಚರತ್ನ ರಥಯಾತ್ರೆ ಪ್ರಾರಂಭವಾಯಿತು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ನೆರೆದಿದ್ದ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಿ ರಾಜ್ಯದ ಜನರ ಬದುಕನ್ನು ಕಟ್ಟಿಕೊಂಡುವ ಸಲುವಾಗಿ ಪಂಚರತ್ನ ಯೋಜನೆಯನ್ನು ತರಲು ಬಯಸಿದ್ದು ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ (JDS) ಪಕ್ಷಕ್ಕೆ ಸ್ವತಂತ್ರವಾಗಿ ಅಧಿಕಾರ ನೀಡುವಂತೆ ತಮ್ಮಲ್ಲಿ ಮನವಿ ಮಾಡಲು ಬಂದಿದ್ದೇನೆ. ಪ್ರತಿ ಗ್ರಾಮ ಪಂಚಾಯತಿಗೆ ಒಂದರಂತೆ ಹೈಟೆಕ್ ಆಸ್ಪತ್ರೆ ಸ್ಥಾಪಿಸಿ ಐದು ಜನ ನುರಿತ ವೈದ್ಯರು ಮೂವತ್ತು ಜನ ಸಿಬ್ಬಂದಿ ಒಳಗೊಂಡ ಆಸ್ಪತ್ರೆ ಇದಾಗಲಿದೆ .ಈ ಆಸ್ಪತ್ರೆಯಿಂದ ಎಲ್ಲಾ ವರ್ಗದ ಜನರಿಗೆ ಉಚಿತವಾಗಿ ಚಿಕಿತ್ಸೆ ದೊರಕಲಿದೆ ಎಂದರು.
ವಿದ್ಯಾಭ್ಯಾಸ ಎನ್ನುವುದು ವ್ಯಾಪಾರ ಮಾಡಿಕೊಂಡಿದ್ದಾರೆ. ಇದನ್ನು ಅರಿತು ಎಲ್ಲಾ ವರ್ಗದ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುವ ಸಲುವಾಗಿ ಖಾಸಗಿ ಶಾಲೆಯನ್ನು ಮೀರಿಸುವಂತ ಸರ್ಕಾರಿ ಶಾಲೆಗಳನ್ನು ಪ್ರಾರಂಭಿಸಲಾಗುವುದು. ಯುವಕರು ಹಾಗೂ ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವಂತೆ ಆರ್ಥಿಕ ನೆರವು ನೀಡಲಾಗುವುದು. ರೈತರು ಸಾಲಗಾರ ಆಗಬಾರದೆಂದು ರೈತರು ಬೆಳೆಯುವ ಬೆಳೆಗೆ ಉತ್ತಮ ಬೆಂಬಲ ಬೆಲೆ ನೀಡುವ ಯೋಜನೆ ಇದಾಗಲಿದೆ. ವಸತಿ ರಹಿತ ಕುಟುಂಬಗಳನ್ನು ಗುರುತಿಸಿ ಉಚಿತವಾಗಿ ವಸತಿ ಆಸರೆ ನೀಡಲಾಗುವ ಯೋಜನೆಯೇ ಪಂಚರತ್ನ ಯೋಜನೆ ಎಂದು ಕುಮಾರಸ್ವಾಮಿ ತಿಳಿಸಿದರು.
ಗ್ರಾಮಾಂತರ ಕ್ಷೇತ್ರಕ್ಕೆ ಮತ್ತೊಮ್ಮೆ ಗೌರಿಶಂಕರ್:
ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್ ಮೈತ್ರಿ ಸರ್ಕಾರದಲ್ಲಿ ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ. ಸದಾ ನಿಮ್ಮಗಳ ಜೊತೆ ಇದ್ದು ನಿಮ್ಮ ಕಷ್ಟಸುಖದಲ್ಲಿ ಭಾಗಿಯಾಗುವ ಮೂಲಕ ನಿಮ್ಮ ಮನೆಮಗನಂತೆ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಒಂದೂವರೆ ಲಕ್ಷ ಫುಡ್ ಕಿಚ್ ವಿತರಣೆ ಮಾಡಿ ನಿಮ್ಮಗಳ ಜೊತೆ ಸದಾ ಇದ್ದಾರೆ. ಇಂತಹ ಯುವಕ ಉತ್ಸಾಹಿಯನ್ನು ಗ್ರಾಮಾಂತರ ಕ್ಷೇತ್ರದ ಜನರು ಮತ್ತೊಮ್ಮೆ ಆಶೀರ್ವದಿಸಬೇಕು ಎಂದು ಕುಮಾರಸ್ವಾಮಿ ಅವರು ನೆರೆದಿದ್ದ ಜನರಲ್ಲಿ ಮನವಿ ಮಾಡಿದರು.
ಹೆಬ್ಬೂರಿನಲ್ಲಿ ಸಹಸ್ರ ಸಂಖ್ಯೆಯಲ್ಲಿ ಕಾರ್ಯಕರ್ತರು, ರೈತರು, ಪಕ್ಷದ ಮುಖಂಡರು ಭಾಗವಹಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರನ್ನು ಸ್ವಾಗತಿಸಿದರು.
ಮಣ್ಣಿನ ಮಕ್ಕಳು ಎನ್ನುವ ಕಾರಣಕ್ಕೆ ಮಣ್ಣಿನ ಹಾರವನ್ನು ಕ್ರೈನ್‌ನಲ್ಲಿ ಹಾಕಿ ಸ್ವಾಗತಿಸಿದ್ದು ವಿಶೇಷವಾಗಿತ್ತು. ನಂತರ ಹೊನ್ನುಡಿಕೆ ಹ್ಯಾಂಡ್ ಪೋಸ್ವ್ ಮಾರ್ಗವಾಗಿ ಗೂಳೂರಿಗೆ ಪಂಚರತ್ನ ರಥಯಾತ್ರೆ ತಲುಪಿತು. ಗೂಳೂರು ಜಿಲ್ಲಾ ಪಂಚಾಯತ್ ಜೆಡಿಎಸ್ ಉಸ್ತುವಾರಿ ಪಾಲನೇತ್ರಯ್ಯ ಅವರ ನೇತೃತ್ವದಲ್ಲಿ ಸುಪ್ರಸಿದ್ಧ ಗೂಳೂರು ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕುಮಾರಸ್ವಾಮಿ ಅವರಿಗೆ ಗಣೇಶನ ಪ್ರಿಯ ಕರ್ಜಿಕಾಯಿ ಹಾರವನ್ನು ಕ್ರೇನ್‌ನಲ್ಲಿ ಹಾಕಿ ವಿಶೇಷ ಹಾಗೂ ವಿಭಿನ್ನವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಗೌರವ ಸಮರ್ಪಣೆ ಮಾಡಿದರು.
ಗಮನಸೆಳೆದ ಹಾರಗಳು:
2023ರ ವಿಧಾನಸಭಾ ಚುನಾವಣೆಯ ಪ್ರಚಾರ ತಂತ್ರದ ಭಾಗವಾಗಿ ಜೆಡಿಎಸ್ ನಡೆಸುತ್ತಿರುವ ಪಂಚರತ್ನ ರಥಯಾತ್ರೆ ವಿಭಿನ್ನ ಬಗೆಯ ಬೃಹತ್ ಗಾತ್ರದ ಹಾರಗಳ ಮೂಲಕ ರಾಜ್ಯದ ಜನರ ಗಮನ ಸೆಳೆಯುತ್ತಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆದ ಪಂಚರತ್ನ ರಥಯಾತ್ರೆ 33ನೇ ದಿನಕ್ಕೆ ಕಾಲಿಟ್ಟಿದ್ದು, ನೇಗಿಲ ಹಾರ, ಕಾಸಿನ ಹಾರ, ಮಣ್ಣಿನ ಹಾರ, ಹೂವಿನ ಹಾರ, ಹಲಸಿನ ಹಣ್ಣಿನ ಹಾರ, ಕಬ್ಬಿನ ಹಾರ,ಕೊಬ್ಬರಿ ಹಾರ, ಅಡಿಕೆ ಹೊಂಬಾಳೆ ಹಾರ, ಕರ್ಜಿಕಾಯಿ ಹಾರ, ಎಲ…ಇಡಿ ಹಾರ ಈಗೆ ಹಲವು ಬಗೆಯ ಹತ್ತಾರು ಬೃಹತ್ ಹಾರಗಳನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹಾಕುವ ಮೂಲಕ ಸ್ವಾಗತಿಸಲಾಯಿತು.