.‘ಕೊಬ್ಬರಿಗೆ .20000 ಬೆಂಬಲ ಬೆಲೆ ನೀಡಿ’ : ಕೊಬ್ಬರಿ ಬೆಳೆಗಾರರ ಸಮಿತಿ
ಕ್ವಿಂಟಲ್ ಕೊಬ್ಬರಿಗೆ 20 ಸಾವಿರ ರು. ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹ ಹಾಗೂ ಸರ್ಕಾರದ ರೈತ ವಿರೋಧಿ ಮತ್ತು ತಾತ್ಸಾರ ಧೋರಣೆಯನ್ನು ಖಂಡಿಸಿ ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ ವತಿಯಿಂದ ಫೆ. 20ರ ಸೋಮವಾರ ಬೆಳಗ್ಗೆ 10.30ಕ್ಕೆ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಬಿ. ಯೋಗೀಶ್ವರಸ್ವಾಮಿ ತಿಳಿಸಿದರು.
ತಿಪಟೂರು : ಕ್ವಿಂಟಲ್ ಕೊಬ್ಬರಿಗೆ 20 ಸಾವಿರ ರು. ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹ ಹಾಗೂ ಸರ್ಕಾರದ ರೈತ ವಿರೋಧಿ ಮತ್ತು ತಾತ್ಸಾರ ಧೋರಣೆಯನ್ನು ಖಂಡಿಸಿ ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ ವತಿಯಿಂದ ಫೆ. 20ರ ಸೋಮವಾರ ಬೆಳಗ್ಗೆ 10.30ಕ್ಕೆ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಬಿ. ಯೋಗೀಶ್ವರಸ್ವಾಮಿ ತಿಳಿಸಿದರು.
ನಗರದ ಎಪಿಎಂಸಿ ರೈತ ಭವನದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರೈತ ಸಂಘಟನೆಗಳು ಕೊಬ್ಬರಿಗೆ ಬೆಂಬಲ ಬೆಲೆಯನ್ನು ಏರಿಸಬೇಕೆಂದು ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಲೇ ಬರುತ್ತಿವೆ. ಕೇಂದ್ರ ಸರ್ಕಾರ ಪುಡಿಗಾಸಿನ ಆಸೆ ತೋರಿಸಿದೆ. ಆದರೆ ರಾಜ್ಯ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಾ ಕೊಬ್ಬರಿ ಬೆಲೆ ಬಗ್ಗೆ ಚಕಾರವೆತ್ತುತ್ತಿಲ್ಲ. ತಿಪಟೂರು ಕೊಬ್ಬರಿಗೆ ದೇಶಾದ್ಯಂತ ಬೇಡಿಕೆ ಇದ್ದರೂ ಬೆಲೆ ಮಾತ್ರ ಇಳಿಕೆಯಾಗುತ್ತಲೇ ಇದೆ. ಸರ್ಕಾರಗಳಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದಂತಾಗಿದ್ದು ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಇನ್ಯಾರೋ ಬೆಲೆ ನಿಗದಿ ಮಾಡುತ್ತಿದ್ದು ಇದರಿಂದ ರೈತ ಅತಂತ್ರಸ್ಥಿತಿ ತಲುಪಿದ್ದಾನೆ ಎಂದರು.
ಸಮಿತಿ ಕಾರ್ಯದರ್ಶಿ ಎಸ್.ಎನ್. ಸ್ವಾಮಿ ಮಾತನಾಡಿ, ಸರ್ಕಾರದ ತೋಟಗಾರಿಕಾ ಇಲಾಖೆಯ ಕಾರ್ಯದರ್ಶಿಗಳೇ 16,700 ರು.ಗೆ ಕೊಬ್ಬರಿ ಬೆಲೆ ಹೆಚ್ಚಳ ಮಾಡಬೇಕೆಂದು ಹೇಳಿದರೂ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ. ಕೊಬ್ಬರಿಗೆ ಕನಿಷ್ಠ 20 ಸಾವಿರ ಬೆಂಬಲ ಬೆಲೆ ನಿಗದಿ ಮಾಡಬೇಕು ಹಾಗೂ ರಾಜ್ಯ ಸರ್ಕಾರ 5 ಸಾವಿರ ರು. ಪೋ›ತ್ಸಾಹ ಧನ ಕೊಡಬೇಕೆಂದು ಪ್ರತಿಭಟನೆ ಹಮ್ಮಿಕೊಂಡಿದ್ದು ಅರಸೀಕೆರೆ ಸೇರಿದಂತೆ ವಿವಿಧ ಭಾಗಗಳಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಸಮಿತಿ ಸಹ ಕಾರ್ಯದರ್ಶಿ ಜಯಚಂದ್ರ ಶರ್ಮ ಮಾತನಾಡಿ, ರೈತ ಸಾಲ ಮಾಡಿ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡದೆ ಅವರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ಈ ಬಾರಿ ಬಜೆಟ್‌ನಲ್ಲಿ ಅಡಿಕೆ ಮತ್ತು ರಾಗಿಗೆ ಬೆಂಬಲ ಬೆಲೆ ನೀಡಿದರೂ ಕೊಬ್ಬರಿ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದರೂ ತೆಂಗುಬೆಳೆಗಾರರ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಸರ್ಕಾರ ರೈತರಿಗೆ ಶೂನ್ಯ ಕೊಡುಗೆ ನೀಡಿದ್ದು ಮುಂದಿನ ದಿನಗಳಲ್ಲಿ ರೈತರೇ ಪಾಠ ಕಲಿಸಲಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.ದ
ಸುದ್ದಿಗೋಷ್ಠಿಯಲ್ಲಿ ಅರಸೀಕೆರೆ ಉಪಾಧ್ಯಕ್ಷ ಮಧುಸೂದನ್, ತಾಲೂಕು ಉಪಾಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ, ಸಹ ಕಾರ್ಯದರ್ಶಿ ಸಿದ್ದಯ್ಯ, ಚಿದಾನಂದ್ ಬಳುವನೇರಲು, ಯೋಗಾನಂದಸ್ವಾಮಿ, ದೇವರಾಜು ತಿಮ್ಲಾಪುರ, ಎಸ್. ಪ್ರಕಾಶ್ ಮತ್ತಿತರರಿದ್ದರು.