ವಿಜಯಪುರ(ಅ.2): ನೆರೆ ಪ್ರವಾಹದಿಂದ ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ನಷ್ಟವಾಗಿದ್ದು, ಉತ್ತರ ಕರ್ನಾಟಕ ಭಾಗಕ್ಕೆ ಕನಿಷ್ಠ 5000 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾ​ಯಿಸಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಧಾನಿಗೆ ಪತ್ರ ಬರೆ​ದಿ​ದ್ದಾರೆ.

ಇತ್ತೀಚೆಗೆ ಕರ್ನಾಟಕದಲ್ಲಿ ನೆರೆ ಪ್ರವಾಹ ಹಾಗೂ ಮಳೆಯಿಂದ ಅತಿವೃಷ್ಟಿಯಾ​ಗಿ, ಜನಜೀವನ ಅಸ್ತವ್ಯಸ್ತವಾಗಿರುವುದು ತಮ್ಮ ಗಮನಕ್ಕೆ ಬಂದಿದೆ. ಕರ್ನಾಟಕದಲ್ಲಿ ಅದರಲ್ಲೂ ಅತೀ ಹೆಚ್ಚು ಉತ್ತರ ಕರ್ನಾಟಕದಲ್ಲಿ ಮಳೆಯಿಂದ ಅತಿವೃಷ್ಟಿಯಾ​ಗಿದೆ. ಮಳೆಯಿಂದ ಗ್ರಾಮೀಣ ಭಾಗದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಯಿತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ರೈತರು ಈ ಮೊದಲು ಬರಗಾಲದಿಂದ ತತ್ತರಿಸಿ ಹೋಗಿದ್ದರು. ಈಗ ಅತಿವೃಷ್ಟಿಯಿಂದ ಅಲ್ಪ ಸ್ವಲ್ಪ ಬೆಳೆದ ಬೆಳೆಯೂ ನಾಶವಾಯಿತು. ಬೆವರು ಹರಿಸಿ ದುಡಿದ ಬೆಳೆ ನೀರಿನಲ್ಲಿ ನಿಂತಿತು. ಬರಗಾಲ, ಅತಿವೃಷ್ಟಿಯ ಹೊಡೆತದಿಂದಾಗಿ ಅನ್ನದಾತರು ಬೀದಿಗೆ ಬಂದಿದ್ದಾರೆ ಎಂದು ತಿಳಿಸಿದ್ದಾರೆ.

ಶಾಲಾ ಮಕ್ಕಳು, ರೈತರು ತಮ್ಮ ಮನೆಯಲ್ಲಿದ್ದ ಜಮೀನಿನ ಕಾಗದ ಪತ್ರಗಳು, ಶಾಲಾ ಪ್ರಮಾಣಪತ್ರಗಳು, ದವಸ ಧಾನ್ಯಗಳು ನೀರು ಪಾಲಾದವು. ಮನೆಯಲ್ಲಿ ಸಾಕಿದ್ದ ದನಕರುಗಳನ್ನು ಬಿಟ್ಟು ಬಂದರು. ಅವುಗಳು ಕೂಡ ಜೀವ ಕಳೆದುಕೊಂಡವು. ಗಂಜಿಕೇಂದ್ರಗಳಲ್ಲಿ ವಾಸಿಸುವ ಪ್ರಸಂಗ ಬಂತು. ಮಕ್ಕಳ ಮದುವೆಗೆ ಕೂಡಿಟ್ಟಹಣ ನೀರು ಪಾಲಾಯಿತು. ಹೀಗೆ ನಾನಾ ಸಮಸ್ಯೆಗಳನ್ನು ಸಂತ್ರಸ್ತರು ಎದುರಿಸಿದರು ಎಂದು ತಿಳಿಸಿದ್ದಾರೆ.

ಉತ್ತರ ಕರ್ನಾಟಕ ಭಾಗದ ಜನರು ಮೋದಿ ಮೇಲೆ ಅಪಾರ ಅಭಿಮಾನ, ವಿಶ್ವಾಸ ಹೊಂದಿದ್ದಾರೆ. ಈ ಕಾರಣದಿಂದಾಗಿಯೇ ರಾಜ್ಯದಲ್ಲಿ 25 ಜನ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಆದರೆ ಕೇಂದ್ರ ಸರ್ಕಾರದಿಂದ ಅಗತ್ಯ ಪರಿಹಾರ ಹಣ ಮಂಜೂರಾಗದ ಹಿನ್ನೆಲೆಯಲ್ಲಿ ನೆರೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಆದ್ದರಿಂದ ತಾವು ಈ ಭಾಗದ ಪರವಾಗಿರುವ ರೈತರ, ಸಾರ್ವಜನಿಕರ ಈ ಅಭಿಮಾನ ಗುರ್ತಿಸಿ, ಉತ್ತರ ಕರ್ನಾಟಕ ಭಾಗಕ್ಕೆ ಕನಿಷ್ಠ .5 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದು ಪತ್ರದಲ್ಲಿ ಯತ್ನಾಳ ಆಗ್ರಹಿಸಿದ್ದಾರೆ.